ಬೆಂಗಳೂರು: ‘ದೂರದರ್ಶನ’ ಖ್ಯಾತಿಯ ಸುಕೇಶ್ ಶೆಟ್ಟಿ ನಿರ್ದೇಶನದ ‘ಪೀಟರ್’ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದ್ದು, ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ ಬರಲಿದೆ. ತೆಲುಗಿನ ‘ಡಕಾಯಿತ್’, ಹಿಂದಿಯ ‘ಭೂತ್ ಬಂಗ್ಲಾ’ ಜತೆಗೆ ಕನ್ನಡ ಚಿತ್ರ ಸೆಣಸಾಡಲು ಸಿದ್ಧವಾಗಿದೆ. ಸುಕೇಶ್ ಶೆಟ್ಟಿ, ‘ಈಗಾಗಲೇ ಬಿಡುಗಡೆ ಮಾಡಿರುವ ಟೀಸರ್, ಹಾಡುಗಳು ‘ಪೀಟರ್’ಗೆ ಬಲ ತಂದಿವೆ. ತುಂಬಾ ದಿನಗಳು ಕಾಯಿಸಿದರೆ, ಅದರ ಬಿಸಿ ಹೋಗಬಹುದು ಎಂಬ ಕಾರಣಕ್ಕೆ ಬೇಗ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದೇವೆ. ಸಿನಿಮಾ ಬಿಡುಗಡೆಗೆ ಕಡಿಮೆ ದಿನಗಳು ಇರಬಹುದು, ಆದರೆ, ಈ ದಿನಗಳಲ್ಲೇ ಹೆಚ್ಚು ಪ್ರಚಾರ ಕೈಗೊಳ್ಳುತ್ತೇವೆ. ಏ.10ಕ್ಕೆ ಪರಭಾಷೆಯ ಚಿತ್ರಗಳು ಬರುತ್ತಿರಬಹುದು ಆದರೆ, ನಮ್ಮ ಸಿನಿಮಾ ಪ್ರೇಕ್ಷಕರಿಗೂ, ಆ ಚಿತ್ರದ ಪ್ರೇಕ್ಷಕರಿಗೂ ವ್ಯತ್ಯಾಸವಿದೆ. ನಮ್ಮ ಚಿತ್ರದ ಕಂಟೆಂಟ್ ಕನ್ನಡಿಗರಿಗೆ ಇಷ್ಟವಾಗಲಿದೆ ಎಂಬ ಭರವಸೆಯಿದೆ. ಮೊದಲು ಕನ್ನಡದಲ್ಲಿ ರಿಲೀಸ್ ಮಾಡಲಿದ್ದೇವೆ. ಎರಡು ವಾರ ಬಳಿಕ ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾ ಬಿಡುಗಡೆ ಮಾಡಲಿದ್ದೇವೆ. ‘ಪೀಟರ್’ ಮಡಿಕೇರಿ ಭಾಗದಲ್ಲಿ ನಡೆಯುವ ತಾಜಾ ಕಥೆ. ಕಾಲ್ಪನಿಕ ಕಥೆಯ ಜತೆಗೆ ನನ್ನ ಅನುಭವಗಳನ್ನು ಸೇರಿಸಿ ಸಿನಿಮಾ ಮಾಡಿದ್ದೇವೆ. ಇಲ್ಲಿ ಚೆಂಡೆ ಪ್ರಮುಖ ಪಾತ್ರವಾಗಿದೆ. ಚೆಂಡೆ ವಾದನ ಇಡೀ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿ ಥಿಯೇಟರ್ ಅನುಭವ ನೀಡಲಿದೆ ಎಂದು ಭರವಸೆ ನೀಡಬಲ್ಲೇ. ಮಡಿಕೇರಿ ಭಾಗದ ಹಚ್ಚ ಹಸಿರು, ಮಳೆ, ಗಾಳಿ, ಶುದ್ಧ ವಾತಾವರಣವನ್ನು ‘ಪೀಟರ್’ನಲ್ಲಿ ಕಣ್ತುಂಬಿಕೊಳ್ಳಬಹುದು. ಚೆಂಡೆ ವಾದ್ಯದ ಜುಗಲ್‌ಬಂಧಿ ಮತ್ತು ಕ್ಲೈಮ್ಯಾಕ್ಸ್ ಈ ಚಿತ್ರದ ಪ್ರಮುಖ ಹೈಲೈಟ್. ಇನ್ನು ಏ.1ಕ್ಕೆ ಪ್ರಿ-ರಿಲೀಸ್ ಇವೆಂಟ್ ಆಯೋಜಿಸಲಿದ್ದೇವೆ. ಅದಕ್ಕೂ ಮುನ್ನ ರಾಜ್ಯದ ಪ್ರಮುಖ ನಗರಗಳಿಗೆ ತೆರಳಿ ಸಿನಿಮಾ ಪ್ರಚಾರ ಮಾಡಲಿದ್ದೇವೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ. ಕಿರುತೆರೆಯ ಖ್ಯಾತಿಯ ರಾಜೇಶ್ ಧ್ರುವ, ರವೀಕ್ಷಾ ಶೆಟ್ಟಿ, ಪ್ರತಿಮಾ ನಾಯಕ್, ರಘು ಪಾಂಡೇಶ್ವರ, ರಾಮ ನಾಡಗೌಡ, ವರುಣ್ ಪಟೇಲ್ ತಾರಾಗಣದಲ್ಲಿದ್ದಾರೆ.