ಬೆಂಗಳೂರು : ಇದು ಎಐ (ಕೃತಕ ಬುದ್ದಿಮತ್ತೆ) ಕಾಲ. ವೈದ್ಯಕೀಯ, ರಕ್ಷಣೆ ಸೇರಿ ನಾನಾ ಕ್ಷೇತ್ರಗಳಲ್ಲಿ ಇಂದು ಕೃತಕ ಬುದ್ಧಿಮತ್ತೆ ಪಾರಮ್ಯ ಸಾಧಿಸುತ್ತಿದ್ದು, ಅಷ್ಟೇ ಅಲ್ಲದೇ ಸಿನಿಮಾ ಕ್ಷೇತ್ರವನ್ನು ಪ್ರವೇಶಿಸಿದೆ. ಈ ಮೊದಲು ಸಾಂಗ್ ರೆಕಾರ್ಡಿಂಗ್, ಪೋಸ್ಟರ್ ಸೇರಿ ಕೆಲ ದೃಶ್ಯಗಳಿಗೆ ಮಾತ್ರ ಎಐ ಸ್ಪರ್ಶ ನೀಡಲಾಗುತ್ತಿತ್ತು. ಇದೀಗ ಕಾಲ ಬದಲಾಗಿದ್ದು, ಮುಂದುವರಿದ ತಂತ್ರಜ್ಞಾನವನ್ನು ಬಳಸಿಕೊಂಡು ಹಲವು ತಂಡಗಳು ಸಂಪೂರ್ಣ ಎಐ ಸಿನಿಮಾಗಳನ್ನು ಸೃಷ್ಟಿಸುತ್ತಿವೆ. ಈ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವಲ್ಲಿ ಪರಭಾಷೆಗಳಿಗೆ ಹೋಲಿಸಿದರೆ, ಕನ್ನಡ ನಿರ್ದೇಶಕರು ಮುಂದಿದ್ದಾರೆ. ಕಳೆದ ವರ್ಷ ಕನ್ನಡದಲ್ಲಿ ‘ಲವ್ ಯೂ’ ಎಂಬ ಎಐ ಚಿತ್ರ ತೆರೆಕಂಡಿತ್ತು. ಅದರ ಬೆನ್ನಲ್ಲೇ ಹಲವು ತಂಡಗಳು ಎಐ ಬಳಸಿಕೊಂಡು ಸಿನಿಮಾ ಮಾಡಲು ಮುಂದಾಗುತ್ತಿವೆ. ಇದೀಗ ಈ ಸಾಲಿಗೆ ಐತಿಹಾಸಿಕ ‘ರಾಣಿ ಚನ್ನಮ್ಮ’ ಸೇರ್ಪಡೆಗೊಳ್ಳುತ್ತದೆ. 1961ರಲ್ಲಿ ಬಿ.ಆರ್. ಪಂತುಲು ಅವರ ನಿರ್ದೇಶನದಲ್ಲಿ ‘ಕಿತ್ತೂರು ಚೆನ್ನಮ್ಮ’ಳಾಗಿ ಬಿ. ಸರೋಜಾ ದೇವಿ ಕಾಣಿಸಿಕೊಂಡಿದ್ದು, ಪತಿ ರಾಜಾ ಮಲ್ಲಸರ್ಜ ಪಾತ್ರದಲ್ಲಿ ಡಾ. ರಾಜಕುಮಾರ್ ನಟಿಸಿದ್ದರು. ಇದೀಗ ಬರೋಬ್ಬರಿ 65 ವರ್ಷಗಳ ನಂತರ ‘ರಾಣಿ ಚನ್ನಮ್ಮ’ ಬಯೋಪಿಕ್ ತೆರೆಗೆ ಬರಲು ಸಜ್ಜಾಗಿದೆ. ‘ಸಾರಾ ವಜ್ರ’ ಖ್ಯಾತಿಯ ಶ್ವೇತಾ ಶೆಟ್ಟಿ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದು, ಇತ್ತೀಚೆಗೆ ಚಿತ್ರದ ಸಣ್ಣ ಝಲಕ್ ರಿಲೀಸ್ ಮಾಡಲಾಗಿದೆ. ‘ಐತಿಹಾಸಿಕ ಸಿನಿಮಾಗಳನ್ನು ತೆರೆ ಮೇಲೆ ತರಬೇಕು ಎಂದರೆ ಸಾಕಷ್ಟು ಬಂಡವಾಳ ಬೇಕಾಗುತ್ತದೆ. ಅಷ್ಟು ದೊಡ್ಡ ಬಜೆಟ್ ನಮ್ಮ ಬಳಿ ಇರಲಿಲ್ಲವಾದರೂ ಇಂದಿನ ಪೀಳಿಗೆಗೆ ಕಿತ್ತೂರು ರಾಣಿ ಚನ್ನಮ್ಮ ಸಾಹಸವನ್ನು ತಿಳಿಸಬೇಕು ಎಂಬ ಹಂಬಲವಿತ್ತು. ಅದಕ್ಕಾಗಿ ಈ ಕಥೆಯನ್ನು ಸೃಜನಾತ್ಮಕವಾಗಿ ಎಐ ಮೂಲಕ ನಿರೂಪಿಸಲು ಮುಂದಾಗಿದ್ದೇನೆ. ಸಾಕಷ್ಟು ತಾಂತ್ರಿಕ ಸವಾಲುಗಳಿದ್ದವು. ಪ್ರಾಂಪ್ಟ್ ಮತ್ತು ಮೋಷನ್ ಕ್ಯಾಪ್ಚರ್ ಮೂಲಕ ಎಐ ಕಾರ್ಯನಿರ್ವಹಿಸುತ್ತದೆ. ಕೆಲವು ಕಡೆ ಪಾತ್ರಗಳಿಂದ ಭಾವನೆಗಳು ಸರಿಯಾಗಿ ವ್ಯಕ್ತವಾಗಿಲ್ಲ ಎಂದರೆ, ಆ ಭಾಗವನ್ನು ಚಿತ್ರೀಕರಿಸುತ್ತಿದ್ದೇವೆ. ಚಿತ್ರದ ಸುಮಾರು 70ರಷ್ಟು ಎಐ ಬಳಸಲಾಗಿದ್ದು, 30ರಷ್ಟು ಶೂಟಿಂಗ್ ಮಾಡಿದ್ದೇವೆ. ಎಐನ ಹೊಸ ಟೂಲ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಅದಕ್ಕಾಗಿ ಚೆನ್ನೈ, ಬೆಂಗಳೂರು, ಮುಂಬೈನಲ್ಲಿ ನಾಲ್ಕು ತಂಡಗಳು ಕೆಲಸ ನಿರ್ವಹಿಸುತ್ತಿವೆ’ ಎಂದು ನಿರ್ದೇಶಕಿ ಶ್ವೇತಾ ಶೆಟ್ಟಿ ಮಾಹಿತಿ ನೀಡುತ್ತಾರೆ.