Prajwal Devaraj - "ಬಿಗ್ಬಾಸ್ ಕನ್ನಡ ಸೀಸನ್ 10'ರಲ್ಲಿ ವಿಜೇತರಾಗಿದ್ದ ನಟ ಕಾರ್ತಿಕ್ ಮಹೇಶ್ ನಾಯಕನಾಗಿ ನಟಿಸುತ್ತಿರುವ, "ಜಟ್ಟ', "ಮೈತ್ರಿ' ಚಿತ್ರಗಳ ಖ್ಯಾತಿಯ ರಾಜ್ಯಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಂ. ಗಿರಿರಾಜ್ ನಿರ್ದೇಶಿಸುತ್ತಿರುವ ಹಾಗೂ "ರಾಜಾಹುಲಿ' ನಿರ್ದೇಶಕ ಗುರು ದೇಶಪಾಂಡೆ ನಿರ್ಮಿಸುತ್ತಿರುವ ಸಿನಿಮಾ "ರಾಮರಸ'. ಈಗಾಗಲೇ ಟೈಟಲ್ ಮತ್ತು ಫಸ್ಟ್ ಲುಕ್ ಮೂಲಕವೇ ಕುತೂಹಲ ಮೂಡಿಸಿರುವ ಈ ಮಿಥಿಕಲ್ ಫ್ಯಾಂಟಸಿ ಡ್ರಾಮಾದಲ್ಲಿ ಕಾರ್ತಿಕ್ ಮಹೇಶ್ ಜತೆ ನಟ ಶರಣ್, ಹೆಬಾ ಪಟೇಲ್, ಬಾಲಾಜಿ ಮನೋಹರ್, ವೈಶಾಲಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಇದೀಗ ಚಿತ್ರತಂಡವನ್ನು ನಟ ಪ್ರಜ್ವಲ್ ದೇವರಾಜ್ ಕೂಡ ಸೇರಿಕೊಂಡಿದ್ದಾರೆ. ಅವರಿಲ್ಲಿ ಇದೇ ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಕರ್ನಾಟಕದ ಅಲೆಮಾರಿ ಪರಂಪರೆಯಾದ "ಸುಡುಗಾಡು ಸಿದ್ಧ' ಸಮುದಾಯದ ಹಿನ್ನೆಲೆಯ "ಗುರು ಸಿದ್ಧ' ಎಂಬ ಪಾತ್ರದಲ್ಲಿ ಪ್ರಜ್ವಲ್ ನಟಿಸುತ್ತಿದ್ದು, ಗುರುವಾರ ಚಿತ್ರತಂಡ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಲಿದೆ. "ರಾಮರಸ'ದ ಪ್ರಜ್ವಲ್ ದೇವರಾಜ್ ಪಾತ್ರದ ಬಗ್ಗೆ ಗುರು ದೇಶಪಾಂಡೆ, ""ಗುರು ಸಿದ್ಧ ಪಾತ್ರವು ಕರ್ನಾಟಕದ ಸ್ಮಶಾನ ನಿವಾಸಿಗಳು ಅಥವಾ ಪವಾಡ ಪುರುಷರು ಎಂದೇ ಕರೆಯಲ್ಪಡುವ ಸುಡುಗಾಡು ಸಿದ್ಧರು, ಈಶ್ವರನ ಪರಮ ಭಕ್ತರು. ಅಂತಹ ಒಂದು ವಿಶೇಷ ಪಾತ್ರದಲ್ಲಿ ವಿಭಿನ್ನ ಲುಕ್ನಲ್ಲಿ ಪ್ರಜ್ವಲ್ ದೇವರಾಜ್ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದ್ದು ಪೋಸ್ಟ್-ಪ್ರೊಡಕ್ಷನ್ ನಡೆಯುತ್ತಿದೆ' ಎಂದು ಮಾಹಿತಿ ನೀಡುತ್ತಾರೆ. ಉಳಿದಂತೆ ಚಿತ್ರಕ್ಕೆ ಎ.ವಿ. ಕೃಷ್ಣಕುಮಾರ್ ಛಾಯಾಗ್ರಹಣ, ಭರತ್ ಬಿಜೆ ಸಂಗೀತ, "ಕಾಂತಾರ' ಖ್ಯಾತಿಯ ಅರ್ಜುನ್ ರಾಜ್ ಸಾಹಸ ಮತ್ತು ಅರ್ಜುನ್ ಕಿಟ್ಟು ಸಂಕಲನವಿರಲಿದೆ.