ನಾವು ತುಂಬಾ ಒಳ್ಳೆಯವರು! ನೀವು..?: ‘ಪಪ್ಪಿ’ ಚಿತ್ರತಂಡದಿಂದ ಮತ್ತೊಂದು ಜವಾರಿ ಸಿನಿಮಾ ಘೋಷಣೆ

ಕಳೆದ ವರ್ಷ ತೆರೆಕಂಡಿದ್ದ ಆಯುಷ್ ಮಲ್ಲಿ ನಿರ್ದೇಶನದ ಜವಾರಿ ಸೊಗಡಿನ ‘ಪಪ್ಪಿ’ ಪ್ರೇಕ್ಷಕರ ಗಮನ ಸೆಳೆದಿತ್ತು. ಅದರ ಬೆನ್ನಲ್ಲೇ ಚಿತ್ರತಂಡ ಸೀಕ್ವೆಲ್ ಘೋಷಣೆ ಮಾಡಿತ್ತು. ಅದರ ಸ್ಕ್ರಿಪ್ಟ್ ಕಾರ್ಯಗಳು ನಡೆಯುತ್ತಿದ್ದು, ಅದಕ್ಕೂ ಮುನ್ನ ಅದೇ ತಂಡ ಇನ್ನೊಂದು ಜವಾರಿ ಸೊಗಡಿನ ಅನೌನ್ಸ್ ಮಾಡಿದೆ. ‘ನಾವು ತುಂಬಾ ಒಳ್ಳೆಯವರು’ ಎಂದು ಟೈಟಲ್ ಫಿಕ್ಸ್ ಮಾಡಿದೆ.
navu thumba olleyavaru poster
ನಾವು ತುಂಬಾ ಒಳ್ಳೆಯವರು ಪೋಸ್ಟರ್​
Published on: 

ಬೆಂಗಳೂರು: ಕಳೆದ ವರ್ಷ ತೆರೆಕಂಡಿದ್ದ ಆಯುಷ್ ಮಲ್ಲಿ ನಿರ್ದೇಶನದ ಜವಾರಿ ಸೊಗಡಿನ ‘ಪಪ್ಪಿ’ ಪ್ರೇಕ್ಷಕರ ಗಮನ ಸೆಳೆದಿತ್ತು. ಅದರ ಬೆನ್ನಲ್ಲೇ ಚಿತ್ರತಂಡ ಸೀಕ್ವೆಲ್ ಘೋಷಣೆ ಮಾಡಿತ್ತು. ಅದರ ಸ್ಕ್ರಿಪ್ಟ್ ಕಾರ್ಯಗಳು ನಡೆಯುತ್ತಿದ್ದು, ಅದಕ್ಕೂ ಮುನ್ನ ಅದೇ ತಂಡ ಇನ್ನೊಂದು ಜವಾರಿ ಸೊಗಡಿನ ಅನೌನ್ಸ್ ಮಾಡಿದೆ. ‘ನಾವು ತುಂಬಾ ಒಳ್ಳೆಯವರು’ ಎಂದು ಟೈಟಲ್ ಫಿಕ್ಸ್ ಮಾಡಿದೆ. ಬಹುತೇಕ ‘ಪಪ್ಪಿ’ ಕಲಾ ಬಳಗವೇ ಇಲ್ಲಿಯೂ ಮುಂದುವರಿದಿದೆ. ‘ಟೈಟಲ್ ಹೇಳುವಂತೆ ‘ನಾವು ತುಂಬಾ ಒಳ್ಳೆಯವರು’ ಹಾಸ್ಯ ಪ್ರಧಾನ ಫ್ಯಾಮಿಲಿ ಡ್ರಾಮಾ. ಉತ್ತರ ಕರ್ನಾಟಕ ಸೊಗಡಿನಲ್ಲಿಯೇ ಚಿತ್ರವನ್ನು ನಿರೂಪಿಸಲಾಗಿದೆ. ‘ಪಪ್ಪಿ’ಗಿಂತ ವಿಭಿನ್ನವಾಗಿರಲಿದ್ದು, ಫ್ಯಾಮಿಲಿ ಆಡಿಯನ್ಸ್‌ಗೆ ಇಷ್ಟವಾಗಲಿದೆ. ವಿಜಯಪುರ, ತಾವರಗೇರಾ ಬಳಿಯ ಮೇನದಾಳ್, ಗದಗ ಸೇರಿ ಉತ್ತರ ಕರ್ನಾಟಕದ ವಿವಿಧೆಡೆ 52 ದಿನಗಳ ಕಾಲ ಶೂಟಿಂಗ್ ನಡೆಸಿದ್ದೇವೆ. ನಿರ್ದೇಶನದ ಜತೆಗೆ ನಾನೂ ಒಂದು ಪಾತ್ರ ನಿರ್ವಹಿಸಿದ್ದೇನೆ. ‘ಪಪ್ಪಿ’ ಚಿತ್ರದ ಜಗದೀಶ್ ಕೊಪ್ಪಳ, ಆದಿ, ದುರುಗಪ್ಪ, ರೇಣುಕಾ ಜತೆಗೆ ರಂಗಭೂಮಿ ಕಲಾವಿದರಾದ ಸಹನಾ ಪ್ರಕಾಶ್, ಸಂಜನಾ ಮೂಲೆ, ಸಾಹಿತಿ, ಅಂದಪ್ಪ ಸಂಕನೂರು, ಕುಮಾರ್, ನೇತ್ರಾ ಅರಳಹಳ್ಳಿ ಅಭಿನಯಿಸಿದ್ದಾರೆ. ಇದೇ 23ಕ್ಕೆ ಟ್ರೇಲರ್ ರಿಲೀಸ್ ಮಾಡಲಿದ್ದು, ಡಿಸೆಂಬರ್‌ಗೆ ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದೇವೆ’ ಎಂದು ಆಯುಷ್ ಮಲ್ಲಿ ಮಾಹಿತಿ ನೀಡುತ್ತಾರೆ. ಅದರ ಜತೆಗೆ ‘ಪಪ್ಪಿ’ಯನ್ನು ತೆಲುಗಿನಲ್ಲಿ ತರುವ ಪ್ರಯತ್ನಗಳು ನಡೆಯುತ್ತಿವೆ.

ಉತ್ತರ ಕರ್ನಾಟಕದ ಜನಜೀವನದ ಕಥೆ ಹೇಳುವುದು ನನಗೆ ಇಷ್ಟ. ಅದು ಇಲ್ಲಿಯೂ ಮುಂದುವರಿದಿದೆ. ಒಂದು ವಾಡೆಯಲ್ಲಿ (ವಠಾರ) ನಡೆಯುವ ಜನಸಾಮಾನ್ಯರ ಕಥೆ ಇದು. ಇಲ್ಲಿ ರಕ್ತ ಸಂಬಂಧಗಳ ನಡುವಿನ ಸಂಭಾಷಣೆ ಹೆಚ್ಚು. ಈ ಸಿನಿಮಾ ಮೂಲಕ ಹೆಳವ ಸಮುದಾಯದ ಸಂಸ್ಕೃತಿಯನ್ನು ಪರಿಚಯಿಸುವ ಪ್ರಯತ್ನ ಮಾಡಲಿದ್ದೇವೆ. ಮೊದಲಿಗೆ ಹಾಸ್ಯದಲ್ಲಿ ಸಾಗುವ ಚಿತ್ರ ಸಾಗಿದಂತೆ ಭಾವನಾತ್ಮಕ ತಿರುವು ಪಡೆದುಕೊಳ್ಳುತ್ತದೆ.
ಆಯುಷ್ ಮಲ್ಲಿ, ನಿರ್ದೇಶಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net