Rakkasapuradhol Review - ರಕ್ಕಸಪುರದ ರಾಕ್ಷಸ ವರ್ಸಸ್​ ಕೊಳ್ಳಿ ದೆವ್ವ!

ರಕ್ಕಸಪುರದೋಳ್​
ರಕ್ಕಸಪುರದೋಳ್​
Published on
Rakkasapuradhol Review
ಚಿತ್ರ: ರಕ್ಕಸಪುರಧೋಳ್​
ನಿರ್ದೇಶನ: ರವಿ ಸಾರಂಗ
ತಾರಾಗಣ: ರಾಜ್​ ಬಿ. ಶೆಟ್ಟಿ, ಅನಿರುದ್ಧ್​ ಭಟ್​, ಸ್ವಾತಿಷ್ಟ ಕೃಷ್ಣನ್​, ಅರ್ಚನಾ ಕೊಟ್ಟಿಗೆ, ಗೌರವ್​ ಶೆಟ್ಟಿ, ಜಹಾಂಗೀರ್​, ಬಿ. ಸುರೇಶ್​, ಗೋಪಾಲ್​ ದೇಶಪಾಂಡೆ ಮತ್ತಿತರರು
ಮಾನಸಿಕ ಖಿನ್ನತೆಗೊಳಗಾಗಿ ಮನೋರೋಗಿಯಾಗಿದ್ದ ಪೊಲೀಸ್​ ಸಬ್​ಇನ್ಸ್​ಪೆಕ್ಟರ್​ ಶಿವ (ರಾಜ್​) ಕೆಲ ತಿಂಗಳು ಚಿಕಿತ್ಸೆ ಪಡೆದು, ಕೊಳ್ಳೇಗಾಲದ ಕಾಗಲವಾಡಿ ಪೊಲೀಸ್​ ಠಾಣೆಗೆ ವರ್ಗಾವಣೆಯಾಗುತ್ತಾನೆ. ಆ ಠಾಣೆಯೋ ಅಶಿಸ್ತಿನ ಗೂಡು. ಕಾನ್ಸ್​ಟೆಬಲ್​ ಕಮಲ (ಗೌರವ್​), ಬಿಳಿಯಪ್ಪ ಸೇರಿ ಯಾರಿಗೂ ಜವಾಬ್ದಾರಿಯೇ ಇರುವುದಿಲ್ಲ. ಶಿವ ಕಾಗಲವಾಡಿಗೆ ಕಾಲಿಟ್ಟಾಗಲೇ ರಕ್ಕಸಪುರದ ಶಿವಲಿಂಗದ ಮೇಲೆ ಕಾಗೆ ಸತ್ತು ಬೀಳುತ್ತದೆ. ಊರಿಗೆ ಗಂಡಾಂತರ ಕಾದಿದೆ ಅಂತ ಊರಿನವರು ದೇವರೆಂದು ಪೂಜಿಸುವ ಅರ್ಚಕ ಸಿದ್ದಯ್ಯ (ಸುರೇಶ್​) ಹೇಳುತ್ತಾರೆ. ಆ ನಂತರ ರಕ್ಕಸಪುರ ಸಮೀಪದ ಎಮ್ಮೆಗುಡ್ಡದ ಮೇಲೆ ವಧುವಿನಂತೆ ಸಿಂಗಾರಗೊಂಡ, ಮುಖ ಸುಟ್ಟಿರುವ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗುತ್ತದೆ. ಅದು ಎಂಎಲ್​ಎ ಧರ್ಮಣ್ಣನ ಪುತ್ರಿ ಶೋಭಾ ಅಂತ ಗೊತ್ತಾಗುವಷ್ಟರಲ್ಲಿ, ಆಕೆಯ ಪ್ರಿಯತಮ ಅಶೋಕ, ಚೈತ್ರಾ ಟೀಚರ್​.. ಹೀಗೆ ಸಾಲು ಹೆಣಗಳು ಪತ್ತೆಯಾಗುತ್ತವೆ. ಇದು ಕೊಳ್ಳಿ ದೆವ್ವದ್ದೇ ಕೆಲಸ ಅಂತ ಊರಿನವರು ಗೋಳಾಡುತ್ತಿದ್ದರೆ, ಇದರ ಹಿಂದೆ ಮನುಷ್ಯರದ್ದೇ ಕೈವಾಡವಿದೆ ಅಂತ ಶಿವ ತನಿಖೆಗೆ ಇಳಿಯುತ್ತಾನೆ. ಹೆಣಗಳಿಗೂ ಮಂಗಳವಾರಕ್ಕೂ ಲಿಂಕ್​ ಇರುವುದನ್ನು ಪತ್ತೆ ಹಚ್ಚುವ ಆತ ಪ್ರಕರಣದ ಬೆನ್ನು ಬೀಳುತ್ತಾನೆ. ತನಿಖೆ ಸಾಗಿದಂತೆ ಮತ್ತಷ್ಟು ರೋಚಕ ತಿರುವುಗಳೊಂದಿಗೆ ಕಥೆ ಇನ್ನೊಂದು ಹಾದಿ ಹಿಡಿಯುತ್ತದೆ.
ಕೊಳ್ಳೇಗಾಲ, ಚಾಮರಾಜನಗರ ಸುತ್ತಮುತ್ತ ನಡೆಯುವ ಕಥೆಯಿದು. ಹೀಗಾಗಿಯೇ ಅಲ್ಲಿನ ಆಚರಣೆಗಳು, ಹೋಗುಡಾ, ಬಾರುಡಾ... ಎಂದು ಸಾಗುವ ಸಂಭಾಷಣೆಯೇ ಬೇರೆಯ ಪ್ರದೇಶದವರಿಗೆ ಹೊಸ ರೀತಿ ಕೇಳಿಸಿ, ಆಪ್ತ ಎನಿಸುತ್ತದೆ. ಮೊದರ್ಲಧ ಗಟ್ಟಿ ಚಿತ್ರಕಥೆ ಪ್ರೇಕ್ಷಕರನ್ನು ಹಿಡಿದಿಟ್ಟರೆ, ದ್ವೀತಿಯಾರ್ಧದಲ್ಲಿ ಅಷ್ಟೇ ಗಟ್ಟಿ ಪಾರ್ಮೆನ್ಸ್​ಗಳು ಸೀಟಂಚಲ್ಲಿ ಕೂರಿಸುತ್ತವೆ. ಮಾನಸಿಕ ಖಿನ್ನತೆಗೆ ಒಳಗಾದ ಪೇಷೆಂಟ್​ ಪೊಲೀಸ್​ ಪಾತ್ರದಲ್ಲಿ ರಾಜ್​ ಬಿ. ಶೆಟ್ಟಿ ಗಮನ ಸೆಳೆಯುತ್ತಾರೆ. ಆದರೆ, ದ್ವೀತಿಯಾರ್ಧದಲ್ಲಿ ಅನಿರುದ್ದ್​ ಭಟ್​ ಚಿತ್ರದ ಕೇಂದ್ರಬಿಂದು. ಗೌರವ್​ ಶೆಟ್ಟಿ, ಜಹಾಂಗೀರ್​, ಅರ್ಚನಾ ಪಾತ್ರಗಳು ಇಷ್ಟವಾಗುತ್ತವೆ. ಅರ್ಜುನ್​ ಜನ್ಯ ಹಿನ್ನೆಲೆ ಸಂಗೀತ ಮತ್ತು ವಿಲಿಯಮ್​ ಡೇವಿಡ್​ ಛಾಯಾಗ್ರಹಣ, ಚಿತ್ರವನ್ನು ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿಸುತ್ತವೆ. ಹೀಗಾಗಿಯೇ "ರಕ್ಕಸಪುರಧೋಳ್​' ಒಂದೊಳ್ಳೆ ಮಿಸ್ಟರಿ ಸೈಕಲಾಜಿಕಲ್​ ಥ್ರಿಲ್ಲರ್​ ನೋಡಿದ ಅನುಭವ ನೀಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net