Raj B Shetty Interview - ಈ ವರ್ಷ ಎಕ್ಸ್​ಪೆರಿಮೆಂಟ್​ಗಳಿಗೆ ಮೀಸಲು ಎಂದ "ರಕ್ಕಸಪುರ'ದ ರಾಜ್​ ಬಿ ಶೆಟ್ಟಿ

ರಾಜ್ ಬಿ ಶೆಟ್ಟಿ
ರಾಜ್ ಬಿ ಶೆಟ್ಟಿ
Published on
Raj B Shetty - ನಟ, ನಿರ್ದೇಶಕ, ನಿರ್ಮಾಪಕ ರಾಜ್​ ಬಿ. ಶೆಟ್ಟಿ ಇದೀಗ ಈ ಮೂರು ವಿಷಯಗಳಲ್ಲೂ ಎಲ್ಲರ ಗಮನ ಸೆಳೆಯುತ್ತಿದ್ದಾರೆ. "ಸು ಫ್ರಮ್​ ಸೋ'ನಲ್ಲಿ ಕಾಮಿಡಿಯನ್​ ಕರುಣಾಕರ ಗುರೂಜಿಯಾಗಿ, "45'ನಲ್ಲಿ ಕಾಮನ್​ ಮ್ಯಾನ್​ ಪಾತ್ರದಲ್ಲಿ, "ಲ್ಯಾಂಡ್​ಲಾರ್ಡ್​'ನಲ್ಲಿ ಖಡಕ್​ ವಿಲನ್​ ಆಗಿ, ಇದೀಗ "ರಕ್ಕಸಪುರದೋಳ್​'ನಲ್ಲಿ ಗೊಂದಲಮಯ ನಾಯಕನ ಪಾತ್ರದಲ್ಲಿ, ಹೀಗೆ ಭಿನ್ನ-ವಿಭಿನ್ನ ಎಕ್ಸ್​ಟ್ರೀಮ್​ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಹಾಗೇ "ಕರಾವಳಿ' ಚಿತ್ರದಲ್ಲಿ ಮಾಲಿಂಗ ಪಾತ್ರದ ಲುಕ್​ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸುವಂತಿದೆ. ಇನ್ನು ₹5 ಕೋಟಿ ಬಜೆಟ್​ನಲ್ಲಿ "ಸು ಫ್ರಮ್​ ಸೋ' ನಿರ್ಮಿಸಿ ₹120 ಕೋಟಿಗೂ ಅಧಿಕ ಕಲೆಕ್ಷನ್​ ಮಾಡಿಕೊಂಡು ನಿರ್ಮಾಣದಲ್ಲೂ ಸೈ ಎನಿಸಿಕೊಂಡಿದ್ದಾರೆ. ಅದರ ನಡುವೆ ಮಲಯಾಳಂನಲ್ಲೂ ಬ್ಯಾಕ್​ ಟು ಬ್ಯಾಕ್​ ಮೂರು ಚಿತ್ರಗಳಲ್ಲಿ ನಟಿಸಿದ ರಾಜ್​, ಇದೀಗ ತಮಿಳು ಮತ್ತು ಹಿಂದಿಗೂ ಪದಾರ್ಪಣೆ ಮಾಡುತ್ತಿದ್ದಾರೆ. ಜತೆಗೆ ಉತ್ತರ ಕರ್ನಾಟಕದ ಕಥೆಯೊಂದನ್ನು ನಿರ್ಮಿಸಲು, ಮತ್ತೊಂದು ಹೊಸ ಜಾನರ್​ ಕಥೆ ನಿರ್ದೇಶಿಸಲು ಸಿದ್ಧತೆ ನಡೆಸಿದ್ದಾರೆ. ಇತ್ತೀಚೆಗಷ್ಟೆ ಈ ಬಗ್ಗೆ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದ ರಾಜ್​ ಬಿ. ಶೆಟ್ಟಿ, "ನಾನು ಹೊಸತನವನ್ನೇ ಹುಡುಕಲು ಬಯಸುವವನು. ಹೀಗಾಗಿಯೇ "ಸು ಫ್ರಮ್​ ಸೋ' ಯಶಸ್ಸಿನ ಬಳಿಕ ಮತ್ತೆ ಕಾಮಿಡಿ ಮಾಡಲ್ಲ ಅಂತ ಹೇಳಿದ್ದು. ಆ ಸಿನಿಮಾ ಸಕ್ಸಸ್​ ಬೇರೆ ತಂಡಗಳು ಹೆಚ್ಚು ಕಾಮಿಡಿ ಚಿತ್ರಗಳತ್ತ ಗಮನ ಹರಿಸುವಂತೆ ಮಾಡಿತು. ಒಂದು ಫಾರ್ಮುಲಾ ಹಿಂದೆ ಓಡಲು ನನಗಿಷ್ಟವಿಲ್ಲ. ಈ ವರ್ಷ ಪ್ರಯೋಗಗಳಿಗಷ್ಟೇ ಸೀಮಿತ. ಕನ್ನಡಿಗರಷ್ಟೇ ನೋಡುವ ಸಿನಿಮಾ ಮಾಡುವುದನ್ನು ಬಿಟ್ಟು, ಭಾರತೀಯರು ನೋಡುವ ಸಿನಿಮಾ ಮಾಡಬೇಕು. ಇದು ಕನ್ನಡ ಸಿನಿಮಾ ಅಂತ ಇಡೀ ದೇಶದ ಜನ ಇಷ್ಟಪಟ್ಟು ನೋಡಬೇಕು. ನಮ್ಮ ಸಿನಿಮಾಗಳು ಎಲ್ಲೆಡೆ ಹೋಗಬೇಕು.
ಸಿನಿಮಾ ವಿಷಯದಲ್ಲಿ ನನ್ನಷ್ಟು ಅದೃಷ್ಟವಂತರು ಯಾರೂ ಇಲ್ಲ. "ಒಂದು ಮೊಟ್ಟೆಯ ಕಥೆ', "ಗರುಡ ಗಮನ ವೃಷಭ ವಾಹನ', "ಸು ಫ್ರಮ್​ ಸೋ' ಬೇರೆ ಭಾಷೆಗಳಿಗೆ ಟ್ರಾವೆಲ್​ ಮಾಡಿದವು' ಎಂದು ಮಾಹಿತಿ ನೀಡುತ್ತಾರೆ.

ಪಾತ್ರಗಳ ಆಯ್ಕೆಯಲ್ಲೂ ಪ್ರಯೋಗ

ಹೀಗೆ ಭಿನ್ನ, ವಿಭಿನ್ನ ಪಾತ್ರಗಳ ಆಯ್ಕೆಯ ಬಗ್ಗೆ ರಾಜ್​, "ಯಾವುದೇ ಹೊಸ ಚಿತ್ರ ಬಂದರೂ ಮೊದಲು ನಾನು ಆ ಪಾತ್ರ ಮಾಡಿದ್ದೀನಾ? ಮಾಡಲು ಆಗುತ್ತಾ? ಇಲ್ಲವಾ? ಮಾಡಿದರೆ ನನಗೆಷ್ಟು ಖುಷಿ ಕೊಡುತ್ತೆ? ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ? ಅಂತ ಯೋಚಿಸುತ್ತೇನೆ. ಸಾಮಾನ್ಯವಾಗಿ ನಾನು ಒಂದು ಚಿತ್ರದ ಶೂಟಿಂಗ್​ ಮುಗಿದ ಬಳಿಕವಷ್ಟೇ ಇನ್ನೊಂದು ಚಿತ್ರದ ಶೂಟಿಂಗ್​ಗೆ ಹೋಗಲು ಇಷ್ಟಪಡುತ್ತೇನೆ. ಆದರೆ, ಕೆಲವೊಮ್ಮೆ ಚಿತ್ರತಂಡಗಳು ಸರಿಯಾಗಿ ಪ್ಲಾ$್ಯನಿಂಗ್​ ಮಾಡದ ಕಾರಣ ಒಂದೇ ಸಮಯದಲ್ಲಿ ಮೂರ್ನಾಲ್ಕು ಚಿತ್ರಗಳಲ್ಲಿ ನಟಿಸಬೇಕಾಗುತ್ತದೆ. ಆಗ ಒಂದು ಪಾತ್ರದಿಂದ ಮತ್ತೊಂದು ಪಾತ್ರಕ್ಕೆ ತಕ್ಷಣ ಒಗ್ಗಿಕೊಳ್ಳುವುದು ಕಷ್ಟ. ಡಬ್ಬಿಂಗ್​ ಸಮಯದಲ್ಲೂ ಇದು ಗೊಂದಲ ಉಂಟು ಮಾಡುತ್ತದೆ' ಎನ್ನುತ್ತಾರೆ.

ಪರಭಾಷೆಗಳಲ್ಲಿ ಡೆಬ್ಯೂ

ಈಗಾಗಲೇ ಕನ್ನಡ, ಮಲಯಾಳಂನಲ್ಲಿ ಮಿಂಚಿರುವ ರಾಜ್​ ಇದೀಗ ಅನುರಾಗ್​ ಕಶ್ಯಪ್​ ಆ್ಯಕ್ಷನ್​&ಕಟ್​ ಹೇಳಿರುವ, ಅಂತಾರಾಷ್ಟ್ರೊಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿರುವ "ಬಂದರ್​' ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದಾರೆ. ಆದರೆ, ಎಲ್ಲಿಗೆ ಹೋದರೂ, ಕನ್ನಡ ನನ್ನ ಶಕ್ತಿ ಎನ್ನುವ ರಾಜ್​, "ತಂತ್ರಜ್ಞನಾಗಿ ನನಗೆ ಇಲ್ಲಿ ಹೆಚ್ಚು ಶಕ್ತಿ ಇದೆ. ನಾನು ಮಲಯಾಳಂ ಅಥವಾ ಬೇರಾವುದೇ ಭಾಷೆಯಲ್ಲೂ ಒಬ್ಬ ನಟನಷ್ಟೇ. ಸದ್ಯ ತಮಿಳು, ತೆಲುಗಿನಲ್ಲೂ ಅಭಿನಯಿಸುತ್ತಿದ್ದೇನೆ. ಭಾಷೆ ಬೇರೆಯಾದರೂ ಒಳ್ಳೆ ನಿರ್ದೇಶಕರ ಜತೆ ಕೆಲಸ ಮಾಡಿ ಕಲಿಯುವುದು ನನ್ನ ಉದ್ದೇಶ. ಜತೆಗೆ ಬೇರೆ ಚಿತ್ರರಂಗಗಳ ಜತೆ ಉತ್ತಮ ಸಂಬಂಧ ವೃದ್ಧಿಸಿಕೊಳ್ಳುವ ಮೂಲಕ ನಮ್ಮ ಚಿತ್ರಗಳನ್ನು ಅಲ್ಲಿಗೂ ದಾಟಿಸಬಹುದು' ಎನ್ನುತ್ತಾರೆ.

260ರಲ್ಲಿ ನಾಲ್ಕೈದು ಚಿತ್ರಗಳಷ್ಟೇ ಹಿಟ್​!

"ಸಿನಿಮಾ ಈಸ್​ ಎ ಡೆಮಾಕ್ರಟಿಕ್​ ಪ್ರೋಸೆಸ್​' ಎನ್ನುವ ರಾಜ್​, "ಪ್ರತಿ ವರ್ಷ 260 ಸಿನಿಮಾಗಳಲ್ಲಿ ಕೇವಲ ನಾಲ್ಕೈದು ಚಿತ್ರಗಳು ಹಿಟ್​ ಆಗುವುದು ದುರಾದೃಷ್ಟಕರ. ಆದರೆ, ಆ ನಾಲ್ಕೈದು ಹಿಟ್​ ಆಗಬೇಕು ಅಂದರೆ ಈ 260 ಚಿತ್ರಗಳೂ ಬಂರಬೇಕು. ಪ್ರಯತ್ನಗಳು ನಡೆಯುತ್ತಿರಬೇಕು. ಏಕೆಂದರೆ ಚಿತ್ರರಂಗವನ್ನು ನಂಬಿ ತುಂಬ ಜನರಿದ್ದಾರೆ. ಗೆದ್ದ ಸಿನಿಮಾಗಳನ್ನು ನೋಡಿ ಈ ರೀತಿಯೂ ಸಿನಿಮಾ ಮಾಡಬಹುದು ಅಂತ 20 ಪ್ರಯತ್ನಗಳು ಆಗಿ, ಎರಡು ಗೆಲ್ಲಬಹುದು. ಅವರನ್ನು ನೋಡಿ 40 ಪ್ರಯತ್ನಗಳಾಗಿ ನಾಲ್ಕು ಗೆಲ್ಲಬಹುದು. ಇದು ಸಿನಿಮಾದ ಪ್ರಕ್ರಿಯೆ. ಇದರಲ್ಲಿ ಒಳ್ಳೆಯದು ಕೆಟ್ಟದು ಅಂತಿಲ್ಲ. ಒಳ್ಳೆಯದರ ಹಿಂದೆ ಕೆಟ್ಟದ್ದು ಬರುತ್ತದೆ, ಕೆಟ್ಟದ್ದರ ಹಿಂದೆ ಒಳ್ಳೆಯದೂ ಬರುತ್ತದೆ' ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net