ಬೆಂಗಳೂರು: ಐಟಿ ಉದ್ಯೋಗದಲ್ಲಿದ್ದುಕೊಂಡು ರಂಗಭೂಮಿ ಹಿನ್ನೆಲೆಯ ಹಲವು ಕಲಾವಿದರು ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಮಿಂಚುತ್ತಿದ್ದಾರೆ. ಇದೀಗ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ರಂಗಭೂಮಿ ಪ್ರತಿಭೆ ನಾಗಶ್ರೀ ಹೆಬ್ಬಾರ್ ‘ವಿಕಲ್ಪ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಐಟಿ ಉದ್ಯೋಗಿ ಪೃಥ್ವಿರಾಜ್ ಪಾಟೀಲ್ ನಟಿಸಿ, ನಿರ್ದೇಶಿಸಿರುವ ಸೈಕಲಾಜಿಕಲ್-ಥ್ರಿಲ್ಲರ್ ‘ವಿಕಲ್ಪ’ ಬಿಡುಗಡೆಗೆ ಸಿದ್ಧವಾಗಿದ್ದು, ಇದೇ ಚಿತ್ರದಲ್ಲಿ ನಾಗಶ್ರೀ ಹೆಬ್ಬಾರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸಿನಿಮಾ ಜರ್ನಿ ಹಾಗೂ ಪಾತ್ರದ ಕುರಿತು, ‘ಪ್ರಸ್ತುತ ನಾನು ಐಟಿ ಉದ್ಯೋಗಿ ಜತೆಗೆ ರಂಗಭೂಮಿ ಕಲಾವಿದೆ. ರಂಗತಂಡದ ಸಂಪರ್ಕದಿಂದ ಈ ಚಿತ್ರಕ್ಕೆ ಅವಕಾಶ ದೊರೆಯಿತು. ಆಡಿಷನ್ ಮೂಲಕ ಆಯ್ಕೆಯಾದೆ. ಇಲ್ಲಿ ನನ್ನದು ಸಮುದ್ಯತಾ ಎಂಬ ಪಾತ್ರ. ಸಮುದ್ರಮಂಥನದ ವೇಳೆ ಜನಿಸಿದವಳನ್ನು ಸಮುದ್ಯತಾ ಎನ್ನುತ್ತಾರೆ. ಅವಳ ಮನಸ್ಸಿನೊಳಗೆ ಕೆಲ ಏರುಪೇರು, ತೊಳಲಾಟಗಳಿರುತ್ತವೆ. ಅದನ್ನು ಹೇಗೆ ಗೆಲ್ಲುತ್ತಾಳೆ? ಜತೆಗೆ ಹಳೆಯದ್ದನ್ನು ಯೋಚಿಸಿ ಕೊರಗುವುದಕ್ಕಿಂತ ಮುಂದೆ ಇರುವ ಸುಂದರವಾದ ಜೀವನವನ್ನು ಅನುಭವಿಸಬೇಕು ಎಂಬ ಸಾರವನ್ನು ತಿಳಿಸುವ ಪಾತ್ರ. ವರ್ಷದ ಮುಂಚೆಯೇ ನನಗೆ ಈ ಚಿತ್ರದ ಸ್ಕ್ರಿಪ್ಟ್ ಕೊಟ್ಟಿದ್ದರು. ಅದನ್ನು ಅಧ್ಯಯನ ಮಾಡಿದೆ. ಬಳಿಕ ಕೆಲ ತಿಂಗಳು ಪಾತ್ರಕ್ಕಾಗಿ ರಿಹರ್ಸಲ್ ಮಾಡಿದೆವು’ ಎಂದು ಹೇಳಿಕೊಳ್ಳುತ್ತಾರೆ.