ಹೇಳೋದು ವೇದಾಂತ ತಿನ್ನೋದು ಬದನೆಕಾಯಿ... ಏನಿದು ಗೀತು? ನೀವೇಕೆ ಹೀಗೆ? ಟಾಕ್ಸಿಕ್​ ಡೈರೆಕ್ಟರ್​ಗೆ ಟಾಂಗ್​! Toxic

ನಿರ್ದೇಶಕಿ ಗೀತು ಮೋಹನ್​ದಾಸ್​ ಹಾಗೂ ರಾಕಿಂಗ್ ಸ್ಟಾರ್​ ಯಶ್​
ನಿರ್ದೇಶಕಿ ಗೀತು ಮೋಹನ್​ದಾಸ್​ ಹಾಗೂ ರಾಕಿಂಗ್ ಸ್ಟಾರ್​ ಯಶ್​
Published on

ಪ್ರಮುಖ ಮುಖ್ಯಾಂಶಗಳು

  • ರಾಕಿಂಗ್ ಸ್ಟಾರ್​ ಯಶ್​ ಹುಟ್ಟುಹಬ್ಬದ ಪ್ರಯುಕ್ತ ಬಿಡಗಡೆಯಾದ ಟಾಕ್ಸಿಕ್ ಸಿನಿಮಾ ಟೀಸರ್
  • ಸಾಮಾಜಿಕ​ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ ಬಹುನಿರೀಕ್ಷಿತ ಸಿನಿಮಾ
  • ಹಸಿಬಿಸಿ ದೃಶ್ಯಗಳ ಬೆನ್ನಲ್ಲೇ ನಿರ್ದೇಶಕಿ ಗೀತು ಮೋಹನ್​ದಾಸ್​ ವಿರುದ್ಧ ವ್ಯಾಪಕ ಟೀಕೆ
  • ಈ ಹಿಂದೆ ಗೀತು ಮಾಡಿದ್ದ ಕೆಲವು ಕಾಮೆಂಟ್​ಗಳು ಇದೀಗ ಅವರಿಗೆ ತಿರುಮಂತ್ರವಾಗಿದೆ
ಬೆಂಗಳೂರು: ನಿನ್ನೆ (ಜ.08) ರಾಕಿಂಗ್ ಸ್ಟಾರ್​ ಯಶ್​ ಹುಟ್ಟುಹಬ್ಬದ ಪ್ರಯುಕ್ತ ಬಿಡಗಡೆಯಾದ ಬಹುನಿರೀಕ್ಷಿತ ಟಾಕ್ಸಿಕ್ ( Toxic ) ಸಿನಿಮಾದ ಟೀಸರ್ ಸಾಮಾಜಿಕ​ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ. ಇದೇ ಮೊದಲ ಬಾರಿಗೆ ಯಶ್​ ಅವರು ಹಸಿಬಿಸಿ ದೃಶ್ಯಗಳಲ್ಲಿ ನಟಿಸಿರುವುದು ಎಲ್ಲರ ಹುಬ್ಬೇರಿಸಿದೆ. ಟೀಸರ್​ ಕಾರಿನ ದೃಶ್ಯದ ಬಗ್ಗೆ​ ಭಾರಿ ಚರ್ಚೆಯಾಗುತ್ತಿದೆ. ನಿರ್ದೇಶಕಿ ಗೀತು ಮೋಹನ್​ದಾಸ್​ ಇಂಥಾ ದೃಶ್ಯವನ್ನು ಅದ್ಹೇಗೆ ಚಿತ್ರೀಕರಿಸಿದರು ಎಂಬ ಅಭಿಪ್ರಾಯ ವ್ಯಕ್ತವಾಗುತ್ತದೆ. ಅಲ್ಲದೆ, ಈ ಹಿಂದೆ ಅವರು ಮಾಡಿದ್ದ ಕೆಲವು ಕಾಮೆಂಟ್​ಗಳು ಇದೀಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ​
ಗೀತು ಮೋಹನ್​ದಾಸ್​ ಅವರು ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕಿ. 2013ರಲ್ಲಿ ಅವರು ನಿರ್ದೇಶಿಸಿದ ಚೊಚ್ಚಲ ಫೀಚರ್ ಸಿನಿಮಾ 'ಲಯರ್ಸ್ ಡೈಸ್' (Liar's Dice) ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತು. ಅಲ್ಲದೆ, ಎರಡು ರಾಷ್ಟ್ರಪ್ರಶಸ್ತಿಗಳನ್ನು (ಅತ್ಯುತ್ತಮ ನಟಿ ಮತ್ತು ಅತ್ಯುತ್ತಮ ಛಾಯಾಗ್ರಹಣ) ಮುಡಿಗೇರಿಸಿಕೊಂಡಿತು. ಈ ಮೂಲಕ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿಯಾಗಿ ಗೀತು ಗುರುತಿಸಿಕೊಂಡಿದ್ದಾರೆ. ಇದೀಗ ಟಾಕ್ಸಿಕ್​ ಮೂಲಕ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಟೀಸರ್​ ಬಿಡುಗಡೆ ಬೆನ್ನಲ್ಲೇ ಈ ಹಿಂದಿನ ವಿವಾದವೊಂದು ಮುನ್ನೆಲೆ ಬಂದಿದ್ದು, ಗೀತು ಅವರು ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಗೀತು ವಿರುದ್ಧ ಮಲಯಾಳಂನ ಖ್ಯಾತ ನಟ ಮಮ್ಮುಟ್ಟಿ ಅವರ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಇದಕ್ಕೆ ಕಾರಣ 'ಕಸಬಾ' (Kasaba) ಚಿತ್ರದ ವಿವಾದ. 2017ರಲ್ಲಿ ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFK), ನಟಿ ಪಾರ್ವತಿ ತಿರುವೋತ್ತು ಅವರು ಮಮ್ಮುಟ್ಟಿ ಅಭಿನಯದ 'ಕಸಬಾ' ಚಿತ್ರವನ್ನು ಟೀಕಿಸಿದರು. ಈ ಸಿನಿಮಾದಲ್ಲಿ ಮಹಿಳೆಯರನ್ನು ಕೀಳಾಗಿ ಚಿತ್ರಿಸಲಾಗಿದೆ ಮತ್ತು ಮಹಿಳಾ ವಿರೋಧಿ ಸಂಭಾಷಣೆಗಳಿವೆ ಎಂದು ಬಹಿರಂಗವಾಗಿವೇ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಗೀತು ಮೋಹನ್‌ದಾಸ್ ಅವರು ಪಾರ್ವತಿ ಅವರಿಗೆ ಬೆಂಬಲ ನೀಡಿ, ಕಸಬಾ ಸಿನಿಮಾವನ್ನು ಟೀಕಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಮಮ್ಮುಟ್ಟಿ ಅಭಿಮಾನಿಗಳು ಆ ಸಮಯದಲ್ಲಿ ಜಾಲತಾಣದಲ್ಲಿ ಗೀತು ಮತ್ತು ಪಾರ್ವತಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
ಇದೀಗ ಟಾಕ್ಸಿಕ್​ ಸಿನಿಮಾದ ಟೀಸರ್​ ಬಿಡುಗಡೆಯಾಗಿದ್ದು, ಹಸಿಬಿಸಿ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಹಾಲಿವುಡ್​ ಸಿನಿಮಾಗಳಲ್ಲಿ ಇರುವಂತೆಯೇ ಟಾಕ್ಸಿಕ್​ ಸಿನಿಮಾದಲ್ಲಿ ಅಶ್ಲೀಲ ದೃಶ್ಯಗಳಿವೆ. ಆ ದೃಶ್ಯಗಳನ್ನು ಮನೆ ಮಂದಿ ಒಟ್ಟಿಗೆ ನೋಡಲು ಆಗುವುದಿಲ್ಲ. ಹೆಣ್ಣಿನ ಗೌರವದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡಿದ್ದ ಗೀತು, ಇದೀಗ ತಮ್ಮ ಚಿತ್ರದಲ್ಲಿ ಮಾಡಿರುವುದೇನು ಎಂದು ಪ್ರಶ್ನಿಸುತ್ತಿದ್ದಾರೆ. ಈ ಹಿಂದೆ ಕಸಬಾ ಸಿನಿಮಾದ ನಿರ್ದೇಶಕ ನಿತಿನ್ ರೆಂಜಿ ಪಣಿಕರ್ ಕೂಡ ಗೀತು ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ರಾಜ್ಯದ ಗಡಿ ದಾಟಿದ ಮೇಲೆ ನಿಮ್ಮ ಸ್ತ್ರೀವಾದದ ವ್ಯಾಖ್ಯಾನ ಬದಲಾಯಿತೇ? ಎಂದು ವ್ಯಂಗ್ಯವಾಡಿದ್ದರು.
ಅಂದಹಾಗೆ, ಗೀತು ಮೋಹನ್‌ದಾಸ್ ಅವರು 'ವುಮೆನ್ ಇನ್ ಸಿನಿಮಾ ಕಲೆಕ್ಟಿವ್' (WCC) ಸಂಘಟನೆಯ ಸಕ್ರಿಯ ಸದಸ್ಯರು. ಸಿನಿಮಾದಲ್ಲಿ ಮಹಿಳೆಯರ ಗೌರವದ ಬಗ್ಗೆ ಸದಾ ಧ್ವನಿ ಎತ್ತುತ್ತಿರುತ್ತಾರೆ. ಆದರೆ, ಈಗ ಒಂದು ದೊಡ್ಡ ಮಟ್ಟದ ಕಮರ್ಷಿಯಲ್ ಆಕ್ಷನ್ ಸಿನಿಮಾದಲ್ಲಿ ಅದೇ ಹೆಣ್ಣನ್ನು ಕಾಮದ ವಸ್ತುವಂತೆ ತೋರಿಸಿದ್ದಾರೆ ಎಂಬ ಆರೋಪ ಇದೆ. ನಿಮ್ಮ ಸ್ತ್ರೀವಾದ ಇಷ್ಟೇನಾ ಎಂದು ಮಮ್ಮುಟ್ಟಿ ಅಭಿಮಾನಿಗಳು ಮತ್ತು ವಿಮರ್ಶಕರು ಪ್ರಶ್ನಿಸುತ್ತಿದ್ದಾರೆ.

ದ್ವಂದ್ವ ನಿಲುವು

ಅಂದು ಮಮ್ಮುಟ್ಟಿ ಅವರ ಸಿನಿಮಾವನ್ನು ಮಹಿಳಾ ವಿರೋಧಿ ಎಂದು ಟೀಕಿಸಿದ್ದ ನೀವು, ಇಂದು ಯಶ್ ಅವರ ಸಿನಿಮಾದಲ್ಲಿ ಅದೇ ರೀತಿಯ 'ಪುರುಷ ಪ್ರಾಧಾನ್ಯತೆ' ಅಥವಾ ಅತಿರೇಕದ ಹಿಂಸೆಯನ್ನು ವೈಭವೀಕರಿಸುತ್ತಿದ್ದೀರಿ. ಹೆಣ್ಣಿನ ಬಗ್ಗೆ ಗೌರವದ ಮಾತುಗಳನ್ನಾಡಿದ್ದ ನೀವು ಇಂದು ಅದೇ ಹೆಣ್ಣನ್ನು ತುಂಬಾ ಅಶ್ಲೀಲವಾಗಿ ತೋರಿಸಿದ್ದೀರಿ. ನಿಮ್ಮದು ಇಬ್ಬಗೆಯ ನೀತಿ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಗೀತು ಅವರನ್ನು ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದಾರೆ.

ಸಖತ್​ ಸದ್ದು ಮಾಡುತ್ತಿರುವ ಟಾಕ್ಸಿಕ್​ ಟೀಸರ್​

ಅಂದಹಾಗೆ, ನಿನ್ನೆ ಬಿಡುಗಡೆಯಾಗಿರುವ 'ಟಾಕ್ಸಿಕ್' ಚಿತ್ರದ ಹೊಸ ಟೀಸರ್ ಸಂಚಲನ ಮೂಡಿಸಿದೆ. ಟೀಸರ್ ಮೂಲಕ ಯಶ್ ಅವರ ಪಾತ್ರದ ಹೆಸರನ್ನು 'ರಾಯ' ಎಂದು ಪರಿಚಯಿಸಲಾಗಿದೆ. ಈ ಮೊದಲಿನ ಪೋಸ್ಟರ್‌ಗಳಲ್ಲಿ ಕೇವಲ ಬೆನ್ನಿನ ಭಾಗ ಮಾತ್ರ ತೋರಿಸಲಾಗಿತ್ತು. ಈಗ ಯಶ್ ಅವರ ಪೂರ್ಣ ಖದರ್ ರಿವೀಲ್ ಆಗಿದೆ. ಯಶ್ ಅವರು ವಿಂಟೇಜ್ ಶೈಲಿಯ ಟಾಮಿ ಗನ್ ಹಿಡಿದು ವಿಲನ್‌ಗಳನ್ನು ಸದೆಬಡಿಯುವ ದೃಶ್ಯ ಫ್ಯಾನ್ಸ್‌ಗೆ ಭರ್ಜರಿ ಕಿಕ್ ನೀಡಿದೆ. ಅವರ ಸ್ಟೈಲ್ ಮತ್ತು ಗನ್ ಹಿಡಿದ ರೀತಿ ತುಂಬಾ ರಗಡ್ ಆಗಿದೆ.
ಟೀಸರ್ ಆರಂಭವಾಗುವುದೇ ಒಂದು ಸ್ಮಶಾನದ ದೃಶ್ಯದೊಂದಿಗೆ. ಅಲ್ಲಿ ನಡೆಯುತ್ತಿರುವ ಅಂತ್ಯಕ್ರಿಯೆಯ ನಡುವೆ ಯಶ್ ಅವರು ಕಾರಿನಲ್ಲಿ ಎಂಟ್ರಿ ಕೊಟ್ಟು, ಗುಂಡಿನ ಮಳೆ ಸುರಿಸುವುದೇ ಟೀಸರ್​ನ ಹೈಲೈಟ್. ಟೀಸರ್‌ನ ವಿಶುವಲ್ಸ್ ಮತ್ತು ಆಕ್ಷನ್ ಸನ್ನಿವೇಶಗಳು ಪಕ್ಕಾ ಹಾಲಿವುಡ್ ಗುಣಮಟ್ಟದಲ್ಲಿವೆ. ಸಿನಿಮಾದ ಕಲರ್ ಗ್ರೇಡಿಂಗ್ ಮತ್ತು ಕ್ಯಾಮೆರಾ ವರ್ಕ್ ಅಂತಾರಾಷ್ಟ್ರೀಯ ಮಟ್ಟದ ಚಿತ್ರಗಳನ್ನು ನೆನಪಿಸುತ್ತದೆ. ಟೀಸರ್ ಕೊನೆಯಲ್ಲಿ ಯಶ್ ಅವರು ಸಿಗಾರ್ ಹಚ್ಚುತ್ತಾ ಹೇಳುವ "Daddy's Home" ಎಂಬ ಸಂಭಾಷಣೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ. ಅಲ್ಲದೆ, ಟೀಸರ್‌ನಲ್ಲಿ ಯಶ್ ಅವರು ಕಾರಿನ ಒಳಗೆ ಯುವತಿಯೊಟ್ಟಿಗೆ ಇರುವ ಒಂದು ಬೋಲ್ಡ್ ದೃಶ್ಯವಿದ್ದು, ಇದು ಸಿನೆಮಾ ಎಷ್ಟು 'ರಾ' (Raw) ಆಗಿರಲಿದೆ ಎಂಬುದನ್ನು ತೋರಿಸುತ್ತದೆ.
ಈಗಾಗಲೇ ಘೋಷಣೆಯಾಗಿರುವಂತೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ , ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಅವರ ಪಾತ್ರಗಳು ಈ ಡಾರ್ಕ್ ಜಗತ್ತಿನಲ್ಲಿ ಎಷ್ಟು ಮುಖ್ಯ ಎಂಬುದನ್ನು ಟೀಸರ್ ಬಿಂಬಿಸುತ್ತದೆ. ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಯಶ್ ಅವರನ್ನು ಹಿಂದೆಂದೂ ಕಾಣದ ರೀತಿಯಲ್ಲಿ ತೋರಿಸಿದ್ದಾರೆ. ಕೇವಲ ಆಕ್ಷನ್ ಮಾತ್ರವಲ್ಲದೆ, ಒಂದು ಗಂಭೀರ ಮತ್ತು ತೀವ್ರವಾದ ಕಥೆ ಇದರಲ್ಲಿ ಅಡಗಿದೆ. ಟೀಸರ್‌ನ ಮ್ಯೂಸಿಕ್ ಸಖತ್ ಪವರ್‌ಫುಲ್ ಆಗಿದೆ. ಪ್ರತಿ ಶಬ್ದ ಮತ್ತು ಬಿಜಿಎಂ ದೃಶ್ಯದ ತೀವ್ರತೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.
ಟೀಸರ್​ನಲ್ಲಿ ಕೊನೆಯಲ್ಲಿ ಚಿತ್ರತಂಡ ಮತ್ತೊಮ್ಮೆ ಸಿನಿಮಾ ಬಿಡುಗಡೆಯ ದಿನಾಂಕವನ್ನು ಖಚಿತಪಡಿಸಿದೆ. ಮಾರ್ಚ್ 19, 2026 ರಂದು 'ಟಾಕ್ಸಿಕ್' ವಿಶ್ವದಾದ್ಯಂತ ತೆರೆಕಾಣಲಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net