ಇಂದು ರಾಮಾಯಣ ದರ್ಶನ: ವಿಶ್ವಾದ್ಯಂತ 60 ಸಾವಿರಕ್ಕೂ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಲಿದೆ ಸಿನಿಮಾ RAMAYANA

ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ರಾಮಾಯಣ: ಭಾಗ 1’ ಇಂದು ವಿಶ್ವಾದ್ಯಂತ ತೆರೆ ಕಾಣಲಿದೆ. ರಿಲೀಸ್‌ಗೂ ಮುನ್ನವೇ ಸಿನಿಮಾ ಭಾರತೀಯ ಚಿತ್ರರಂಗ ಸೇರಿ ವಿಶ್ವಮಟ್ಟದಲ್ಲಿ ಹಲವು ಮೈಲಿಗಲ್ಲುಗಳಿಗೆ ಸಾಕ್ಷಿಯಾಗಿದೆ. ಭಾರತದಲ್ಲಿ ಅಂದಾಜು 10 ಸಾವಿರ ಸೇರಿ ವಿಶ್ವಾದ್ಯಂತ ಅಂದಾಜು 60 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ramayana poster
ರಾಮಾಯಣ ಪೋಸ್ಟರ್
Published on: 

ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ರಾಮಾಯಣ: ಭಾಗ 1’ ಇಂದು ವಿಶ್ವಾದ್ಯಂತ ತೆರೆ ಕಾಣಲಿದೆ. ರಿಲೀಸ್‌ಗೂ ಮುನ್ನವೇ ಸಿನಿಮಾ ಭಾರತೀಯ ಚಿತ್ರರಂಗ ಸೇರಿ ವಿಶ್ವಮಟ್ಟದಲ್ಲಿ ಹಲವು ಮೈಲಿಗಲ್ಲುಗಳಿಗೆ ಸಾಕ್ಷಿಯಾಗಿದೆ. ಭಾರತದಲ್ಲಿ ಅಂದಾಜು 10 ಸಾವಿರ ಸೇರಿ ವಿಶ್ವಾದ್ಯಂತ ಅಂದಾಜು 60 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಭಾರತೀಯ ಸಿನಿಮಾ ಈ ದಾಖಲೆ ಮಟ್ಟದಲ್ಲಿ ರಿಲೀಸ್ ಆಗುತ್ತಿರುವುದು ಇದೇ ಮೊದಲು. ಆ ಮೂಲಕ ‘ರಾಮಾಯಣ’ ದೀಪಾವಳಿ ಹಬ್ಬದ ಸಡಗರವನ್ನು ಮತ್ತಷ್ಟು ಹೆಚ್ಚಿಸಿದೆ. ಈಗಾಗಲೇ ಅಮೆರಿಕದ ಲಾಸ್ ಏಂಜಲೀಸ್, ಲಂಡನ್ ಹಾಗೂ ಮುಂಬೈ ಸೇರಿ ಹಲವೆಡೆ ಪ್ರೀಮಿಯರ್ ಶೋ ನಡೆದಿದ್ದು, ಜಾಗತಿಕವಾಗಿಯೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮೊದಲ ದಿನವೇ ಚಿತ್ರ ಗಳಿಕೆಯಲ್ಲಿ ದಾಖಲೆ ಬರೆಯುವ ನಿರೀಕ್ಷೆಯಿದೆ. ದಕ್ಷಿಣ, ಉತ್ತರ ಭಾರತದ ಕಲಾವಿದರ ಜತೆಗೆ ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟದ ತಂತ್ರಜ್ಞರು ಕೆಲಸ ಮಾಡಿರುವುದೇ ‘ರಾಮಾಯಣ’ ಚಿತ್ರದ ಹೈಲೈಟ್. ರಣಬೀರ್ ಕಪೂರ್ (ರಾಮ), ಸಾಯಿ ಪಲ್ಲವಿ (ಸೀತೆ), ಯಶ್ (ರಾವಣ) ಜತೆಗೆ ರವಿ ದುಬೆ (ಲಕ್ಷ್ಮಣ), ಸನ್ನಿ ಡಿಯೋಲ್ (ಹನುಮಂತ), ಲಾರಾ ದತ್ತಾ (ಕೈಕೇಯಿ), ವಿವೇಕ್ ಓಬೆರಾಯ್ (ವಿದ್ಯುತ್ಜೀವ), ಕಾಜಲ್ ಅಗರ್ವಾಲ್ (ಮಂಡೋದರಿ), ಅರುಣ್ ಗೋವಿಲ್ (ದಶರಥ), ರಕುಲ್ ಪ್ರೀತ್ ಸಿಂಗ್ (ಶೂರ್ಪನಖಿ) ಸೇರಿ ಹಲವರು ತಾರಾಗಣದಲ್ಲಿದ್ದಾರೆ. ಇನ್ನು ಅಂದಾಜು 4000 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ಯಶ್ ಹಾಲಿವುಡ್ ರೇಂಜಿಗೆ ‘ರಾಮಾಯಣ’ವನ್ನು ಎರಡು ಭಾಗಗಳಲ್ಲಿ ತೆರೆಗೆ ತರುತ್ತಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಇಂಗ್ಲಿಷ್ ಸೇರಿ ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. -ಏಜೆನ್ಸೀಸ್

ರಿಲೀಸ್‌ಗೂ ಮುನ್ನವೇ 110 ಕೋಟಿ ರೂ. ಗಳಿಕೆ

ದಸರಾ ಹಬ್ಬದಿಂದಲೇ ‘ರಾಮಾಯಣ: ಭಾಗ 1’ ಚಿತ್ರದ ಅಡ್ವಾನ್ಸ್ ಬುಕಿಂಗ್ ಆರಂಭವಾಗಿತ್ತು. ಇದೀಗ ಮುಂಗಡ ಟಿಕೆಟ್ ಬುಕಿಂಗ್‌ನಲ್ಲೂ ಸಿನಿಮಾ ದಾಖಲೆ ಬರೆದಿದೆ. ವಿಶ್ವಾದ್ಯಂತ ಸುಮಾರು 83,032 ಶೋಗಳ ಅಂದಾಜು 27 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಆ ಮೂಲಕ ಅಡ್ವಾನ್ಸ್ ಬುಕಿಂಗ್‌ನಿಂದ ₹110 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿಕೊಂಡಿದೆ. ಹಿಂದಿ ವರ್ಷನ್‌ನಿಂದ ಸುಮಾರು 50 ಕೋಟಿ ರೂ. ಅಡ್ವಾನ್ಸ್ ಕಲೆಕ್ಷನ್ ಆಗಿದೆ. ಇನ್ನು ಕರ್ನಾಟಕದಲ್ಲೂ ‘ರಾಮಾಯಣ’ ಕ್ರೇಜ್ ಇದ್ದು, ಮುಂಗಡವಾಗಿಯೇ 5 ಕೋಟಿ ರೂ. ಗಳಿಕೆಯಾಗಿದೆ. ತೆಲುಗಿನಿಂದ 3 ಕೋಟಿ ಮತ್ತು ತಮಿಳು, ಮಲಯಾಳಂನಿಂದ ತಲಾ 1.25 ಕೋಟಿ ರೂ. ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಇದು ಭಾರತದ ಲೆಕ್ಕವಾದರೆ, ವಿದೇಶದಲ್ಲಿ ‘ರಾಮಾಯಣ’ ರಿಲೀಸ್‌ಗೂ ಮುನ್ನವೇ 50 ಕೋಟಿ ರೂ. ಕಮಾಯಿ ಮಾಡಿದೆ. ಬೆಂಗಳೂರು ಸೇರಿ ಹಲವು ಮಹಾನಗರಗಳಲ್ಲಿ ಬೆಳಗ್ಗೆ 6ರಿಂದಲೇ ಶೋಗಳು ಆರಂಭವಾಗುತ್ತಿವೆ. ಭಾರತ, ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ ಸೇರಿ 100ಕ್ಕೂ ಅಧಿಕ ದೇಶಗಳಲ್ಲಿ ‘ರಾಮಾಯಣ’ ತೆರೆ ಕಾಣುತ್ತಿದೆ. ಮೊದಲ ದಿನವೇ ಅಂದಾಜು 250 ರೂ. ಕೋಟಿ ಅಧಿಕ ಗಳಿಕೆ ಮಾಡಬಹುದು ಎಂಬ ನಿರೀಕ್ಷೆಯಿದೆ.

ಬರಲಿದೆಯಾ ಭಾಗ 3?

‘ರಾಮಾಯಣ’ ಎರಡು ಭಾಗಗಳಲ್ಲಿ ಮೂಡಿಬರಲಿದೆ ಎಂದು ಚಿತ್ರತಂಡ ಪ್ರಾರಂಭದಲ್ಲೇ ಹೇಳಿಕೊಂಡಿತ್ತು. ಮೊದಲ ಭಾಗ ಇಂದು ರಿಲೀಸ್ ಆದರೆ, ಎರಡನೇ ಭಾಗ 2027ರ ದೀಪಾವಳಿಗೆ ರಿಲೀಸ್ ಎನ್ನಲಾಗಿತ್ತು. ಆದರೆ, ಇದೀಗ ಸೀಕ್ವೆಲ್ 2028ರ ದೀಪಾವಳಿಗೆ ಪೋಸ್ಟ್‌ಪೋನ್ ಆಗಿದ್ದು, ಆ ಬಳಿಕ ‘ರಾಮಾಯಣ’ ಮೂರನೇ ಭಾಗವೂ ಬರಲಿದೆ ಎಂಬ ಸುಳಿವು ಸಿಕ್ಕಿದೆ. ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ಪ್ರೀಮಿಯರ್ ಬಳಿಕ ರಣಬೀರ್ ಕಪೂರ್ ಸುಳಿವು ನೀಡಿದ್ದಾರೆ. ಹಾಗೆಯೇ, ನಿರ್ಮಾಪಕ ನಮಿತ್ ಮಲ್ಹೋತ್ರಾ ಕೂಡ ಸಿನಿಮಾ ಯಶಸ್ಸಿನ ಮೇಲೆ ನಿರ್ಧರಿಸಲಾಗುವುದು ಎಂದಿದ್ದಾರೆ.

ಬೇರೆ ಬೇರೆ ರಾಜ್ಯಗಳಲ್ಲಿ ‘ರಾಮಾಯಣ’ದ ವ್ಯಾಖ್ಯಾನ ಭಿನ್ನವಾಗಿದೆ. ಅದೇ ನಮ್ಮ ಸಂಸ್ಕೃತಿಯ ವಿಶೇಷತೆ. ಹಾಗಾಗಿ, ಹಲವರು ತಮ್ಮ ತಮ್ಮ ದೃಷ್ಟಿಕೋನದಿಂದ ‘ರಾಮಾಯಣ’ ಕಥೆಗಳನ್ನು ನೋಡುತ್ತಾರೆ. ಇನ್ನು ರಾವಣನ ದೃಷ್ಟಿಕೋನದಿಂದಲೂ ‘ರಾಮಾಯಣ’ ನಿರೂಪಿತವಾಗಿದ್ದು, ಅದರಲ್ಲಿ ಎರಡು ಆಯಾಮಗಳಿವೆ. ನಮ್ಮನ್ನು ನಾವು ಅರ್ಪಿಸಿಕೊಂಡು ದೊಡ್ಡ ಸಾಧನೆಗಳನ್ನು ಮಾಡುತ್ತೇವೆ. ಆದರೆ, ಬಳಿಕ ಅದನ್ನು ಎಷ್ಟರ ಮಟ್ಟಿಗೆ ಉಳಿಸಿಕೊಳ್ಳುತ್ತೇವೆ ಎಂಬುದು ಮುಖ್ಯವಾಗುತ್ತದೆ. ಸತ್ಯ ಅಡಗಿರುವುದೇ ಅದರಲ್ಲಿ.
ಯಶ್, ನಟ