

ಬೆಂಗಳೂರು: ತೆರೆ ಮೇಲೆ ನಾಯಕಿಯಾಗಿ ಮಿಂಚಿ ಬಳಿಕ ನಿರ್ದೇಶನಕ್ಕಿಳಿದ ಸ್ಯಾಂಡಲ್‌ವುಡ್ ನಟಿಯರ ಪಟ್ಟಿಯೇ ಇದೆ. ಈಗಾಗಲೇ ನಟಿಯರಾದ ಅಪೂರ್ವ (ಓ ನನ್ನ ಚೇತನಾ), ಸಿಂಧು ಶ್ರೀನಿವಾಸ್ ಮೂರ್ತಿ (ಆಚಾರ್ ಆ್ಯಂಡ್ ಕೋ), ಪ್ರಿಯಾ ಆಚಾರ್ (ಜಂಬೂ ಸವಾರಿ), ರಂಜಿನಿ ರಾಘವನ್ (ಡಿ ಡಿ ಢಿಕ್ಕಿ) ಡೈರೆಕ್ಟರ್ ಕ್ಯಾಪ್ ಧರಿಸಿದ್ದು, ಸದ್ಯ ಐಶಾನಿ ಶೆಟ್ಟಿ ‘ಕಾಜಾಣ’ ಮೂಲಕ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಹೀಗಿರುವಾಗಲೇ ಮತ್ತೊಬ್ಬ ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ ಆ್ಯಕ್ಷನ್-ಕಟ್ ಹೇಳಲು ರೆಡಿಯಾಗಿದ್ದಾರೆ. ಕನ್ನಡದ ‘ಕೆಂಡಸಂಪಿಗೆ’ (2015) ಮೂಲಕ ನಾಯಕಿಯಾಗಿ ಪದಾರ್ಪಣೆ ಮಾಡಿದ ಮಾನ್ವಿತಾ ಕಾಮತ್ ಬಳಿಕ ‘ಕನಕ’, ‘ಟಗರು’, ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸುತ್ತಿರುವಾಗಲೇ ಮಾನ್ವಿತಾ 2024ರಲ್ಲಿ ಸಂಗೀತ ನಿರ್ದೇಶಕ ಅರುಣ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಬಳಿಕ ‘ಅಪ್ಪ ಐ ಲವ್ ಯೂ’, ‘ಬ್ಯಾಡ್’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಅವರು ಕೆಲ ದಿನಗಳಿಂದ ಬ್ರೇಕ್ ಪಡೆದಿದ್ದರು. ಇದೀಗ ಅವರು ‘ರಾಜಸ್ಥಾನ್ ಡೈರೀಸ್’ ಮತ್ತು ‘ಹ್ಯಾಪಿಲಿ ಮ್ಯಾರೀಡ್’ ಸಿನಿಮಾಗಳಲ್ಲಿ ನಟಿಸುತ್ತಿರುವ ಸುದ್ದಿಯಿದ್ದು, ಅದರ ಮಧ್ಯೆಯೇ ಡೈರೆಕ್ಟರ್ ಕ್ಯಾಪ್ ಧರಿಸುತ್ತಿದ್ದಾರೆ. ನಿರ್ದೇಶನಕ್ಕಿಳಿಯುತ್ತಿರುವ ವಿಚಾರವನ್ನು ಮಾನ್ವಿತಾ ಕಾಮತ್ ಸ್ವತಃ ಅವರೇ ಖಚಿತಪಡಿಸಿದ್ದು, ಹೊಸ ಅವಕಾಶವನ್ನು ಸಮರ್ಥವಾಗಿ ನಿಭಾಯಿಸಲು ಎದುರು ನೋಡುತ್ತಿದ್ದಾರೆ. ಹಾಗೇ ಈ ಚಿತ್ರದಲ್ಲಿ ನಟಿ ರಚಿತಾ ರಾಮ್ ನಟಿಸಲಿದ್ದಾರೆ ಎಂಬ ಸುದ್ದಿಯೂ ಹಬ್ಬಿದ್ದು, ಆ ಬಗ್ಗೆ ಮಾನ್ವಿತಾ, ‘ರಚಿತಾ ರಾಮ್ ನಟಿಸುವ ವಿಚಾರವನ್ನು ನಾನು ಈಗಲೇ ಖಚಿತಪಡಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.