ತೆಲುಗು ನಟ ರವಿತೇಗೆ 2026ರ ಹೊಸ ವರ್ಷ, ಸಂಕ್ರಾಂತಿ ಹಬ್ಬ ಶುಭ ತಂದಿದೆ. ಇದೇ ಸುಗ್ಗಿಹಬ್ಬಕ್ಕೆ ರಿಲೀಸ್ ಆಗಿದ್ದ ನಟನ ‘ಭರ‌್ತ ಮಹಾಶಯಲಕು ವಿಜ್ಞಪ್ತಿ’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಮೂಲಕ ಹೊಸವರ್ಷದಲ್ಲೇ ಶುಭಾರಂಭ ಮಾಡಿರುವ ರವಿತೇಜ ಸದ್ಯ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸೋಮವಾರ (ಜ. 26) ಅವರು 57ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ವೃತ್ತಿ ಜೀವನದ 77ನೇ ಸಿನಿಮಾ ಘೋಷಿಸಿದ್ದಾರೆ. ಚಿತ್ರಕ್ಕೆ ‘ಇರುಮುಡಿ’ ಎಂದು ಶೀರ್ಷಿಕೆ ನಿಗದಿಗೊಳಿಸಲಾಗಿದೆ. ಸ್ಟ್ ಲುಕ್ ಪೋಸ್ಟರ್‌ನಲ್ಲಿ ರವಿತೇಜ ಅಯ್ಯಪ್ಪಸ್ವಾಮಿ ಭಕ್ತನಾಗಿ ಇರುಮುಡಿ ಹೊತ್ತು ಸಂಭ್ರಮಿಸಿದ್ದಾರೆ. ಇದೊಂದು ಅಯ್ಯಪ್ಪ ಸ್ವಾಮಿ ಭಕ್ತನ ಜತೆಗೆ ತಂದೆ ಮತ್ತು ಮಗಳ ಬಾಂಧವ್ಯದ ಕಥೆಯಾಗಿದೆ. ಈ ಚಿತ್ರಕ್ಕೆ ‘ಮಜಿಲಿ’ ಖ್ಯಾತಿಯ ಶಿವ ನಿರ್ವಾಣ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ‘ಜೀಬ್ರಾ’ ನಟಿ ಪ್ರಿಯಾ ಭವಾನಿ ಶಂಕರ್ ನಾಯಕಿಯಾಗಿದ್ದು, ಬೇಬಿ ನಕ್ಷತ್ರ ಮುಖ್ಯಪಾತ್ರದಲ್ಲಿದ್ದಾರೆ. ‘ಕೆಲವು ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಜೀವನದಲ್ಲಿ ಮುಖ್ಯವಾಗುತ್ತದೆ. ಅಂತಹ ಕಥೆಯನ್ನು ನಾನೀಗ ಆಯ್ಕೆ ಮಾಡಿಕೊಂಡ ಖುಷಿಯಿದೆ. ಅಂತಿಮವಾಗಿ ನಂಬಿಕೆಯೇ ನಮ್ಮ ದಾರಿಯನ್ನು ಸುಗಮಗೊಳಿಸುತ್ತದೆ’ ಎಂದು ಚಿತ್ರದ ಬಗ್ಗೆ ರವಿತೇಜ ಸಂತಸ ಹಂಚಿಕೊಂಡಿದ್ದಾರೆ. ಅಂದಹಾಗೆ, ನಟನ 78ನೇ ಚಿತ್ರ ಶೀಘ್ರವೇ ಘೋಷಣೆಯಾಗಲಿದ್ದು, ಕಲ್ಯಾಣ್ ಶಂಕರ್ ನಿರ್ದೇಶಿಸಲಿದ್ದಾರೆ. -ಏಜೆನ್ಸೀಸ್