ಸರ್ಸೆ ನಿನ್ನ ಸೆರಗ ಸರ್ಸೆ ಹಾಡಿನ ವಿವಾದ: ಅಚ್ಚರಿ ಹೇಳಿಕೆ ನೀಡಿದ ಬಿಜೆಪಿ ಸಂಸದೆ, ನಟಿ ಕಂಗನಾ ರಣಾವತ್​! Sarse Ninna Seraga Sarse

ಸರ್ಸೆ ನಿನ್ನ ಸೆರಗ ಸರ್ಸೆ ಹಾಡಿನ ವಿವಾದ: ಅಚ್ಚರಿ ಹೇಳಿಕೆ ನೀಡಿದ ಬಿಜೆಪಿ ಸಂಸದೆ, ನಟಿ ಕಂಗನಾ ರಣಾವತ್​! Sarse Ninna Seraga Sarse
ಸರ್ಸೆ ನಿನ್ನ ಸೆರಗ ಸರ್ಸೆ ಹಾಡಿನ ವಿವಾದ: ಅಚ್ಚರಿ ಹೇಳಿಕೆ ನೀಡಿದ ಬಿಜೆಪಿ ಸಂಸದೆ, ನಟಿ ಕಂಗನಾ ರಣಾವತ್​! Sarse Ninna Seraga Sarse
Published on

ಪ್ರಮುಖ ಮುಖ್ಯಾಂಶಗಳು

  • ವಿವಾದದ ಸುಳಿಯಲ್ಲಿ ಸಿಲುಕಿದ ಬಹುನಿರೀಕ್ಷಿತ ಪ್ಯಾನ್​ ಇಂಡಿಯಾ ಸಿನಿಮಾ ಕೆಡಿ
  • ಜೋಗಿ ಪ್ರೇಮ್​ ನಿರ್ದೇಶನದ ಹಾಗೂ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ನಟನೆಯ ಸಿನಿಮಾ
  • ಸರ್ಸೆ ನಿನ್ನ ಸೆರಗ ಸರ್ಸೆ ಎಂಬ ಐಟಂ ಸಾಂಗ್​ನ ಹಿಂದಿ ವರ್ಷನ್​ಗೆ ಭಾರಿ ಆಕ್ರೋಶ​
  • ಸರ್ಕೆ ಚುನರ್ ತೇರಿ ಸರ್ಕೆ ಹಾಡಿನ ವಿರುದ್ಧ ಆಕ್ರೋಶ ಹೊರಹಾಕಿದ ಬಿಜೆಪಿ ಸಂಸದೆ ಕಂಗನಾ ರಣಾವತ್​
Sarse Ninna Seraga Sarse : ಜೋಗಿ ಪ್ರೇಮ್​ ನಿರ್ದೇಶನದ ಹಾಗೂ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ನಟನೆಯ "ಕೆಡಿ" ಚಿತ್ರದ ಹಿಂದಿ ವರ್ಷನ್​ "ಸರ್ಕೆ ಚುನರ್ ತೇರಿ ಸರ್ಕೆ" ಹಾಡು ವಿವಾದದ ಸುಳಿಯಲ್ಲಿ ಸಿಲುಕಿದೆ. ಇದರ ಬೆನ್ನಲ್ಲೇ ಬಿಜೆಪಿ ಸಂಸದೆ ಹಾಗೂ ಬಾಲಿವುಡ್​ ನಟಿ ಕಂಗನಾ ರಣಾವತ್​ ನೀಡಿರುವ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ.
ನಿನ್ನೆ (ಮಾರ್ಚ್​ 17) ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕಂಗನಾ, ಸಿನಿಮಾದಲ್ಲಿ ಹೆಚ್ಚುತ್ತಿರುವ "ಅಶ್ಲೀಲತೆ" ಮತ್ತು " ಏನಾದರೂ ಮಾಡಿ ಗಮನ ಸೆಳೆಯುವ" ಟ್ರೆಂಡ್​ ಬಗ್ಗೆ ಉಲ್ಲೇಖಿಸಿದರು. "ಸರ್ಕೆ ಚುನರ್ ತೇರಿ ಸರ್ಕೆ" ಹಾಡನ್ನು ಕೀಳುಮಟ್ಟ ಹಾಡು ಎಂದು ಜರಿದರು. ಅಲ್ಲದೆ, ಬಾಲಿವುಡ್ "ಅಶ್ಲೀಲತೆಯ" ಮಿತಿಯನ್ನು ಮೀರಿದೆ ಎಂದು ಆರೋಪಿಸಿದರು.
ಬಾಲಿವುಡ್ ಸಿನಿಮಾ ರಂಗದಲ್ಲಿ ಅಸಭ್ಯತೆ ತುಂಬಿದೆ. ಅದು ಅಶ್ಲೀಲವೇ ಆಗಿರಲಿ ಏನಾದರೂ ಮಾಡಿ ಎಲ್ಲರ ಗಮನ ಸೆಳೆಯಬೇಕೆಂಬ ಟ್ರೆಂಡ್​ ಹಿಂದೆ ಬಿದ್ದಿರುವ ಬಾಲಿವುಡ್​ ತನ್ನ ಎಲ್ಲಾ ಮಿತಿಗಳನ್ನು ಮೀರಿದೆ. ಇಡೀ ದೇಶವು ಬಾಲಿವುಡ್​ ಅನ್ನು ಖಂಡಿಸುತ್ತಿದೆ. ಆದರೆ, ಅವರಿಗೆ ಮಾತ್ರ ಯಾವುದೇ ನಾಚಿಕೆ ಇಲ್ಲ ಎಂದು ಕಂಗನಾ ಕಿಡಿಕಾರಿದರು.
ಇಂತಹ ಅಶ್ಲೀಲತೆ ಪ್ರದರ್ಶನದ ವಿರುದ್ಧ ಹೆಚ್ಚಿನ ಕಟ್ಟುನಿಟ್ಟಿನ ಅಗತ್ಯವಿದೆ. ಹೀಗಾಗಿ, ಬಾಲಿವುಡ್​ಗೆ ಕಡಿವಾಣ ಹಾಕಬೇಕಾಗಿದೆ ಎಂದು ಕಂಗನಾ ಅವರು ವಾಗ್ದಾಳಿ ನಡೆಸಿದರು.

ಏನಿದು ವಿವಾದ?

ಇತ್ತೀಚೆಗಷ್ಟೇ ಬಿಡುಗಡೆಯಾದ ಕೆಡಿ : ದಿ ಡೆವಿಲ್​ ಸಿನಿಮಾದ "ಸರ್ಸೆ ನಿನ್ನ ಸೆರಗ ಸರ್ಸೆ" ಎಂಬ ಐಟಂ ಸಾಂಗ್​ನ ಹಿಂದಿ ವರ್ಷನ್​ "ಸರ್ಕೆ ಚುನರ್ ತೇರಿ ಸರ್ಕೆ" ಹಾಡಿನ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಯೂಟ್ಯೂಬ್​ನಿಂದ ಹಾಡನ್ನು ಡಿಲೀಟ್​ ಮಾಡಲಾಗಿದೆ. ಅಂದಹಾಗೆ, ಬಾಲಿವುಡ್ ಬ್ಯೂಟಿ ನೋರಾ ಫತೇಹಿ ಅವರು ಈ ಹಾಡಿಗೆ ಮಾದಕವಾಗಿ ಸೊಂಟ ಬಳುಕಿಸಿದ್ದಾರೆ. ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ದೊಡ್ಡ ಸಂಚಲನ ಸೃಷ್ಟಿಸುತ್ತಿದೆ. ಅದರಲ್ಲೂ ಹಿಂದಿ ವರ್ಷನ್​ ಸಾಂಗ್ ಹಲವರ ಕೆಂಗಣ್ಣಿಗೆ ಗುರಿಯಾಯಿತು. ಅದಕ್ಕೆ ಕಾರಣ ಹಾಡಿನಲ್ಲಿರುವ ಅಶ್ಲೀಲ ಸಾಹಿತ್ಯ ಮತ್ತು ನೋರಾ ಅವರ ಅತಿ ಮಾದಕ ನೃತ್ಯ. ಇದನ್ನು ನೋಡಿದ ನೆಟ್ಟಿಗರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಆಕ್ರೋಶ
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಈ ವಿವಾದಕ್ಕೆ ಸಂಬಂಧಿಸಿದಂತೆ ಸೂಚನೆ ನೀಡಿದ್ದೇ ತಡ ಚಿತ್ರದ ನಿರ್ಮಾಪಕರು ಯೂಟ್ಯೂಬ್ ಮತ್ತು ಇತರ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ಹಿಂದಿ ಹಾಡನ್ನು ಅಧಿಕೃತವಾಗಿ ತೆಗೆದುಹಾಕಿದ್ದಾರೆ. ಕನ್ನಡ ವರ್ಶನ್​ ಇನ್ನೂ ಡಿಲೀಟ್​ ಆಗದೆ ಇರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ANI ವರದಿಯ ಪ್ರಕಾರ, 'ಸರ್ಕೆ ಚುನರ್ ತೇರಿ ಸರ್ಕೆ' ಹಿಂದಿ ಹಾಡಿಗೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತ ವಿನೀತ್ ಜಿಂದಾಲ್ ಎಂಬುವವರು, ಹಾಡಿಗೆ ಸಂಬಂಧಪಟ್ಟ ಪ್ರತಿಯೊಬ್ಬರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರ ಸೈಬರ್ ಸೆಲ್‌ಗೆ ದೂರು ಸಲ್ಲಿಸಿದ್ದಾರೆ. ಇದಾದ ಬಳಿಕ ವಿರೋಧಗಳು ಇನ್ನಷ್ಟು ಹೆಚ್ಚಾಯಿತು. ಈ ಸಾಂಗ್​ ಸಾರ್ವಜನಿಕ ಬಳಕೆಗೆ ಸೂಕ್ತವಲ್ಲ. ಇದರಲ್ಲಿ ಅಶ್ಲೀಲತೆಯನ್ನು ಒಳಗೊಂಡ ಸಾಹಿತ್ಯವಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಸಿಡಿದೆದ್ದ ಮಹಿಳೆಯರು

ಸರ್ಸೆ ನಿನ್ನ ಸೆರಗ ಸರ್ಸೆ ಕನ್ನಡ ವರ್ಶನ್​ ಹಾಡಿಗೂ ಭಾರಿ ವಿರೋಧ ವ್ಯಕ್ತವಾಗಿದೆ. ಮಹಿಳೆಯನ್ನು ಅವಮಾನಿಸುವ ಇಂಥ ಹಾಡುಗಳನ್ನು ಯಾವ ಕಾರಣಕ್ಕೂ ನಾವು ಒಪ್ಪುವುದಿಲ್ಲ. ಈ ಹಾಡನ್ನು ಸಂಪೂರ್ಣವಾಗಿ ಕೈಬಿಡಬೇಕು. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಾವು ಲೇಖಕಿಯರು, ಮಹಿಳಾ ಪರ ಮನಸ್ಸುಗಳಿರುವ ಎಲ್ಲರೂ ಆಗ್ರಹಿಸುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಕರ್ನಾಟಕ ಲೇಖಕಿಯರ ಸಂಘ, ಜನವಾದಿ ಮಹಿಳಾ ಸಂಘಟನೆಗಳು ಸೆನ್ಸಾರ್‌ ಮಂಡಳಿ, ನಿರ್ಮಾಪಕರ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net