ನೆಚ್ಚಿನ ನಟರು ವರ್ಷಕ್ಕೆ ಕನಿಷ್ಠ ಒಂದಾದರೂ ಸಿನಿಮಾ ಬಿಡುಗಡೆ ಮಾಡಲಿ ಎಂಬುದು ಅಭಿಮಾನಿಗಳ ದೊಡ್ಡ ಬೇಡಿಕೆ. ಪ್ಯಾನ್ ಇಂಡಿಯಾ, ಬಿಗ್ ಬಜೆಟ್... ಹೀಗೆ ಹಲವು ಲೆಕ್ಕಾಚಾರಗಳಿಂದಾಗಿ ಕೆಲ ನಟರು ವರ್ಷಕ್ಕೆ ಕೇವಲ ಒಂದು ಸಿನಿಮಾ ರಿಲೀಸ್ ಮಾಡಲು ಹರಸಾಹಸಪಡುತ್ತಾರೆ. ಆದರೆ, ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ, ಮಲಯಾಳಂ ನಟ ಮೋಹನ್ ಲಾಲ್ ವಿಚಾರದಲ್ಲಿ ಈ ಮಾತು ಸುಳ್ಳು. 65ರ ಹರೆಯದರಲ್ಲೂ ಅವರು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. 2025 ಒಂದು ವರ್ಷದಲ್ಲೇ ಎರಡು ವಿಶೇಷ ಪಾತ್ರ ಸೇರಿ ಆರು ಚಿತ್ರಗಳಲ್ಲಿ ಮಿಂಚಿದ್ದರು. ಅದರಲ್ಲಿ ‘ಎಲ್2: ಎಂಪುರಾನ್’, ‘ತುಡರುಂ’ ಹಾಗೂ ‘ಹೃದಯಪೂರ್ವಂ’ ಚಿತ್ರಗಳು ದೊಡ್ಡಮಟ್ಟದಲ್ಲಿ ಯಶಸ್ಸು ಕಂಡಿದ್ದವು. 1980ರಲ್ಲಿ ಅವರು ನಟಿಸಿದ ಮೊದಲ ಚಿತ್ರದಿಂದ ಹಿಡಿದು ಇದುವರೆಗೂ 46 ವರ್ಷಗಳಲ್ಲಿ ಸಿನಿಮಾ ಬಿಡುಗಡೆಯಾಗದ ವರ್ಷವೇ ಇಲ್ಲ. ಹೀಗಾಗಿಯೇ ಅವರು ನಟಿಸಿರುವ ಚಿತ್ರಗಳ ಸಂಖ್ಯೆ 360ಕ್ಕೂ ಅಧಿಕ. ಸದ್ಯ ಮೋಹನ್‌ಲಾಲ್ ಅಭಿನಯದ ‘ಪೇಟ್ರಿಯಾಟ್’, ‘ದೃಶ್ಯಂ 3’ ತೆರೆಗೆ ಬರಲು ಸಿದ್ಧವಾಗಿವೆ. ಹೀಗಿರುವಾಗಲೇ ಇತ್ತೀಚೆಗೆ ಅವರು, ನಿರ್ದೇಶಕ ತರುಣ್ ಮೂರ್ತಿ ಕಾಂಬಿನೇಷನ್‌ನಲ್ಲಿ 366ನೇ ಪ್ರಾಜೆಕ್ಟ್ ಘೋಷಿಸಿದ್ದರು. ಇನ್ನೇನು ಶೂಟಿಂಗ್‌ಗೆ ತೆರಳಬೇಕು ಎನ್ನುವಾಗಲೇ ಮೋಹನ್ ಲಾಲ್ ಮತ್ತೊಂದು ಖುಷಿ ಸುದ್ದಿ ನೀಡಿದ್ದು, 367ನೇ ಚಿತ್ರ ಘೋಷಿಸಿದ್ದಾರೆ. ಹೊಸ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ್ದು, ಟೈಟಲ್ ಅನೌನ್ಸ್ ಮಾಡಬೇಕಷ್ಟೇ. ಈ ಚಿತ್ರಕ್ಕೆ ‘ಮೆಪ್ಪಾಡಿಯನ್’ ಖ್ಯಾತಿಯ ವಿಷ್ಣು ಮೋಹನ್ ಆ್ಯಕ್ಷನ್-ಕಟ್ ಹೇಳಲಿದ್ದು, ಕೆಲವೇ ದಿನಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ. -ಏಜೆನ್ಸೀಸ್