Sukhibava Review - ಭಾವನಾತ್ಮಕ ಪಯಣದ ಅನುಭವ, "ಸುಖೀಭವ'

ಸುಖೀಭವ
ಸುಖೀಭವ
Published on
Sukhibava Review - "ಎ' ಚಿತ್ರದಲ್ಲಿ ಉಪೇಂದ್ರ, "ಈ ಪ್ರೀತಿ ಪ್ರೇಮ ಎಲ್ಲ ಪುಸ್ತಕದ ಬದನೇಕಾಯಿ' ಎಂದಿದ್ದರು. ಆದರೆ, "ಸುಖೀಭವ' ಚಿತ್ರದ ನಾಯಕ ವೈಭವ್​ಗೆ (ಮಹೇಂದ್ರ) ಪ್ರೀತಿಸಿದ ಹುಡುಗಿ ತಾರಾ (ಸುಷ್ಮಿತಾ), "ನೀನು ಸರಿಯಾಗಿ ಕ್ಲಾಸ್​ಗೇ ಬರಲ್ಲ. ಸರಿಯಾಗಿ ಓದೋದೂ ಇಲ್ಲ. ಚೆನ್ನಾಗಿ ಓದಿ ಏನಾದರೂ ಸಾಧಿಸಿಕೊಂಡು ಬಾ, ಆಮೇಲೆ ನೋಡೋಣ' ಅಂತ ಸವಾಲು ಹಾಕುತ್ತಾಳೆ. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡು, ಅಪ್ಪನಿಂದಲೂ ದೂರಾದ ವೈಭವ್​ಗೆ ಇತ್ತ ಪ್ರೀತಿಸಿದ ಹುಡುಗಿಯೂ ಸಿಗದ ದುಸ್ಥಿತಿಗೆ ಸಿಲುಕುತ್ತಾನೆ. ತಾನು ಗೌರವಿಸುವ ಚರ್ಚ್​ ಫಾದರ್​ ಬಳಿ ಮನಬಿಚ್ಚುತ್ತಾನೆ. ಅವರು, "ಓದದ ಹುಡುಗರನ್ನು ಯಾರೂ ಇಷ್ಟಪಡುವುದಿಲ್ಲ. ಚೆನ್ನಾಗಿ ಓದು' ಅಂತ ಬುದ್ಧಿವಾದ ಹೇಳುತ್ತಾರೆ. ಅದನ್ನೇ ಸವಾಲಾಗಿ ತೆಗೆದುಕೊಂಡು ಶಿಕ್ಷಣ ಮುಗಿಸಿ, ಕಷ್ಟ ಪಟ್ಟು ದುಡಿದು ಹಣ ಗಳಿಸುವ ವೈಭವ್​, "ಫಸ್ಟ್​ ಲವ್​ ಈಸ್​ ಬೆಸ್ಟ್​ ಲವ್​' ಅಂತ ತಾರಾಳನ್ನು ಪಡೆಯಲು ಹುಡುಕಾಡತೊಡಗುತ್ತಾನೆ. ಹಾಗಾದರೆ ತಾರಾ ಅವನಿಗೆ ಸಿಗುತ್ತಾಳಾ? ದೂರವಾದ ಆತನ ತಂದೆ ಮತ್ತೆ ಬರುತ್ತಾರಾ? "ಸುಖೀಭವ' ನೋಡಿ.
ನಿರ್ದೇಶಕ ರಾಜೇಶ್​ ನಾಯ್ಡು ಮೊದಲ ಪ್ರಯತ್ನದಲ್ಲಿಯೇ ಒಂದು ಸರಳ, ಸುಂದರ ಪ್ರೇಮಕಥೆಯನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಪ್ರೀತಿ, ಗೆಳೆತನ, ಸಂಬಂಧಗಳ ಮೌಲ್ಯಗಳ ಕುರಿತ ಉತ್ತಮ ಸಂದೇಶಗಳ ಜತೆಜತೆಗೆ ಕಾಮಿಡಿ, ಥ್ರಿಲ್ಲಿಂಗ್​, ಭಾವನಾತ್ಮಕ ಅಂಶಗಳು ಕಥೆಯನ್ನು ನೋಡಿಸಿಕೊಂಡು ಹೋಗುತ್ತವೆ. ಮಹೇಂದ್ರ, ಸುಷ್ಮಿತಾ, ಮಿಯಾನ್ಶಿ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹೊಸಬರ ಹೊಸ ಪ್ರಯತ್ನಕ್ಕೆ ಬೆನ್ನು ತಟ್ಟಲು ಇಚ್ಛಿಸುವವರು ಥಿಯೇಟರ್​ಗೆ ತೆರಳಿ ಸಿನಿಮಾ ನೋಡಿ "ಸುಖೀಭವ' ಎಂದು ತಂಡಕ್ಕೆ ಆಶೀರ್ವದಿಸಬಹುದು!
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net