ಅಪ್ಪ- ಅಮ್ಮನ ಆಶೀರ್ವಾದ, ಅಪ್ಪನ ಉಡುಗೊರೆ, ಮದರ್ಸ್ ಗಿಫ್ಟ್... ಹೀಗೆ ಸ್ಟಿಕರ್ ಹಾಕಿಸಿಕೊಂಡಿರುವ ಬೈಕ್, ಕಾರ್ಗಳನ್ನು ಹಲವಾರು ನೋಡಿರುತ್ತೇವೆ. ಆದರೆ, "ಮಗನೇ ಸರ್ವಸ್ವ' ಅಂತ ಸ್ಟಿಕರ್ ಹಾಕಿಸಿಕೊಂಡಿರುವ ಅಪ್ಪನ ಕುರಿತ ಕಥೆ "ಚೌಕಿದಾರ'. ಅಮ್ಮ-ಮಗನ ಸೆಂಟಿಮೆಂಟ್ ಸಿನಿಮಾಗಳ ನಡುವೆ ಮಗನೇ ಜೀವ, ಜೀವಾಳ, ಜೀವನ ಎಂದು ಬದುಕುವ ಅಪ್ಪ-ಮಗನ ಬಾಂಧವ್ಯದ ಕಥೆಯಿದು. ನಾವು ಪಟ್ಟ ಕಷ್ಟ ನಮ್ಮ ಮಕ್ಕಳು ಪಡಬಾರದು ಎಂಬ ಆಲೋಚನೆ ಪ್ರತಿಯೊಬ್ಬ ತಂದೆ&ತಾಯಿಗೂ ಇರುತ್ತದೆ. ಹೀಗಾಗಿಯೇ ಮಕ್ಕಳಿಗೆ ಯಾವುದೇ ಸಮಸ್ಯೆ ಎದುರಾಗದಂತೆ ಕೇಳಿದ್ದನ್ನೆಲ್ಲ ಕೊಡಿಸಿ, ಅತಿಯಾದ ಪ್ರೀತಿ, ಕಾಳಜಿಯಿಂದಾಗಿ ಸಾಕುತ್ತಾರೆ. ಆದರೆ, ಅತಿಯಾದರೆ ಅಮೃತವೂ ವಿಷವಾಗುತ್ತೆ ಎನ್ನುವಂತೆಯೇ, ಅತಿಯಾದ ಪ್ರೀತಿಯಿಂದಾಗಿ ಮಕ್ಕಳು ದಾರಿ ತಪ್ಪಿರುವ ಹಲವು ಉದಾಹರಣೆಗಳು ನಮ್ಮ ನಡುವೆಯೇ ಇವೆ. ಪ್ರಕಾಶ್ ಗೌಡನಿಗೆ (ಸಾಯಿಕುಮಾರ್) ಒಬ್ಬನೇ ಮಗ ಸಿದ್ಧಾರ್ಥ್ (ಪೃಥ್ವಿ). ಮಗನೆಂದರೆ ಪ್ರಾಣ ಎನ್ನುವ ಅಪ್ಪ ಒಂದೆಡೆಯಾದರೆ, ಯಾವುದರ ಬಗ್ಗೆಯೂ ಕೇರ್ ಮಾಡದ ಮಗ ಇನ್ನೊಂದು ಕಡೆ. ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ, ಮಗ ಮದುವೆ ವಯಸ್ಸಿಗೆ ಬಂದರೂ, ಅಪ್ಪನಿಗೆ ಮಗನ ಮೇಲಿನ ಪ್ರೀತಿ ಕಡಿಮೆಯಾಗಿರುವುದಿಲ್ಲ. ಈ ಅತಿಯಾದ ಪ್ರೀತಿಯಿಂದಲೇ ಅಪ್ಪ-ಮಗನ ಜೀವನದಲ್ಲಿ ಅಲ್ಲೋಲ-ಕಲ್ಲೋಲ ಉಂಟಾಗುತ್ತದೆ. ಹೇಗೆ? ಏನಾಗುತ್ತದೆ? ಅದರಿಂದ ಈ ಕುಟುಂಬ ಹೇಗೆ ಬಚಾವಾಗುತ್ತದೆ? ಎಂಬುದರ ಸುತ್ತ "ಚೌಕಿದಾರ' ಕಥೆ ಸಾಗುತ್ತದೆ.