Pramod Shetty - ಎಲ್ಲೆಡೆ ಸಲ್ಲುವ ಪ್ರಮೋದ್​ ಶೆಟ್ಟಿ

ಪ್ರಮೋದ್ ಶೆಟ್ಟಿ
ಪ್ರಮೋದ್ ಶೆಟ್ಟಿ
Published on
Pramod Shetty -
ರಂಗಭೂಮಿಯಲ್ಲಿ ಪಳಗಿದವರು ಚಿತ್ರರಂಗಕ್ಕೆ ಬಂದಾಗ ರಂಗಭೂಮಿಗೆ ಗುಡ್​ಬೈ ಹೇಳುವುದು ಸಾಮಾನ್ಯ. ಹಾಗೇ ಕಿರುತೆರೆ ತಾರೆಯರು ಸಹ ಸಿನಿಮಾಗೆ ಎಂಟ್ರಿ ಕೊಟ್ಟ ಬಳಿಕ ಧಾರಾವಾಹಿಗಳಿಂದ ದೂರ ಉಳಿಯುವುದು ಕೂಡ ಕಾಮನ್​. ಹಾಗೇ ಬೆಳ್ಳಿತೆರೆಯನ್ನೇ ನಂಬಿರುವ ಕೆಲ ಸೆಲೆಬ್ರಿಟಿಗಳು ಇದುವರೆಗೂ ವೆಬ್​ಸರಣಿಗಳ ಕಡೆ ಮುಖ ಕೂಡ ಮಾಡಿಲ್ಲ. ಅವರ ನಡುವೆ ಈ ಮೂರೂ ಮಾಧ್ಯಮಗಳಲ್ಲಿ ಕನ್ನಡದ ನಟನೊಬ್ಬ ಬಿಜಿಯಾಗಿರುವುದು ವಿಶೇಷ. ಅವರೇ ಪ್ರಮೋದ್​ ಶೆಟ್ಟಿ. ಹೌದು, ನಾಯಕನಾಗಿ "ಶಭಾಷ್​ ಬಡ್ಡಿಮಗ್ನೆ', "ಲಾಫಿಂಗ್​ ಬುದ್ಧ' ಸೇರಿ 80ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಪ್ರಮೋದ್​ ಸದ್ಯ ರಂಗಭೂಮಿ, ಧಾರಾವಾಹಿ, ಸಿನಿಮಾ, ವೆಬ್​ಸರಣಿ ಜತೆಗೆ ವರ್ಟಿಕಲ್ಸ್​ ಮತ್ತು ಮೈಕ್ರೋಸಿರೀಸ್​ಗಳಲ್ಲೂ ಬಿಜಿಯಾಗಿದ್ದಾರೆ. "ಸದ್ಯ ನಾಯಕನಾಗಿ "ಕೌಸ್ತುಭ' ಮತ್ತು "ಎನ್​ಎಚ್​ 66' ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ವೆಬ್​ಸರಣಿಯೊಂದರ ಕಥೆ ಓಕೆ ಆಗಿದ್ದು, ಚಿತ್ರೀಕರಣ ಪ್ರಾರಂಭಿಸಿದ್ದೇವೆ. ಇನ್ನಷ್ಟೇ ಅದರ ಬಗ್ಗೆ ಅಧಿಕೃತ ಘೋಷಣೆಯಾಗಬೇಕಿದೆ. ಜೀನವರು ಒಂದು, ಎರಡು ನಿಮಿಷಗಳ ಬುಲೆಟ್​ ಸಿರೀಸ್​ ಮತ್ತು ಮೈಕ್ರೋ ಸಿರೀಸ್​ ನಿರ್ಮಿಸಲು ಆರ್​ ನೀಡಿದ್ದು, ಸದ್ಯ ಚರ್ಚೆ ನಡೆಯುತ್ತಿದೆ. ಪತ್ನಿ ಸುಪ್ರೀತಾ "ಅಣ್ಣಯ್ಯ' ಧಾರಾವಾಹಿ ನಿರ್ಮಾಣದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇನ್ನೊಂದು ತಿಂಗಳಲ್ಲಿ ಹೊಸ ಧಾರಾವಾಹಿ ಲಾಂಚ್​ ಮಾಡಲಿದ್ದೇವೆ. ನಮ್ಮ ಬ್ಯಾನರ್​ನಲ್ಲೇ ಹೊಸ ಸಿನಿಮಾ ನಿರ್ಮಿಸುತ್ತಿದ್ದು, 15 ದಿನಗಳ ಚಿತ್ರೀಕರಣ ಮಾಡಿದ್ದೇನೆ. ರಂಗಸೌರಭ ಮೂಲಕ ರಂಗಭೂಮಿಯಲ್ಲೂ ಸಕ್ರಿಯನಾಗಿದ್ದೇನೆ. "ಗಂಗಾವತರಣ' ನಾಟಕದ 98 ಶೋಗಳಾಗಿದ್ದು, ಮೈಸೂರಿನಲ್ಲಿ 99ನೇ ಶೋ ಆಯೋಜಿಸಿ, ಇದೇ ಜೂನ್​ನಲ್ಲಿ ಚೌಡಯ್ಯದಲ್ಲಿ 100ನೇ ಶೋ ಮಾಡುವ ಪ್ಲಾನ್​ ಇದೆ. ರಂಗಭೂಮಿ, ಸಿನಿಮಾ, ಧಾರಾವಾಹಿ, ವೆಬ್​ಸರಣಿ, ಮೈಕ್ರೋ ಸಿರೀಸ್​.. ಹೀಗೆ ಎಲ್ಲವೂ ನನಗಿಷ್ಟ. ಹೀಗಾಗಿ ಎಲ್ಲೆಲ್ಲಿ ಹೇಗೆ ಕೆಲಸ ಮಾಡಬಹುದು ಎಂಬುದನ್ನು ನೋಡಿಕೊಂಡು ಸಕ್ರಿಯನಾಗಿದ್ದೇನೆ. ಖುಷಿಯಿದೆ' ಎಂದು ಸಂತಸ ವ್ಯಕ್ತಪಡಿಸುತ್ತಾರೆ ಪ್ರಮೋದ್​ ಶೆಟ್ಟಿ.

ಎಲ್ಲವೂ ಕಷ್ಟವೇ!

ಹೀಗೆ ಎಲ್ಲೆಡೆ ಸಕ್ರಿಯರಾಗಿರುವ ಪ್ರಮೋದ್​, "ಸಿನಿಮಾ ಹೆಚ್ಚು ಕಷ್ಟ' ಎನ್ನುತ್ತಾರೆ. "ಹಾಕುವ ಬಂಡವಾಳ ವಾಪಸ್​ ಬರುತ್ತಾ ಗ್ಯಾರಂಟಿ ಇರುವುದಿಲ್ಲ. ಬೆಂಗಳೂರಿನ ವಾತಾವರಣವಿದ್ದಂತೆ ಚಳಿ, ಮಳೆ, ಬಿಸಿಲು ಯಾವಾಗ ಹೇಗಿರುತ್ತೋ ಹೇಳುವುದು ಕಷ್ಟ. ಯುದ್ಧ, ಐಪಿಎಲ್​, ಮಳೆ, ಎಲೆಕ್ಷನ್​... ಕೆಲವೊಮ್ಮೆ ಕಾರಣಗಳೇ ಇರುವುದಿಲ್ಲ. ಅಲ್ಲೆಲ್ಲೋ ಬಾಂಬ್​ ಬಿತ್ತು, ಇಲ್ಲಿ ಸಿನಿಮಾ ಓಡಲ್ಲ. ಆದರೆ, ಧಾರಾವಾಹಿಯಲ್ಲಿ ಹೆಚ್ಚು ಲಾಭ ಇಲ್ಲದಿದ್ದರೂ, ಕಳೆದುಕೊಳ್ಳುವ ಭಯವಿಲ್ಲ' ಎನ್ನುತ್ತಾರೆ.

ಖಾಕಿಗೆ ಬ್ರೇಕ್​

ಇದುವರೆಗೆ ಸುಮಾರು 80 ಚಿತ್ರಗಳಲ್ಲಿ ಪ್ರಮೋದ್​ ನಟಿಸಿದ್ದು, ಅವುಗಳಲ್ಲಿ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪೊಲೀಸ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿಯೇ ಸದ್ಯ ಖಾಕಿಗೆ ಬ್ರೇಕ್​ ನೀಡಿರುವುದಾಗಿ ಹೇಳುವ ಅವರು, ""ಕೌಸ್ತುಭ' ಚಿತ್ರದ ಬಳಿಕ ಮತ್ತೆ ನಾನು ಪೊಲೀಸ್​ ಪಾತ್ರ ಒಪ್ಪಿಲ್ಲ. ವಿಭಿನ್ನ ಜಾನರ್​ಗಳಲ್ಲಿ ನಟಿಸಬೇಕು ಅಂತ ಅಂದುಕೊಂಡಿದ್ದೇನೆ. "ಎನ್​ಎಚ್​ 66'ರಲ್ಲಿ ಕ್ಯಾಬ್​ ಡೆವರ್​ ಆಗಿ ಕಾಣಿಸಿಕೊಳ್ಳಲಿದ್ದೇನೆ. ಜತೆಗೆ ತಮಿಳಿನ "ಸನ್ನಿಧಾನಂ ಪಿ.ಒ.' ಚಿತ್ರದಲ್ಲಿ ಯೋಗಿ ಬಾಬು ಸಹೋದರನ ಪಾತ್ರದಲ್ಲಿ ನಟಿಸಿದ್ದೇನೆ. ಮಲಯಾಳಂನಲ್ಲಿ ಇನ್ನೊಂದು ಸಿನಿಮಾ ಅವಕಾಶ ಬಂದಿದೆ. ಜತೆಗೆ ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ವೆಬ್​ಸರಣಿಗಳಲ್ಲಿ ಆರ್​ಗಳು ಬಂದಿವೆ. ಸದ್ಯಕ್ಕೆ ಮಾತುಕತೆ ನಡೆಯುತ್ತಿದೆ' ಎನ್ನುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net