

ಬೆಂಗಳೂರು: ಡಬ್ಬಿಂಗ್ ಕಲಾವಿದನಾಗಿ, ಕಿರುತೆರೆ ನಟನಾಗಿ ಪರಿಚಿತರಾಗಿರುವ ಯಶವಂತ್ ಬಿಜೂರ್ ಕಥೆ, ಚಿತ್ರಕಥೆ ಬರೆದು ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ಸಿನಿಮಾ "ವಿದೂಷಕ'. ಇದೊಂದು ಕಾಮಿಡಿ ಕ್ರೈಮ್ ಥ್ರಿಲ್ಲರ್ ಜಾನರ್ ಚಿತ್ರವಾಗಿದ್ದು ರವಿ ಸಾಲಿಯಾನ್, ಅರವಿಂದ್ ರಾವ್ ಮತ್ತು ಅಮೃತ್ತಾ ಉಪ್ಪಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು. ನಿರ್ದೇಶಕ ಯಶವಂತ್ ಬಿಜೂರ್, "ಸಿನಿಮಾ ಮಾಡಬೇಕೆಂಬ ಬಹು ವರ್ಷಗಳ ಕನಸು "ವಿದೂಷಕ' ಮೂಲಕ ಈಡೇರಿದೆ. ಈ ಸಿನಿಮಾ ಮೂರು ವರ್ಷಗಳ ಪಯಣ. ಚಿತ್ರೀಕರಣಕ್ಕೂ ಮುನ್ನವೇ ಪ್ರತಿಯೊಂದು ದೃಶ್ಯ, ಬೆಳಕು ಹಾಗೂ ದೃಶ್ಯವಿನ್ಯಾಸದ ಬಗ್ಗೆ ಯೋಜನೆ ರೂಪಿಸಿಕೊಂಡಿದ್ದೆವು. ಗೈನೋಫೋಬಿಯಾ (ಮಹಿಳೆಯರನ್ನು ಕಂಡರೆ ಭಯಪಡುವ) ಕಾಯಿಲೆಯಿಂದ ಬಳಲುವ ನಾಯಕನ ಸುತ್ತ ಕಥೆ ಸಾಗುತ್ತದೆ. ನೈಜ ಟನೆಯಿಂದ ಪ್ರೇರಣೆ ಪಡೆದು ಈ ಕಥೆ ರೂಪಿಸಲಾಗಿದೆ' ಎಂದು ಮಾಹಿತಿ ನೀಡುತ್ತಾರೆ.
ನಾಯಕಿ ಅಮೃತಾ ಉಪ್ಪಾರ್, "ನಾನು ಮೂಲತಃ ಪತ್ರಕರ್ತೆ. ನಂತರ ಕಿರುತೆರೆಯಲ್ಲಿ ಕೆಲ ಧಾರಾವಾಹಿಗಳಲ್ಲಿ ನಟಿಸಿದೆ. ಇದೀಗ "ವಿದೂಷಕ' ಮೂಲಕ ನಾಯಕಿಯಾಗಿದ್ದೇನೆ' ಎಂದು ಸಂತಸ ಹಂಚಿಕೊಂಡರು. ರವಿ, ಅರವಿಂದ್, ಅಮೃತಾ ಜತೆ ಹೆದ್ದೂರು ಮಂಜುನಾಥ್ ಶೆಟ್ಟಿ, ನಿಪುಣ್, ಸುಹಾಸ್ ತಾರಾಗಣದಲ್ಲಿದ್ದಾರೆ. ನಾಗೇಂದ್ರ ಅರಸ್ ಸಂಕಲನ, ಪರಮೇಶ್ವರ್ ಛಾಯಾಗ್ರಹಣದಲ್ಲಿ ಮೂಡಿಬಂದಿದ್ದು, ಇದೇ 20ರಂದು ಸಿನಿಮಾ ರಿಲೀಸ್ ಆಗಲಿದೆ.