

ಬೆಂಗಳೂರು: ‘ಪ್ರೇಮದ ಊರಲಿ’ ಚಿತ್ರದ ರುಕ್ಮಿಣಿ ಪಾತ್ರದ ಮೂಲಕ ರಾಜ್ಯದ ಮನೆ ಮಾತಾದವರು ನಟಿ ತಪಸ್ವಿನಿ ಪೂಣಚ್ಚ. ಬಾಕ್ಸಾಫೀಸ್ನಲ್ಲಿ ದಾಖಲೆ ಗಳಿಕೆಯ ಜತೆಗೆ ಇತ್ತೀಚೆಗೆ ಚಿತ್ರವು 50 ದಿನಗಳನ್ನು ಪೂರೈಸಿದೆ. ಇದೇ ಸಡಗರದಲ್ಲಿರುವ ನಟಿ ತಪಸ್ವಿನಿಗೆ ಡಬಲ್ ಧಮಾಕಾ ಒದಗಿಬಂದಿದೆ. ‘ಪ್ರೇಮದ ಊರಲಿ’ ಯಶಸ್ಸಿನ ಅಲೆಯಲ್ಲಿರುವಾಗಲೇ ನಟಿಯ ಮತ್ತೊಂದು ಚಿತ್ರ ‘ಮಿ. ಜಾಕ್’ ರಿಲೀಸ್ಗೆ ಸಿದ್ಧವಾಗಿದೆ. ಇಲ್ಲಿ ‘ಫಸ್ಟ್ ರ್ಯಾಂಕ್ ರಾಜು’ ಖ್ಯಾತಿಯ ಗುರುನಂದನ್ಗೆ ಅವರು ಜೋಡಿಯಾಗಿದ್ದು, ಇದೇ ಡಿ. 4ಕ್ಕೆ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಪ್ರಿ-ರಿಲೀಸ್ ಇವೆಂಟ್ ಆಯೋಜಿಸಲಾಗಿತ್ತು. ಬಳಿಕ ಮಾತಿಗೆ ಸಿಕ್ಕ ತಪಸ್ವಿನಿ ಪೂಣಚ್ಚ ಸಿನಿಮಾ ಜರ್ನಿ ಕುರಿತು ‘ವಿಜಯವಾಣಿ’ ಜತೆ ಖುಷಿ ಹಂಚಿಕೊಂಡರು. ‘‘ಪ್ರೇಮದ ಊರಲಿ’ಯಶಸ್ಸು ಬದುಕಿನ ಹಾದಿಯನ್ನೇ ಬದಲಾಯಿಸಿದೆ. ನಮ್ಮಂಥ ಹೊಸ ಕಲಾವಿದರಿಗೆ ರಾಜ್ಯದ ಜನತೆ ನೀಡಿದ ಗೆಲುವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ‘ಪ್ರೇಮದ ಊರಲಿ’ 50 ದಿನ ಪೂರೈಸಿದೆ. ಅದರ ಬೆನ್ನಲ್ಲೇ ಡಿ. 4ಕ್ಕೆ ‘ಮಿ.ಜಾಕ್’ ರಿಲೀಸ್ ಆಗುತ್ತಿದೆ. ಒಂದೇ ಸಮಯದಲ್ಲಿ ಈ ಎರಡು ಚಿತ್ರಗಳಿಗೆ ಸಹಿ ಮಾಡಿದ್ದೆ. ಇದೀಗ ಒಟ್ಟಿಗೆ ಬಿಡುಗಡೆಯಾಗುತ್ತಿರುವುದು ಖುಷಿಯ ಸಂಗತಿ. ‘ಮಿ.ಜಾಕ್’ನಲ್ಲಿ ನನ್ನದು ನಂದಿನಿ ಎಂಬ ಟೀಚರ್ ಪಾತ್ರ. ಸಂಪ್ರದಾಯಸ್ಥ ಕುಟುಂಬದ ಹೆಣ್ಣು ಮಗಳು ಬದುಕಿನಲ್ಲಿ ಯಾವೆಲ್ಲ ಚಾಲೆಂಜ್ಗಳು ಎದುರಿಸುತ್ತಾಳೆ ಎಂಬುದನ್ನು ತೋರಿಸುವ ಪಾತ್ರ. ಸುತ್ತಮುತ್ತ ಇರುವ, ನಾವೇ ನೋಡಿದ ರೀತಿಯಲ್ಲಿ ಪಾತ್ರವನ್ನು ಕಟ್ಟಲಾಗಿದೆ. ‘ರುಕ್ಮಿಣಿ’ಗೂ ನಂದಿನಿ ಟೀಚರ್ಗೂ ಸಾಕಷ್ಟು ವ್ಯತ್ಯಾಸ ಕಂಡರೂ, ಭಾವನೆ ಮಾತ್ರ ಒಂದೇಯಾಗಿದೆ. ಸಿನಿಮಾದಲ್ಲಿ ಕಾಮಿಡಿ ಜತೆಗೆ ಒಳ್ಳೆಯ ಸಂದೇಶವಿದೆ. ತೊನ್ನು ರೋಗದ ಕುರಿತು ಜಾಗೃತಿ ಮೂಡಿಸುವಂಹ ಅಂಶವಿದೆ. ಗುರುನಂದನ್ ಜತೆ ಸ್ಕ್ರೀನ್ ಹಂಚಿಕೊಳ್ಳುತ್ತಿರುವುದಕ್ಕೆ ಖುಷಿಯಿದೆ. ಈ ಚಿತ್ರವನ್ನು ಕೂಡ ರಾಜ್ಯದ ಜನತೆ ಬೆಂಬಲಿಸುತ್ತಾರೆ ಎಂಬ ದೊಡ್ಡ ಅಶಾವಾದವಿದೆ’ ಎಂದು ತಪಸ್ವಿನಿ ಹೇಳಿಕೊಳ್ಳುತ್ತಾರೆ.
‘ಪ್ರೇಮದ ಊರಲಿ’ ಬಳಿಕ ಮುಂದಿನ ಸಿನಿಮಾಗಳ ಆಯ್ಕೆ, ಅವಕಾಶಗಳ ಬಗ್ಗೆ ತಪಸ್ವಿನಿ ಮಾತನಾಡಿ, ‘ನಾನು ನಿರ್ದೇಶಕರ ಕಲಾವಿದೆ. ಅವರು ಹೇಳಿದಂತೆ ನಟಿಸುವುದಷ್ಟೇ ನನಗೆ ಗೊತ್ತಿರುವುದು. ಅದೇ ಬೇಕು, ಇದೇ ಬೇಕು ಎಂದು ಕೇಳುವಳಲ್ಲ. ಒಮ್ಮೆ ಪಾತ್ರವನ್ನು ಒಪ್ಪಿಕೊಂಡರೆ ಅದಕ್ಕೆ ಬದ್ಧಳಾಗಿರುವೆ. ‘ಪ್ರೇಮದ ಊರಲಿ’ ಬಳಿಕ ಸಾಕಷ್ಟು ಕಥೆಗಳು ಬಂದಿವೆ. ಕನ್ನಡಕ್ಕಿಂತ ಪರಭಾಷೆಯಿಂದಲೇ ಅವಕಾಶಗಳು ಹೆಚ್ಚುತ್ತಿವೆ. ಈಗಾಗಲೇ 5-6 ಕಥೆಗಳನ್ನು ಕೇಳಿರುವೆ. ಫೋನ್ ಮೂಲಕ ಹಲವು ತಂಡಗಳು ಸಂಪರ್ಕಿಸಿವೆ. ಆದರೆ, ಯಾವುದನ್ನು ಒಪ್ಪಿಕೊಂಡಿಲ್ಲ. ‘ಮಿ. ಜಾಕ್’ ಬಳಿಕವಷ್ಟೇ ಮುಂದಿನ ನಿರ್ಧಾರ ತಿಳಿಸುವೆ. ಅಲ್ಲಿಯವರೆಗೆ ಚಿತ್ರತಂಡಕ್ಕೆ ಬೆಂಬಲವಾಗಿ ನಿಲ್ಲುವುದಷ್ಟೇ ನನ್ನ ಕೆಲಸ’ ಎಂದು ಹೇಳಿಕೊಳ್ಳುತ್ತಾರೆ.