MAJESTIC-2 REVIEW: ಬೆವರು ಸುರಿಸಿ ದುಡಿಯುವವನಿಗೆ ರಕ್ತದ ಕಲೆ

ಮೆಜೆಸ್ಟಿಕ್ 2 ಪೋಸ್ಟರ್​
ಮೆಜೆಸ್ಟಿಕ್ 2 ಪೋಸ್ಟರ್​
Published on

ಪ್ರಮುಖ ಮುಖ್ಯಾಂಶಗಳು

  • ಆ್ಯಕ್ಷನ್​ ಡ್ರಾಮಾ ಮೆಜೆಸ್ಟಿಕ್ 2 ತೆರೆಗೆ
  • ಭರತ್​, ಸಂಹಿತಾ ವಿನ್ಯಾ ಅಭಿನಯದ ಸಿನಿಮಾ
  • ಸಿದ್ಧ ರೂಪದ ಚಿತ್ರ ಬರವಣಿಗೆಯಲ್ಲಿ ಹೊಸತನ ಕಡಿಮೆ
ಬೆಂಗಳೂರು: ‘ಮೆಜೆಸ್ಟಿಕ್’ ಟೈಟಲ್‌ಗೆ ಒಂದು ತೂಕವಿದೆ. ಏಕೆಂದರೆ, ಇದು ದರ್ಶನ್‌ರಂತಹ ಸ್ಟಾರ್ ನಟನನ್ನು ನಾಯಕನನ್ನಾಗಿ ಪರಿಚಯಿಸಿದ ಸಿನಿಮಾ. ಇದೀಗ ‘ಮೆಜೆಸ್ಟಿಕ್ 2’ ತೆರೆಗೆ ಬಂದಿದೆ. ಕಾಯಿಲೆಯಿಂದ ತೀರಿಹೋದ ತಂದೆ. ಹೂವು ಕಟ್ಟಿ ಬದುಕು ನಡೆಸುವ ತಾಯಿ. ಮನೆ ನಿರ್ವಹಣೆಯೇ ಕಷ್ಟ ಅನಿಸಿದಾಗ ಪುತ್ರ ದಾಸ (ಭರತ್) ಅರ್ಧಕ್ಕೆ ಓದು ಬಿಟ್ಟು, ಚಹಾ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಇಡೀ ಮೆಜೆಸ್ಟಿಕ್‌ನಲ್ಲಿರುವ ಅಂಗಡಿಗಳಿಗೆ ಚಹಾ ಮಾರಿ ಬದುಕು ಕಟ್ಟಿಕೊಳ್ಳಲು ಮುಂದಾಗುತ್ತಾನೆ. ಅದೇ ಸಮಯದಲ್ಲಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಪ್ರೀತಿ (ಸಂಹಿತಾ) ಪರಿಚಯವಾಗುತ್ತದೆ. ಜೀವನದಲ್ಲಿ ಎಷ್ಟೇ ಕಷ್ಟ ಇದ್ದರೂ ದಾಸನ ಪರೋಪಕಾರಿ ಗುಣ ಪ್ರೀತಿಗೆ ಇಷ್ಟವಾಗುತ್ತದೆ. ಆಕೆ ದಾಸನ ಪ್ರೀತಿಯ ದಾಸಿಯಾಗುತ್ತಾಳೆ. ಅದೊಂದು ದಿನ ಹೋಳಿ ಹಬ್ಬದ ಸಂಭ್ರಮ. ಇಬ್ಬರು ಪ್ರೇಮಿಗಳು ಬಣ್ಣದೋಕುಳಿಯಲ್ಲಿ ಮಿಂದೇಳುವಾಗ, ಅಲ್ಲಿಗೆ ಬರುವ ಬಂಗಾರಿ ಎಂಬ ರೌಡಿ ಚಹಾ ಮಾರುವ ದಾಸನಿಗೆ ಅವಮಾನಿಸುತ್ತಾನೆ. ಕೊನೆಗೆ ಪ್ರೀತಿ ಸೆರಗಿಗೆ ಕೈ ಹಾಕಲು ಹೋದಾಗ ದಾಸ, ಬಂಗಾರಿಯನ್ನು ಕೊಲೆ ಮಾಡುತ್ತಾನೆ. ಮುಂದೆ ದಾಸ, ಬಂಗಾರಿ ಶಿಷ್ಯರಾದ ಬಲರಾಮ ಮತ್ತು ಸಕ್ರೆಯ ಟಾರ್ಗೆಟ್ ಆಗುತ್ತಾನೆ. ಕ್ರಮೇಣ ಮೆಜೆಸ್ಟಿಕ್‌ನಲ್ಲಿ ಯಾವೆಲ್ಲ ರೀತಿಯಲ್ಲಿ ರಕ್ತ ಹರಿಯುತ್ತದೆ ಎಂಬುದೇ ‘ಮೆಜೆಸ್ಟಿಕ್ 2’ ಚಿತ್ರದ ಜೀವಾಳ. ನಿರ್ದೇಶಕ ರಾಮು ‘ಮೆಜೆಸ್ಟಿಕ್ 2’ ಮೂಲಕ ಆ್ಯಕ್ಷನ್-ಡ್ರಾಮಾ ಕಥೆ ಹೇಳಿದ್ದು, ನಿರೂಪಣೆ ಸಿದ್ಧ ರೂಪದಲ್ಲಿದೆ. ಹೊಸದು ಎನ್ನುವ ಅಂಶಗಳು ಕಡಿಮೆ. ಇಡೀ ಚಿತ್ರದಲ್ಲಿ ಸಾಹಸ ದೃಶ್ಯಗಳೇ ತುಂಬಿದ್ದು, ಕೆಲವೊಮ್ಮೆ ಪ್ರೇಕ್ಷಕನಿಗೆ ಕಿರಿಕಿರಿ ಅನಿಸುತ್ತವೆ. ಇನ್ನೊಂದಿಷ್ಟು ಚಿತ್ರಕಥೆ ಬರವಣಿಗೆ ಪಕ್ವವಾಗಬೇಕಿತ್ತು ಅನಿಸುತ್ತದೆ. ನಟ ಭರತ್ ಕುಮಾರ್ ಪಾತ್ರಕ್ಕೆ ಮತ್ತಷ್ಟು ತಯಾರಿ ಬೇಕಿತ್ತು. ಸಂಹಿತಾ ವಿನ್ಯಾ ಪಾತ್ರ ಅಂದವಾಗಿ ಮೂಡಿಬಂದಿದೆ. ಶ್ರುತಿ, ಕೋಟೆ ಪ್ರಭಾಕರ್, ಪೆಟ್ರೋಲ್ ಪ್ರಸನ್ನ ಕೊಟ್ಟ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net