love mocktail 3 review: ತಂದೆ-ಮಗಳ ಭಾವುಕ ಪಯಣ

ಲವ್ ಮಾಕ್ಟೇಲ್​ 3 ಪೋಸ್ಟರ್​
ಲವ್ ಮಾಕ್ಟೇಲ್​ 3 ಪೋಸ್ಟರ್​
Published on

ಪ್ರಮುಖ ಮುಖ್ಯಾಂಶಗಳು

  • ನಿರ್ದೇಶಕ ಕೃಷ್ಣ ಗಟ್ಟಿ ಬರವಣಿಗೆ, ಭಾವುಕ ನಿರೂಪಣೆ
  • ಇಡೀ ಕಥೆಯನ್ನು ಹೊತ್ತು ಸಾಗಿದ ಕೃಷ್ಣ- ಸಂವೃತ
  • ನಗಿಸುತ್ತಲೇ ಅಳಿಸುವ ಭಾವನಾತ್ಮಕ ಕಥೆ
ಚಿತ್ರ: ಲವ್ ಮಾಕ್ಟೇಲ್ 3
ನಿರ್ದೇಶನ: ಡಾರ್ಲಿಂಗ್ ಕೃಷ್ಣ
ತಾರಾಗಣ: ಡಾರ್ಲಿಂಗ್ ಕೃಷ್ಣ, ಸಂವೃತಾ, ಅಭಿಲಾಷ್ ದಳಪತಿ, ಮಿಲನಾ ನಾಗರಾಜ್, ರಜಿನಿ ಭಾರದ್ವಾಜ್ ಮತ್ತಿತರರು
ಶಿವ ಸ್ಥಾವರಮಠ
‘ಲವ್ ಮಾಕ್ಟೇಲ್’ ಚಿತ್ರವನ್ನು ಈಗಾಗಲೇ ಎರಡು ಭಾಗಗಳಲ್ಲಿ ತಂದು ಗೆದ್ದಿದ್ದ ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ಇದೀಗ ಮೂರನೇ ಭಾಗದ ಮೂಲಕ ಮತ್ತೆ ಪ್ರೇಕ್ಷಕರ ಮನಗೆದ್ದಿದ್ದಾರೆ. ಈ ಹಿಂದಿನ ಎರಡು ಭಾಗಗಳಲ್ಲಿ ನವಿರಾದ ಪ್ರೇಮ ಕಥೆ ಹೇಳಿದ್ದ ಅವರು ಟ್ರೀಕ್ವೆಲ್‌ನಲ್ಲಿ ತಂದೆ-ಮಗಳ ಭಾವುಕ ಸಂಬಂಧವನ್ನು ನಿರೂಪಿಸಿದ್ದಾರೆ. ಇಡೀ ಕಥೆಯು ಪ್ರೇಕ್ಷಕರನ್ನು ಭಾವುಕರನ್ನಾಗಿಸುವ ಜತೆಗೆ ಬರವಣಿಗೆಯಲ್ಲೂ ಕೃಷ್ಣ ಯಶಸ್ಸು ಸಾಧಿಸಿದ್ದಾರೆ.
ಚಿಕ್ಕಮಗಳೂರಿನ ಅನಾಥಾಶ್ರಮದಿಂದ ಆದಿ (ಕೃಷ್ಣ) ಹೆಣ್ಣು ಮಗು ದತ್ತು ತೆಗೆದುಕೊಳ್ಳುವ ಮೂಲಕ ಎರಡನೇ ಭಾಗ ಅಂತ್ಯವಾಗಿತ್ತು. ಮೂರನೇ ಭಾಗ ಆ ಮಗುವಿನಿಂದಲೇ ಆರಂಭವಾಗುತ್ತದೆ. ದಿವಂಗತ ಪತ್ನಿ ನಿಧಿ ಹೆಸರನ್ನೇ ದತ್ತು ಮಗಳಿಗೂ ಆದಿ ಹೆಸರಿಡುತ್ತಾನೆ. ಹಾಗೆಯೇ, ಅಷ್ಟೇ ಶಿಸ್ತಿನಿಂದ ಮಗಳನ್ನು ಬೆಳೆಸುತ್ತಾನೆ. ಆದರೆ, ನಿಧಿ ಮಾತ್ರ ತುಂಬ ತುಂಟಿ. ಶಾಲೆಯಲ್ಲಿ ಮಗಳು ಮಾಡುವ ತರಲೆ, ಕೀಟಲೆಯಿಂದಾಗಿ ಆದಿಗೆ ಮೂರು ದಿನಕ್ಕೊಮ್ಮೆಯಾದರೂ ಶಾಲೆಯಿಂದ ಬುಲಾವ್ ಬರುತ್ತಿರುತ್ತದೆ. ಆದರೂ, ಆದಿ ಎಂದಿಗೂ ಮಗಳ ಪರ. ಹೀಗೆ ಸಹಜವಾಗಿ ತಂದೆ-ಮಗಳ ಪಯಣ ಹೋಗುತ್ತಿರುವಾಗಲೇ ದಿಢೀರನೆ ಆದಿ ಕೋರ್ಟ್ ಕಟಕಟೆ ಹತ್ತಬೇಕಾಗುತ್ತದೆ. ಆಗ ಇಡೀ ಕಥೆಯ ದಿಕ್ಕೇ ಬದಲಾಗಿಬಿಡುತ್ತದೆ. ಅಷ್ಟಕ್ಕೂ, ಆದಿ ಕೋರ್ಟ್ ಮೆಟ್ಟಿಲು ಹತ್ತಲು ಕಾರಣವೇನು? ಆದಿ ಅಂತಹ ಗಂಭೀರ ತಪ್ಪೇನಾದರೂ ಮಾಡಿರುತ್ತಾನಾ? ತಂದೆ ಕೋರ್ಟ್ ಮೆಟ್ಟಿಲು ಹತ್ತಿರುವಾಗ ಮಗಳು ನಿಧಿಯ ಪರಿಸ್ಥಿತಿ ಏನು? ಆದಿ ಜೈಲು ಸೇರುತ್ತಾನಾ? ತಂದೆ-ಮಗಳು ಒಂದಾಗುತ್ತಾರಾ? ದೂರಾಗುತ್ತಾರಾ? ತಿಳಿಯಲು ‘ಲವ್ ಮಾಕ್ಟೇಲ್ 3’ ನೋಡಬೇಕಷ್ಟೇ.
ಡಾರ್ಲಿಂಗ್ ಕೃಷ್ಣ ಇಡೀ ಕಥೆಯನ್ನು ನವಿರಾದ ಹಾಸ್ಯ ಹಾಗೂ ತೀವ್ರ ಭಾವುಕವಾಗಿ ನಿರೂಪಿಸಿದ್ದು, ಬರವಣಿಗೆಯಲ್ಲಿ ಗೆದ್ದಿದ್ದಾರೆ. ಇಲ್ಲಿ ಕೃಷ್ಣ ಬರವಣಿಗೆ ಮತ್ತು ಬೇಬಿ ಸಂವೃತ ನಟನೆಯೇ ಚಿತ್ರದ ಹೈಲೈಟ್. ಎಲ್ಲಿಯೂ ನಿಧಾನ ಅನಿಸದೆ ನಗಿಸುತ್ತ, ಅಳಿಸುತ್ತಲೇ ಸಾಗುತ್ತಾರೆ ಕೃಷ್ಣ. ಹಾಗಾಗಿ, ಈ ಚಿತ್ರದ ಇಡೀ ಕ್ರೆಡಿಟ್ ಅವರಿಗೇ ಸಲ್ಲಬೇಕು. ಮೊದಲರ್ಧ ತಂದೆ-ಮಗಳು, ಜಗ್ಗು ಮಮ್ಮಿ, ವಿಜ್ಜು ಮಾಮ ನಡುವೆ ಸಾಗಿದರೆ ದ್ವಿತೀಯಾರ್ಧದ ಕಥೆ ಕೋರ್ಟ್ ಮೆಟ್ಟಿಲೇರುತ್ತದೆ. ಈ ಸಮಯದಲ್ಲಿ ಪ್ರೇಕ್ಷಕರ ಕಣ್ಣು ಒದ್ದೆಯಾಗದೆ ಇರದು. ಬೇಬಿ ಸಂವೃತ ನಟನೆಯಲ್ಲಿ ಮಿಂಚಿದ್ದು, ಭಾವುಕ ದೃಶ್ಯಗಳಲ್ಲಿ ಗಮನ ಸೆಳೆಯುತ್ತಾರೆ. ಜಗ್ಗು ಮಮ್ಮಿ ಪಾತ್ರಧಾರಿ ನಗಿಸುವ ಜತೆಗೆ ಕೊನೆಗೆ ಅಳಿಸುತ್ತಾರೆ. ಉಳಿದಂತೆ ಅಮೃತಾ ಅಯ್ಯಂಗಾರ್, ರೇಚೆಲ್ ಡೇವಿಡ್, ಮಿಲನಾ ಪಾತ್ರಗಳು ಕೆಲವೇ ದೃಶ್ಯಗಳಿಗೆ ಸೀಮಿತವಾಗಿವೆ.
ರೇಟಿಂಗ್: 3.5
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net