Vikalpa Review - ಭ್ರಮೆಯೋ? ವಾಸ್ತವವೋ? ಆತ್ಮವೋ? ಅಂತರಾತ್ಮವೋ?

ವಿಕಲ್ಪ
ವಿಕಲ್ಪ
Published on
ಸೈಕಲಾಜಿಕಲ್​ ಥ್ರಿಲ್ಲರ್​ಗಳು ಕನ್ನಡದಲ್ಲಿ ಅಪರೂಪ. ಪರಭಾಷೆಗಳಲ್ಲಿ ಬಂದರೂ ಒಟಿಟಿಗಷ್ಟೇ ಸೀಮಿತವಾಗಿವೆ. ಆದರೆ, ನಟ/ ನಿರ್ದೇಶಕ ಪೃಥ್ವಿರಾಜ್​ ಪಾಟೀಲ್​ ತಮ್ಮ ಚೊಚ್ಚಲ ಪ್ರಯತ್ನ "ವಿಕಲ್ಪ' ಚಿತ್ರವನ್ನು ಬಿಗ್​ ಸ್ಕ್ರೀನ್​ಗೆ ತಂದಿದ್ದಾರೆ. ಬಾಲಕ ಪೃಥ್ವಿ ಬಲೂನ್​ ಜತೆ ಆಟವಾಡುತ್ತಿದ್ದಾಗ, ಆಲದ ಮರದ ಬಳಿ ಏನನ್ನೋ ನೋಡಿ ಹೆದರುತ್ತಾನೆ. ಬಾಲ್ಯದ ಆ ಹೆದರಿಕೆ ವಯಸ್ಸು 33 ದಾಟಿದರೂ ಆತನನ್ನು ಕಾಡುತ್ತಿರುತ್ತದೆ. ಯಾರೋ ಕರೆದಂತೆ, ಯಾರನ್ನೋ ನೋಡಿದಂತೆ, ತನ್ನನ್ನು ಯಾರೋ ಹಿಂಬಾಲಿಸುತ್ತಿರುವಂತ ಅನುಭವಗಳು ಆತನಿಗೆ ಸಾಮಾನ್ಯವಾಗಿರುತ್ತದೆ. ಹೀಗಾಗಿ ಅದರಿಂದ ಹೊರಬರಲು ಒಮ್ಮೆ ಮನಃಶಾಸ್ತ್ರಜ್ಞರ ಬಳಿ ಹೋದರೆ, ಇನ್ನೊಮ್ಮೆ ಜ್ಯೋತಿಷಿಗಳ ಮೊರೆ ಹೋಗುತ್ತಾನೆ. ಆದರೆ ಪೃಥ್ವಿಗೆ ಎಲ್ಲೂ ಪರಿಹಾರ ಸಿಗುವುದಿಲ್ಲ. ಇದರಿಂದಾಗಿ ಆತನ ವೈಯಕ್ತಿಕ ಜೀವನ, ವೃತ್ತಿ ಬದುಕು ಎಲ್ಲೆಡೆ ತೊಡಕುಂಟಾಗತೊಡಗುತ್ತದೆ. ಈ ಸಮಸ್ಯೆಯಿಂದ ಹೊರಬರಲು ಕೆಲಸದಿಂದ ಬ್ರೇಕ್​ ತೆಗೆದುಕೊಂಡು ಶಿರಸಿ ಕಡೆಗೆ ಹೊರಡುತ್ತಾನೆ. ಆದರೆ, ವಿಶ್ರಾಂತಿ ಪಡೆಯಲು ತೆಗೆದುಕೊಂಡ ಆ ಬ್ರೇಕ್​ ಆತನನ್ನು ಬ್ರೇಕ್​ ಮಾಡುತ್ತದೆ. ಹಾಗಾದರೆ ಪೃಥ್ವಿಯನ್ನು ಕಾಡುತ್ತಿರುವುದೇನು? ಅದು ನಿಜಕ್ಕೂ ದೆವ್ವನಾ? ಅಥವಾ ಎಲ್ಲವೂ ಆತನ ಭ್ರಮೆಯೋ? ಅದರಿಂದ ಆತ ಹೊರಬರುತ್ತಾನಾ? ಹೌದಾದರೆ ಹೇಗೆ? ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ನೀಡುತ್ತಾ, ಕ್ಲೆಮ್ಯಾಕ್ಸ್​ನಲ್ಲಿ ಒಂದು ಹೊಸ ಪ್ರಶ್ನೆಯೊಂದಿಗೆ ಅಂತ್ಯ ಹಾಡಿದ್ದಾರೆ ನಿರ್ದೇಶಕ ಪೃಥ್ವಿರಾಜ್​ ಪಾಟೀಲ್​. ಅದೇನು ಅಂತ ಚಿತ್ರದಲ್ಲಿ ನೋಡಿದರೆ ಚಂದ.
ಮೊದಲ ಚಿತ್ರದಲ್ಲೇ ಪೃರ್ಥವಿರಾಜ್​ ಪಾಟೀಲ್​ ಒಂದು ಸವಾಲಿನ ವಿಷಯವನ್ನು ಅಷ್ಟೇ ನಾಜೂಕಾಗಿ ಜನರ ಮುಂದಿಟ್ಟಿದ್ದಾರೆ. ಕಮರ್ಷಿಯಲ್​ ಅಂಶಗಳು, ಪಾತ್ರಗಳು ಕಡಿಮೆ ಇದ್ದರೂ ಥ್ರಿಲ್ಲಿಂಗ್​ ಅಂಶಗಳು ಕಥೆಯನ್ನು ನೋಡಿಸಿಕೊಂಡು ಹೋಗುತ್ತವೆ. ನಟನೆಯಲ್ಲೂ ಪೃಥ್ವಿ ಹಿಂದೆ ಬಿದ್ದಿಲ್ಲ. ಉಳಿದ ಪಾತ್ರಧಾರಿಗಳು ಅಷ್ಟೇ ಗಟ್ಟಿಯಾಗಿ ಪೃಥ್ವಿರಾಜ್​ಗೆ ಸಾಥ್​ ನೀಡಿದ್ದರೆ ಸಿನಿಮಾ ಪ್ರೇಕ್ಷಕರಿಗೆ ಮತ್ತಷ್ಟು ಆಪ್ತವಾಗುತ್ತಿತ್ತು. ಅಲ್ಲಲ್ಲಿ ಯಕ್ಷಗಾನದ ಝಲಕ್​ ಕೂಡ ಚಿತ್ರದಲ್ಲಿದೆ. ಸಂವತ್ಸರ ಸಾಗರ ಸಂಗೀತ ಮತ್ತು ಅಭಿರಾಮ್​ ಗೌಡ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ. ಹೀಗಾಗಿ ಹೊಸ ಪ್ರತಿಭೆಗಳ ಈ ವಿಭಿನ್ನ ಪ್ರಯತ್ನವನ್ನು ಒಮ್ಮೆ ನೋಡಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net