ಮೇ 30ಕ್ಕೆ ‘ಕ್ರೇಜಿ-ಬ್ರಹ್ಮ’ ಅಭಿನಂದನೆ: ಹಿಟ್ ಜೋಡಿಯ 40 ವರ್ಷಗಳ ಸಂಗೀತ ಪಯಣದ ಸಂಭ್ರಮ

ರವಿಚಂದ್ರನ್​, ಹಂಸಲೇಖ
ರವಿಚಂದ್ರನ್​, ಹಂಸಲೇಖ
Published on

ಪ್ರಮುಖ ಮುಖ್ಯಾಂಶಗಳು

  • ಕೆಂಗೇರಿಯ ಅರೇನಾ ಗ್ರೌಂಡ್ ನಲ್ಲಿ ಕಾರ್ಯಕ್ರಮ
  • ತೆಲುಗು ನಟ ಚಿರಂಜೀವಿ, ನಟಿ ಶಿಲ್ಪಾ ನಟಿ ಭಾಗಿಯಾಗುವ ಸಾಧ್ಯತೆ
  • 10 ಸಾವಿರಕ್ಕೂ ಅಧಿಕ ಪ್ರೇಕ್ಷಕರ ಆಗಮನದ ನಿರೀಕ್ಷೆ
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ರೊಮ್ಯಾಂಟಿಕ್ ಹಾಡುಗಳ ಮೂಲಕವೇ ನಟ ರವಿಚಂದ್ರನ್ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಮೋಡಿ ಮಾಡಿದವರು. 80-90ರ ದಶಕದಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಈ ಜೋಡಿಗೆ ಸಲ್ಲುತ್ತದೆ. ‘ಪ್ರೇಮಲೋಕ’, ‘ರಣಧೀರ’, ‘ಅಂಜದಗಂಡು’, ‘ಶಾಂತಿ-ಕ್ರಾಂತಿ’ ಹೀಗೆ ಪಟ್ಟಿ ಸಾಗುತ್ತದೆ. ಇದೀಗ ಸುದೀರ್ಘ 40 ವರ್ಷಗಳ ಈ ಜೋಡಿಯ ಸಾಧನೆಗೆ ‘ಕ್ರೇಜಿ-ಬ್ರಹ್ಮ’ ಎಂಬ ಹೆಸರಿನಲ್ಲಿ ಅಭಿನಂದನೆ ಸಲ್ಲಿಸಲಾಗುತ್ತಿದೆ. ಮೇ 30ಕ್ಕೆ ಕೆಂಗೇರಿಯ ಜೆ.ಕೆ.ಗ್ರಾೃಂಡ್ ಅರೇನಾದಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಲಿದ್ದು, ಅಂದು ಸಂಜೆ 6ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ರಾತ್ರಿ 12ರವರೆಗೆ ಕಾರ್ಯಕ್ರಮ ನಡೆಯಲಿದೆ. ವೇದಿಕೆಯಲ್ಲಿ ರವಿಚಂದ್ರನ್- ಹಂಸಲೇಖ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ಸಿನಿಮಾಗಳ ಹಾಡುಗಳ ಗಾಯನ ನಡೆಯಲಿದೆ. ಟಾಲಿವುಡ್ ನಟ ಚಿರಂಜೀವಿ, ನಟಿ ಶಿಲ್ಪಾ ಶೆಟ್ಟಿ ಸೇರಿ ಹಲವು ಖ್ಯಾತ ತಾರೆಯರು ಭಾಗವಹಿಸಲಿದ್ದಾರೆ. ಇನ್ನು 10 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಕಾರ್ಯಕ್ರಮಕ್ಕೆ ಭಾಗಿಯಾಗುವ ನಿರೀಕ್ಷೆಯಿದೆ. ರವಿಚಂದ್ರನ್, ‘ಒಂದು ಸಂಬಂಧದಲ್ಲಿ ಬಿರುಕು ಬಿಟ್ಟಾಗ, ಸಂಭ್ರಮಿಸುವವರೇ ಜಾಸ್ತಿ. ಆದರೆ, ನಮ್ಮನ್ನು ಸೇರಿಸುವುದಕ್ಕೆ ಹಲವರು ಪ್ರಯತ್ನ ಮಾಡುತ್ತಿದ್ದಾರೆ. ನಮ್ಮಿಬ್ಬರದ್ದು ಚಿತ್ರರಂಗ ಕಂಡ ಬೆಸ್ಟ್ ಜೋಡಿ. ಸದ್ಯ ಜತೆಗೆ ಕೆಲಸ ಮಾಡದಿದ್ದರೂ, ಒಳ್ಳೆಯ ಸ್ನೇಹಿತರಾಗಿದ್ದೇವೆ. 40 ವರ್ಷಗಳ ಹಿಂದೆ ನನಗೆ ಏನೂ ಗೊತ್ತಿರಲಿಲ್ಲ. ಹಂಸಲೇಖ ಬರೆದುಕೊಟ್ಟಾಗಲೇ ಅದನ್ನು ಹೇಗೆ ತೆಗೆಯಬೇಕು ಎಂದು ಗೊತ್ತಾಗಿದ್ದು. ನನ್ನನ್ನು ಕ್ರೇಜಿ ಸ್ಟಾರ್ ಮಾಡಿದ್ದು ಅವರೇ. ಇವತ್ತಿಗೂ ನಾನು ಹೆಚ್ಚು ನಗುತ್ತೇನೆ ಎಂದರೆ, ಅದು ಅವರ ಜತೆಗೆ ಮಾತ್ರ. ಆ ನಗುವೇ ನಮ್ಮನ್ನು ಇಷ್ಟು ದೂರ ಕರೆದುಕೊಂಡು ಬಂದಿದೆ. ಆ ನಗುವಿನಿಂದಲೇ ನಾವು ಇಷ್ಟೊಂದು ಸಿನಿಮಾ ಮಾಡೋಕೆ ಸಾಧ್ಯವಾಗಿದೆ’ ಎಂದು ಹಂಸಲೇಖ ಒಡನಾಟವನ್ನು ನೆನೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net