‘ಆಲ್ಫಾ’ ಗೋಪಿಕಾ : ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮಲಯಾಳಿ ಸುಂದರಿ

ಗೋಪಿಕಾ ಸುರೇಶ್
ಗೋಪಿಕಾ ಸುರೇಶ್
Published on

ಪ್ರಮುಖ ಮುಖ್ಯಾಂಶಗಳು

  • ಸ್ಯಾಂಡಲ್ ವುಡ್ ಗೆ ಬಂದ ಮಲಯಾಳಿ ಸುಂದರಿ
  • 2021ರಲ್ಲಿ ಕೇರಳ ಮಿಸ್. ದಿವಾ ಆಗಿದ್ದ ಗೋಪಿಕಾ
  • ಬೆಂಗಳೂರಿಗೆ ಬಂದ ಕೆಲವೇ ವರ್ಷಗಳಲ್ಲಿ ಕನ್ನಡ ಕಲಿತ ನಟಿ
ಬೆಂಗಳೂರು : ಹುಟ್ಟಿ- ಬೆಳೆದಿದ್ದು ಕೇರಳದಲ್ಲಿ. ಬದುಕು ಕಟ್ಟಿಕೊಂಡಿದ್ದು ಬೆಂಗಳೂರಿನಲ್ಲಿ- ಇದು ನಟಿ ಗೋಪಿಕಾ ಸುರೇಶ್ ಬದುಕಿನ ಹಾದಿ. ಮೂಲತಃ ಕೇರಳದವರಾದ ಗೋಪಿಕಾಗೆ ಚಿಕ್ಕಂದಿನಿಂದಲೂ ಕಲೆಯ ಬಗ್ಗೆ ಅಪಾರ ಪ್ರೀತಿ. ಭರತನಾಟ್ಯ, ನೃತ್ಯ, ನಾಟಕ, ಮಾಡೆಲಿಂಗ್ ಹೀಗೆ ವಿವಿಧ ಕ್ಷೇತ್ರದಲ್ಲಿ ಅವರು ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಬೆಂಗಳೂರಿಗೆ ಬಂದು ಯಾವಾಗ ಮಾಡೆಲಿಂಗ್ ಆರಂಭಿಸಿದರೋ, ಆ ಬಳಿಕ ಅವರ ಅದೃಷ್ಟ ಬದಲಾಗಿದೆ. 2021ರಲ್ಲಿ ‘ಕೇರಳ ಮಿಸ್. ದಿವಾ’ ಕಿರೀಟಕ್ಕೆ ಭಾಜನರಾಗಿದ್ದ ಅವರು, ಇದೀಗ ಕನ್ನಡದ ‘ಆಲ್ಫಾ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುವ ತವಕದಲ್ಲಿರುವ ಗೋಪಿಕಾ ಸುರೇಶ್, ‘ಬೆಂಗಳೂರು ನನಗೆ ಜೀವನ ಕೊಟ್ಟಿದೆ. ಈ ಮೊದಲು ಕೇವಲ ಮಾಡೆಲಿಂಗ್‌ನಲ್ಲಿ ಮಾತ್ರ ಗುರುತಿಸಿಕೊಂಡಿದ್ದೆ. ಇದೀಗ ಕನ್ನಡ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದೇನೆ. ಒಂದೂವರೆ ವರ್ಷದ ಹಿಂದೆ ‘ಆಲ್ಫಾ’ ಟೀಂನಿಂದ ಆಡಿಷನ್‌ಗೆ ಕರೆ ಬಂತು. ವೃತ್ತಿ ಜೀವನದಲ್ಲಿ ಆಡಿಷನ್ ನೀಡಿದ್ದು ಅದೇ ಮೊದಲು. ಇಲ್ಲಿ ಆಕಾಂಕ್ಷಾ ಎಂಬ ಬೋಲ್ಡ್ ಪಾತ್ರದಲ್ಲಿದ್ದೇನೆ. ಅವಳು ಈ ಜನರೇಷನ್‌ನ ಮಾಡರ್ನ್ ಹುಡುಗಿಯರನ್ನು ಪ್ರತಿನಿಧಿಸುತ್ತಾಳೆ. ಇನ್ನು ‘ಆಲ್ಫಾ’ ಎಂಬ ಪದವನ್ನು ಪುರುಷರಿಗಷ್ಟೇ ಸೀಮಿತ ಮಾಡಬಾರದು. ಮಹಿಳೆಯರು ಕೂಡ ‘ಆಲ್ಫಾ’ಗಳೇ. ಮನೆಯಲ್ಲಿ ಅಮ್ಮ ಎಲ್ಲವನ್ನೂ ನಿರ್ವಹಿಸುತ್ತಾಳೆ, ಸವಾಲುಗಳನ್ನು ಎದುರಿಸುತ್ತಾಳೆ. ಹಾಗೆಯೇ ಅಕ್ಕ ಸಮಾಜದಲ್ಲಿ ಒಳ್ಳೆಯ ಹೆಸರಿನೊಂದಿಗೆ ಗುರುತಿಸಿಕೊಂಡಿದ್ದಾರೆ. ಹೀಗಿರುವಾಗ, ಆ ಪದಕ್ಕೆ ಚೌಕಟ್ಟು ಹಾಕಬಾರದು’ ಎನ್ನುತ್ತಾರೆ ನಟಿ. ‘ಆಲ್ಫಾ’ ಚಿತ್ರಕ್ಕೆ ‘ಗುರುದೇವ್ ಹೊಯ್ಸಳ’ ಖ್ಯಾತಿಯ ವಿಜಯ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಮಾಲೂರು ಮೂಲದ ಹೇಮಂತ್ ಕುಮಾರ್, ನಟಿಯರಾದ ಅಯನಾ, ಗೋಪಿಕಾ ಮುಖ್ಯಭೂಮಿಕೆಯಲ್ಲಿದ್ದಾರೆ. ಇದೇ 20ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

ಪ್ರೀತಿಯಿಂದ ಕನ್ನಡ ಕಲಿತೆ

ಕೇರಳದವರಾದರೂ ಇದೀಗ ಬೆಂಗಳೂರಿನಲ್ಲಿ ನೆಲೆನಿಂತಿರುವ ಗೋಪಿಕಾ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ. ತುಂಬಾ ಪ್ರೀತಿಯಿಂದ ಕನ್ನಡ ಕಲಿತೆ ಎನ್ನುವ ಅವರು, ‘‘ಆಲ್ಫಾ’ ಟೀಂ ಜತೆ ಮಾತನಾಡುತ್ತಲೇ ಕನ್ನಡ ಕಲಿತೆ. ಕನ್ನಡ ಭಾಷೆ, ನೆಲದ ಬಗ್ಗೆ ನನಗೆ ಅಪಾರ ಅಭಿಮಾನವಿದೆ. ‘ಅಲ್ಫಾ’ ಚಿತ್ರದ ರಗಡ್ ಡೈಲಾಗ್‌ಗಳು ಹೇಳಲು ಮೊದ ಮೊದಲು ಕಷ್ಟವಾಗುತ್ತಿತ್ತು ಜತೆಗೆ ಸವಾಲಾಗಿತ್ತು. ತುಂಬಾ ವರ್ಕ್‌ಶಾಪ್ ಮಾಡಿದೆವು. ಇದರಿಂದ ಪಾತ್ರ ಹಾಗೂ ಡೈಲಾಗ್ ಹೇಳಲು ಸುಲಭವಾಯಿತು. ಸದ್ಯ ಹಲವು ಕಥೆ ಕೇಳಿದ್ದರೂ, ‘ಆಲ್ಫಾ’ ರಿಲೀಸ್‌ಗೆ ಎದುರುನೋಡುತ್ತಿದ್ದೇನೆ’ ಎನ್ನುತ್ತಾರೆ ಗೋಪಿಕಾ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net