premi movie review: ಪ್ರೀತಿಯ ಹುಡುಕುತ್ತಾ ಪ್ರೇಮ್ ಪಯಣ

ಪ್ರೇಮಿ ಚಿತ್ರದ ಪೋಸ್ಟರ್​
ಪ್ರೇಮಿ ಚಿತ್ರದ ಪೋಸ್ಟರ್​
Published on

ಪ್ರಮುಖ ಮುಖ್ಯಾಂಶಗಳು

  • ಮೊದಲ ಪ್ರೀತಿ ಹುಡುಕಿಕೊಂಡು ಹೊರಡುವ ಪ್ರೇಮಿ
  • ಅಕ್ಕಮಹಾದೇವಿ ಬರೆದ ಕೃತಿಯಾಧಾರಿತ ಚಿತ್ರ
  • ಕಥೆಯ ನಿರೂಪಣೆ, ಸಂಭಾಷಣೆಕ್ಕಿಂತ ಹಿನ್ನೆಲೆ ಸಂಗೀತದ ಅಬ್ಬರ
ಚಿತ್ರ: ಪ್ರೇಮಿ
ನಿರ್ದೇಶನ: ಪ್ರದೀಪ್ ವರ್ಮಾ
ತಾರಾಗಣ: ಅದ್ವಿಕ್, ಸಾತ್ವಿಕಾ, ಶೋಭಿತಾ ಎಂ., ಪ್ರದೀಪ್ ವರ್ಮಾ, ಬೇಬಿ ದ್ವಿತಾ ಕೆ. ಗೌಡ ಮತ್ತಿತರರು.
ಬೆಂಗಳೂರು : ಚಿಕ್ಕಂದಿನಲ್ಲೇ ತಂದೆ-ತಾಯಿ ಕಳೆದುಕೊಂಡು ಅನಾಥನಾದ ಪ್ರೇಮ್ (ಅದ್ವಿಕ್) ಬೆಂಗಳೂರಿನಲ್ಲಿ ಜೀವನ ಸಾಗಿಸುತ್ತಿರುತ್ತಾನೆ. ಗೆಳತಿ ಟೀನಾ (ಶೋಭಿತಾ), ಪ್ರೇಮ್‌ನನ್ನು ಇಷ್ಟಪಟ್ಟು, ಪ್ರೇಮನಿವೇದನೆ ಮಾಡಿಕೊಳ್ಳುತ್ತಾಳೆ. ಆದರೆ, ಆತನಿಗೆ ಚಿಕ್ಕವಯಸ್ಸಿನಲ್ಲಿಯೇ ವಿವಾಹವಾಗಿರುವ ಕಾರಣಕ್ಕೆ ಟೀನಾಳನ್ನು ತಿರಸ್ಕರಿಸುತ್ತಾನೆ. ಹೀಗಿರುವಾಗ, ಚಿಕ್ಕಪ್ಪನ ಕುತಂತ್ರದಿಂದ ಬಾಲ್ಯವಿವಾಹವಾಗಿರುವ ಪ್ರೇಮ್‌ಗೆ ತಾನು ತಾಳಿ ಕಟ್ಟಿರುವ ಮಧುವತಿ (ಸಾತ್ವಿಕಾ) ನೆನಪು ಕಾಡುತ್ತದೆ. ಕೂಡಲೇ ಆತ ತನ್ನೂರಿಗೆ ಪ್ರಯಾಣ ಬೆಳೆಸುತ್ತಾನೆ. ಹಾಗಾದರೆ, ಪ್ರೇಮ್ ವಿರುದ್ಧ ಸ್ವಂತ ಚಿಕ್ಕಪ್ಪ ಹೂಡಿರುವ ಕುತಂತ್ರವಾದರೂ ಏನು? ಮಡದಿ ಮಧು ಕಥೆ ಏನು? ಆಕೆ ಪ್ರೇಮ್‌ನ ಮರೆತು ಮತ್ತೊಂದು ಮದುವೆಯಾಗಿದ್ದಾಳಾ? ಅಥವಾ ಈತನ ಬರುವಿಕೆಗೆ ಕಾಯುತ್ತಿದ್ದಾಳಾ? ತಿಳಿಯಲು ‘ಪ್ರೇಮಿ’ ಚಿತ್ರ ನೋಡಬೇಕಷ್ಟೇ. ‘ಪ್ರೇಮಿ’ ಚಿತ್ರಕ್ಕೆ ಅಕ್ಕಮಹಾದೇವಿ ಕಥೆ ಬರೆದಿದ್ದಾರೆ. ಅದಕ್ಕೆ ಸಿನಿಮಾ ರೂಪ ಕೊಟ್ಟು ತೆರೆ ಮೇಲೆ ತರಲು ನಿರ್ದೇಶಕ ಪ್ರದೀಪ್ ವರ್ಮಾ ಸಾಕಷ್ಟು ಶ್ರಮಪಟ್ಟಿದ್ದಾರೆ. ಕಥೆಯ ನಿರೂಪಣೆ, ಸಂಭಾಷಣೆ ಮತ್ತು ಪಾತ್ರಗಳಿಗಿಂತ ಹಿನ್ನೆಲೆ ಸಂಗೀತದ ಅಬ್ಬರವೇ ಜೋರಾಗಿದ್ದು, ಪ್ರೇಕ್ಷಕರಿಗೆ ಕೆಲವೆಡೆ ಇದು ಕಿರಿಕಿರಿ ಅನ್ನಿಸಬಹುದು. ನಾಯಕ ನಟನ ಹಿನ್ನೆಲೆಯನ್ನು ಮತ್ತಷ್ಟು ಎಚ್ಚರಿಕೆಯಿಂದ ನಿರೂಪಿಸುವ ಅವಕಾಶವಿತ್ತು. ನಾಯಕನಾಗಿ ಪದಾರ್ಪಣೆ ಮಾಡಿರುವ ಅದ್ವಿಕ್‌ಗೆ ಇನ್ನಷ್ಟು ತಯಾರಿ ಬೇಕಿತ್ತು. ಉಳಿದಂತೆ ಸಾತ್ವಿಕಾ, ಶೋಭಿತಾ ತಮಗೆ ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net