ರಾಶಿ ಪೋಸ್ಟರ್
ರಾಶಿ ಪೋಸ್ಟರ್

RASHI MOVIE REVIEW: ಬದುಕಿನ ರಾಶಿ ಪ್ರೀತಿ ಮತ್ತು ಸಂದಿಗ್ಧತೆ

ಹಳ್ಳಿಯಿಂದ ನಗರಕ್ಕೆ ಬರುವ ಹುಡುಗನ ಜೀವನ ಹಾದಿಯ ಸಿನಿಮಾಗಳು ಈಗಾಗಲೇ ಸಾಕಷ್ಟು ಬಂದಿವೆ. ಅದರಲ್ಲಿ ‘ರಾಶಿ’ ಕೂಡ ಒಂದು ಸೇರ್ಪಡೆಯಷ್ಟೇ. ಅದರ ಮಧ್ಯೆ, ಚಿತ್ರದ ಕಥೆಯಲ್ಲಿ ನವಿರಾದ ಪ್ರೀತಿ ಹಾಗೂ ತಂದೆ-ತಾಯಿ, ಮಗನ ನಡುವಿನ ಕ್ಲೈಮ್ಯಾಕ್ಸ್ ಸನ್ನಿವೇಶ ಗಮನ ಸೆಳೆಯುತ್ತದೆ.
Published on: 
RASHI MOVIE REVIEW(3 / 5)

ಚಿತ್ರ: ರಾಶಿ

ನಿರ್ದೇಶನ: ವಿಜಯ್ ಪಾಳೇಗಾರ್

ತಾರಾಗಣ: ಆದಿತ್ಯ ಶಶಿಕುಮಾರ್, ಸಮೀಕ್ಷಾ, ರಮೇಶ್ ಇಂದಿರಾ, ತಬಲಾ ನಾಣಿ, ವೀಣಾ ಸುಂದರ್ ಮತ್ತಿತರರು.

ಪಿಯುಸಿಯಲ್ಲಿ ಪಾಸಾಗಿ ಇಡೀ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿರುವ ಬುದ್ಧಿವಂತ ಹುಡುಗ ಶಿವು (ಆದಿತ್ಯ). ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ ಆತನಿಗೆ ಮುಂದಿನ ವಿದ್ಯಾಭ್ಯಾಸವೇ ಅನಿಶ್ಚತವಾಗಿದೆ. ಹಾಲು ಮಾರಿ ಮನೆ ಸಾಗಿಸುವ ತಾಯಿ, ದಿನ ನಿತ್ಯ ಕುಡಿದು ಬರುವ ತಂದೆ. ಈ ಸಂದಿಗ್ಧತೆಯಲ್ಲಿ ಓದು ನಿಲ್ಲಿಸಿ, ಮನೆಗೆ ಆಸರೆಯಾಗೋಣ ಎನ್ನುವಷ್ಟರಲ್ಲಿ ಊರಿನ ಮೇಷ್ಟ್ರು ನೆರವಿನಿಂದ ಶಿವು ಸಿಟಿ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಳ್ಳುತ್ತಾನೆ. ವಿದ್ಯಾಭ್ಯಾಸಕ್ಕೆಂದು ನಗರಕ್ಕೆ ತೆರಳುವ ಆತನಿಗೆ ಕಾಲೇಜಿನ ಮೊದಲ ದಿನವೇ ರಾಧ್ಯಾ (ಸಮೀಕ್ಷಾ) ಮೇಲೆ ಪ್ರೀತಿ ಚಿಗುರೊಡೆಯುತ್ತದೆ. ಅದನ್ನು ಆಕೆಯ ಬಳಿ ಹೇಳಿಕೊಳ್ಳುತ್ತಾನೆ. ಆದರೆ, ಆಕೆ ನಿರಾಕರಿಸುತ್ತಾಳೆ. ಓದಲು ಹೋಗಿರುವ ಮಗ, ಹಾದಿ ತಪ್ಪಿದ್ದಾನೆ ಎಂಬ ವಿಷಯ ತಿಳಿದ ತಾಯಿ, ಶಿವುನನ್ನು ಕರೆಸಿ ಬುದ್ಧಿವಾದ ಹೇಳುತ್ತಾಳೆ. ಆತ ವ್ಯಾಸಂಗದತ್ತ ಗಮನಹರಿಸಬೇಕು ಎನ್ನುವಷ್ಟರಲ್ಲಿ ಮರಳಿ ಬರುವ ರಾಧ್ಯಾ, ಈ ಬಾರಿ ಶಿವು ಬಳಿ ತಾನೇ ಪ್ರೇಮ ನಿವೇದಿಸಿಕೊಳ್ಳುತ್ತಾಳೆ. ಒಂದೆಡೆ ಪ್ರೀತಿ, ಇನ್ನೊಂದೆಡೆ ಬದುಕು ಕಟ್ಟಿಕೊಳ್ಳುವ ತವಕ. ಈ ಎರಡು ಸಂದಿಗ್ಧತೆಯಲ್ಲಿ ವಿಜಯ್ ಪಾಳೇಗಾರ್ ನಿರ್ದೇಶನದ ‘ರಾಶಿ’ ಚಿತ್ರದ ಕಥೆ ಮುಂದುವರಿಯುತ್ತದೆ.

ಹಳ್ಳಿಯಿಂದ ನಗರಕ್ಕೆ ಬರುವ ಹುಡುಗನ ಜೀವನ ಹಾದಿಯ ಸಿನಿಮಾಗಳು ಈಗಾಗಲೇ ಸಾಕಷ್ಟು ಬಂದಿವೆ. ಅದರಲ್ಲಿ ‘ರಾಶಿ’ ಕೂಡ ಒಂದು ಸೇರ್ಪಡೆಯಷ್ಟೇ. ಅದರ ಮಧ್ಯೆ, ಚಿತ್ರದ ಕಥೆಯಲ್ಲಿ ನವಿರಾದ ಪ್ರೀತಿ ಹಾಗೂ ತಂದೆ-ತಾಯಿ, ಮಗನ ನಡುವಿನ ಕ್ಲೈಮ್ಯಾಕ್ಸ್ ಸನ್ನಿವೇಶ ಗಮನ ಸೆಳೆಯುತ್ತದೆ. 142 ನಿಮಿಷ ದೀರ್ಘ ಅನಿಸುತ್ತದೆ. ಕೆಲವು ಅನವಶ್ಯಕ ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ, ಚಿತ್ರದ ಕಥೆಯಲ್ಲಿ ಮತ್ತಷ್ಟು ಗಟ್ಟಿತನ ಕಾಣಬಹುದಿತ್ತು. ಶಶಿಕುಮಾರ್ ಪುತ್ರ ಆದಿತ್ಯ ಮೌನ, ಆಂತರಿಕ ಭಾವನೆಗಳನ್ನು ಕ್ಯಾಮರಾ ಮುಂದೆ ಸರಿಯಾಗಿ ತೋರಿಸಿದ್ದಾರೆ. ಸಮೀಕ್ಷಾ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಮೊದಲಿಗೆ ನಗಿಸುವ ತಬಲಾ ನಾಣಿ ಪಾತ್ರ ಕ್ಲೈಮ್ಯಾಕ್ಸ್‌ನಲ್ಲಿ ಗಂಭೀರವಾಗುತ್ತದೆ. ಖಳನಾಯಕ ರಮೇಶ್ ಇಂದಿರಾ ಮತ್ತು ನಾಯಕ ನಟ ಮುಖಾಮುಖಿಯಾಗದಿರುವುದೇ ಚಿತ್ರದ ಕೊರತೆ ಅನಿಸುತ್ತದೆ.