News Anchor JP Shetty - "ಬನ' ಮೂಲಕ ಕೋಸ್ಟಲ್​ವುಡ್​ಗೆ ಎಂಟ್ರಿ ಕೊಟ್ಟ ಖ್ಯಾತ ಸುದ್ದಿ ನಿರೂಪಕ

ನಿರೂಪಕ ಜೆಪಿ ಶೆಟ್ಟಿ
ನಿರೂಪಕ ಜೆಪಿ ಶೆಟ್ಟಿ
Published on
Anchor JP Shetty - ಸುದ್ದಿ ಮಾಧ್ಯಮದಲ್ಲಿ ನಿರೂಪಕರಾಗಿ ಛಾಪು ಮೂಡಿಸಿದ್ದ ಅಪರ್ಣ, ಗೌರೀಶ್​ ಅಕ್ಕಿ, ರೆಹಮಾನ್​, ಜಾಹ್ನವಿ, ಶೀತಲ್​ ಶೆಟ್ಟಿ, ಪ್ರಮೋದ್​ ಬೋಪಣ್ಣ, ವೆಂಕಟೇಶ್​ ಅಡಿಗ ಸೇರಿ ಹಲವರು ಧಾರಾವಾಹಿ, ರಿಯಾಲಿಟಿ ಶೋ ಜತೆ ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಇದೀಗ ಈ ಸಾಲಿಗೆ ನಿರೂಪಕ ಜಯಪ್ರಕಾಶ್​ ಶೆಟ್ಟಿ ಕೂಡ ಸೇರಿಕೊಂಡಿದ್ದಾರೆ. ಜಗ್ಗೇಶ್​ ನಾಯಕನಾಗಿದ್ದ "ಸಾಫ್ಟ್​ವೇರ್​ ಗಂಡ' ಚಿತ್ರ ಮತ್ತು "ನಿರ್ಭಯ' ಧಾರಾವಾಹಿಯಲ್ಲಿ ನಟಿಸಿದ್ದ ಅವರು, ಇದೀಗ "ಬನ' ಮೂಲಕ ತುಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. "ಧರ್ಮದೈವ' ಮತ್ತು 75 ದಿನಗಳ ಕಾಲ ಪ್ರದರ್ಶನ ಕಂಡಿದ್ದ "ಧರ್ಮ ಚಾವಡಿ' ಖ್ಯಾತಿಯ ನಿತಿನ್​ ರೈ ಕುಕ್ಕುವಳ್ಳಿ ಈ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದು, ಮುಖ್ಯ ಭೂಮಿಕೆಯಲ್ಲಿ ಜೆ.ಪಿ.ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. "ಪಾತ್ರದ ಬಗ್ಗೆ ಈಗಲೇ ಹೇಳಲಾರೆ. ಆದರೆ, ಕಥೆಗೆ ತಿರುವು ಕೊಡುವ ಮುಖ್ಯ ಪಾತ್ರ ನನ್ನದು. ತುಳು ಜತೆ ಕನ್ನಡದಲ್ಲೂ ರಿಲೀಸ್​ ಮಾಡುವ ಉದ್ದೇಶವಿದೆ. ಕಾಮಿಡಿ, ಫ್ಯಾಮಿಲಿ ಸೆಂಟಿಮೆಂಟ್​, ಫೈಟ್ಸ್​, ಡಾನ್ಸ್​, ರೊಮ್ಯಾನ್ಸ್​ ಎಲ್ಲ ಅಂಶಗಳೂ ಚಿತ್ರದಲ್ಲಿವೆ. ಶೂಟಿಂಗ್​ ಪೂರ್ಣಗೊಂಡಿದ್ದು ಪ್ಯಾಚ್​ ವರ್ಕ್​ ಬಾಕಿ ಇದೆ. ಇದೇ ಜುಲೈನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ನನಗೆ ನಟನೆಯ ಬಗ್ಗೆ ಮೊದಲಿಂದಲೂ ಆಸಕ್ತಿ ಇತ್ತು. ಚಿಕ್ಕ ವಯಸ್ಸಿನಿಂದಲೇ ನಾಟಕ, ರಂಗಭೂಮಿ, ವೇದಿಕೆ ಕಾರ್ಯಕ್ರಮಗಳಲ್ಲಿ ಸಕ್ರಿಯನಾಗಿದ್ದೆ. ಸುದ್ದಿ ಮಾಧ್ಯಮಕ್ಕೆ ಬರಲು ಸಹ ಅದೇ ಕಾರಣ. ಸದ್ಯ ಚಿತ್ರರಂಗದತ್ತ ಗಮನ ಹರಿಸಿದ್ದೇನೆ. ಅಮೃತ ಸಿನಿಕ್ರಾಫ್ಟ್​ ಬ್ಯಾನರ್​ನಲ್ಲಿ "ಮುಧೋಳ್​' ಸಿನಿಮಾ ನಿರ್ಮಿಸುತ್ತಿದ್ದೇವೆ. 100ಕ್ಕೂ ಹೆಚ್ಚು ಕಥೆಗಳನ್ನು ಕೇಳಿದ್ದೇನೆ. ನಿರ್ಮಾಣದ ಜತೆ ಉತ್ತಮ ಪಾತ್ರ ದೊರೆತರೆ ನಟಿಸುತ್ತೇನೆ' ಎಂದು ಹೇಳಿಕೊಳ್ಳುತ್ತಾರೆ ಜೆ.ಪಿ. ಶೆಟ್ಟಿ.

ಗಡಿ ದಾಟುತ್ತಿದೆ ಕರಾವಳಿ ಕನ್ನಡ

ಇತ್ತೀಚಿನ ವರ್ಷಗಳಲ್ಲಿ ಕರಾವಳಿ ಪ್ರತಿಭೆಗಳು ಕನ್ನಡ ಸೇರಿ ಬೇರೆ ಚಿತ್ರರಂಗಗಳಲ್ಲೂ ಸದ್ದು ಮಾಡುತ್ತಿದ್ದಾರೆ. ""ಕಾಂತಾರ' ಬಳಿಕ ಮಂಗಳೂರಿನ ಕನ್ನಡ ಭಾಷೆಗೆ ವಿಶ್ವಮಟ್ಟದಲ್ಲಿ ಮಾನ್ಯತೆ ದೊರೆತಿದೆ. ಮೊದಲು ಮಂಗಳೂರು ಕನ್ನಡ ಕಾಮಿಡಿಗಷ್ಟೇ ಸೀಮಿತವಾಗಿತ್ತು. ರಿಷಬ್​, ರತ್​, ರಾಜ್​ ಬಿ. ಶೆಟ್ಟಿ ಮಂಗಳೂರು ಕನ್ನಡದ ಸೊಗಡನ್ನು ಎಲ್ಲೆಡೆ ಪಸರಿಸುವಂತೆ ಮಾಡಿದರು. ಕರಾವಳಿ ಕನ್ನಡ ವ್ಯಾಪ್ತಿ ಮೀರಿ ಬೆಳೆಯುತ್ತಿದೆ. "ಉಳಿದವರು ಕಂಡಂತೆ', "ಒಂದು ಮೊಟ್ಟೆಯ ಕಥೆ', "ಗರುಡ ಗಮನ ವೃಷಭ ವಾಹನ', "ಕಾಂತಾರ' ಸರಣಿಗಳಲ್ಲಿ ಭಾಷೆ, ಸಂಸತಿಯ ಅನಾವರಣವಾಗಿದೆ. ಕರಾವಳಿಯಲ್ಲಿ ಯಕ್ಷಗಾನ, ನಾಟಕ ಕಲಾವಿದರು, ತಂತ್ರಜ್ಞರು, ಸಂಗೀತಗಾರರು ತುಂಬ ಜನ ಇದ್ದಾರೆ. ತುಳುಗೆ ಸೀಮಿತವಾಗಿದ್ದ ಅವರು, ಮಂಗಳೂರು ಕನ್ನಡದ ಜತೆ ಜತೆಗೆ ತಾವು ಕೂಡ ಗಡಿ ದಾಟಿ ಹೊರ ರಾಜ್ಯ, ಪರಭಾಷೆಗಳಲ್ಲೂ ಅವಕಾಶಗಳನ್ನು ಪಡೆಯುತ್ತಿದ್ದಾರೆ' ಎಂದು ಸಂತಸ ವ್ಯಕ್ತಪಡಿಸುತ್ತಾರೆ.,
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net