

ಸಿನಿಮಾ ರಿಲೀಸ್ ವೇಳೆ ಚಿತ್ರಮಂದಿರಗಳ ಮುಂಭಾಗದಲ್ಲಿ ನಟರ ಬೃಹತ್ ಕಟೌಟ್ ನಿರ್ಮಿಸಿ, ಅಭಿಮಾನ ಮೆರೆಯುವುದು ಸಾಮಾನ್ಯ. ಆದರೆ, ನಟಿಯರ ಕಟೌಟ್ ಹಾಕುವುದು ವಿರಳ. ಅಕಸ್ಮಾತ್ ನಟಿಯರ ಕಟೌಟ್ ಹಾಕಿದರೂ, 40 ಅಡಿ ಇದ್ದರೆ ಹೆಚ್ಚು. ಹೀಗಿರುವಾಗ ಬರೋಬ್ಬರಿ 60 ಅಡಿಯ ನಟಿ ನಯನತಾರಾ ಕಟೌಟ್ ನಿರ್ಮಿಸಲಾಗಿದೆ. ಆ ಮೂಲಕ ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಕಟೌಟ್ ಪಡೆದ ನಟಿ ಎಂಬ ದಾಖಲೆಗೆ ನಯನತಾರಾ ಪಾತ್ರರಾಗಿದ್ದಾರೆ. ನಯನತಾರಾ ಅಭಿನಯದ ‘ಮೂಕುತಿ ಅಮ್ಮನ್ 2’ ಇದೇ ನವೆಂಬರ್ 5ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಅವರು ದ್ವಿಪಾತ್ರದಲ್ಲಿದ್ದಾರೆ. ಸಾಮಾನ್ಯ ಮಹಿಳೆಯ ಜತೆಗೆ ದೇವಿ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ನಯನತಾರಾ, ದೇವಿ ಅವತಾರದಲ್ಲಿರುವ ಪೋಸ್ಟರ್ ರಿವೀಲ್ ಮಾಡಲಾಗಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ. ಅದನ್ನೇ 60 ಅಡಿ ಎತ್ತರದಲ್ಲಿ ಕಟೌಟ್ ನಿರ್ಮಿಸಲಾಗಿದೆ. ಚೆನ್ನೈನ ಚೆಂಬರಂಬಾಕ್ಕಂನ ವೇಲ್ಸ್ ಥಿಯೇಟರ್ ಮುಂಭಾಗ ಎದ್ದುನಿಂತಿರುವ ಈ ಕಟೌಟ್ ಎಲ್ಲರ ಗಮನ ಸೆಳೆಯುತ್ತಿದೆ. ಸಹ ನಟಿ ರೆಜಿನಾ ಕೆಸಾಂಡ್ರಾ, ನಯನತಾರಾ ಕಟೌಟ್ನ ಫೋಟೋವನ್ನು ಜಾಲತಾಣದಲ್ಲಿ ಹಂಚಿಕೊಂಡು, ‘ಇಂದು ಇತಿಹಾಸ ನಿರ್ಮಾಣವಾದ ದಿನ. 60 ಅಡಿ ಎತ್ತರದ ನಟಿಯೊಬ್ಬರ ಬೃಹತ್ ಕಟೌಟ್ ಹಾಕಿರುವುದು ತಮಿಳುನಾಡಿನಲ್ಲಿ ಇದೇ ಮೊದಲು. ಇದು ನಯನಾ ಯಶಸ್ಸನ್ನು ಸೂಚಿಸುತ್ತದೆ’ ಎಂದು ಖುಷಿ ಹಂಚಿಕೊಂಡಿದ್ದಾರೆ. ಸುಂದರ್ ಸಿ. ನಿರ್ದೇಶನದ ‘ಮೂಕುತಿ ಅಮ್ಮನ್ 2’ನಲ್ಲಿ ನಯನತಾರಾ ಜತೆಗೆ ರೆಜಿನಾ, ‘ದುನಿಯಾ’ ವಿಜಯ್, ಅಜಯ್ ಘೋಷ್, ಊರ್ವಶಿ, ಅಭಿನಯ, ಯೋಗಿ ಬಾಬು ಕಲಾಬಳಗದಲ್ಲಿದ್ದಾರೆ. -ಏಜೆನ್ಸೀಸ್
ಭಾರತೀಯ ಚಿತ್ರರಂಗದಲ್ಲಿ ಕೆಲ ನಟಿಯರಿಗೆ ಅಭಿಮಾನಿಗಳಿಂದ ವಿಶೇಷ ಮನ್ನಣೆ ದೊರೆತಿದೆ. ಈ ಹಿಂದೆ ನಟಿಯರಾದ ಖುಷ್ಬೂ ಸುಂದರ್, ನಮಿತಾ, ನಿಧಿ ಅಗರ್ವಾಲ್ ಮತ್ತು ಸಮಂತಾ ರುಥ್ ಪ್ರಭುರ ಮೂರ್ತಿಗಳನ್ನು ಸ್ಥಾಪಿಸಿ ಅಭಿಮಾನಿಗಳು ಅಭಿಮಾನ ಮೆರದಿದ್ದಾರೆ. ಆದರೆ, ಅತಿ ಎತ್ತರದ ಕಟೌಟ್ ನಿರ್ಮಾಣವಾಗಿರುವುದು ಇದೇ ಮೊದಲು ಎಂದು ತಿಳಿದುಬಂದಿದೆ.