‘ಲವ್ ಮಾಕ್ಟೇಲ್ 3’ ಕಥೆ ವಿವಾದ ಸುಖಾಂತ್ಯ : ಫಿಲಂ ಚೇಂಬರ್‌ನಲ್ಲಿ ಡಾರ್ಲಿಂಗ್ ಕೃಷ್ಣ-ಗುರು ದೇಶಪಾಂಡೆ ಮಧ್ಯೆ ಸಂಧಾನ ಯಶಸ್ವಿ

ಫಿಲಂ ಚೇಂಬರ್ ಪದಾಧಿಕಾರಿಗಳ ಜತೆ ಡಾರ್ಲಿಂಗ್ ಕೃಷ್ಣ, ಗುರು ದೇಶಪಾಂಡೆ
ಫಿಲಂ ಚೇಂಬರ್ ಪದಾಧಿಕಾರಿಗಳ ಜತೆ ಡಾರ್ಲಿಂಗ್ ಕೃಷ್ಣ, ಗುರು ದೇಶಪಾಂಡೆ
Published on

ಪ್ರಮುಖ ಮುಖ್ಯಾಂಶಗಳು

  • ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲಾ ಅಧ್ಯಕ್ಷೆಯಲ್ಲಿ ಸಂಧಾನ
  • ಭಿನ್ನಾಭಿಪ್ರಾಯ ಮರೆತು ಒಂದಾದ ಗುರು-ಕೃಷ್ಣ
  • ಬಗೆಹರಿದ ಲವ್ ಮಾಕ್ಟೇಲ್ 3 ವಿವಾದ
ಬೆಂಗಳೂರು: ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿದ್ದ ‘ಲವ್ ಮಾಕ್ಟೇಲ್ 3’ ಮಾ.19ರಂದು ರಿಲೀಸ್ ಆಗಿತ್ತು. ಅದರ ಬೆನ್ನಲ್ಲೇ ಚಿತ್ರದ ದ್ವಿತೀಯಾರ್ಧದ ಕಥೆ ಕದಿಯಲಾಗಿದೆ ಎಂದು ನಿರ್ದೇಶಕರಾದ ಗುರು ದೇಶಪಾಂಡೆ ಮತ್ತು ರಾಘವೇಂದ್ರ ನಾಯಕ್, ಡಾರ್ಲಿಂಗ್ ಕೃಷ್ಣ ವಿರುದ್ಧ ಆರೋಪಿಸಿದ್ದರು. ಅದನ್ನು ಕೃಷ್ಣ ಮತ್ತು ಮಿಲನ ಅಲ್ಲಗಳೆದಿದ್ದರು. ಬಳಿಕ ಗುರು ದೇಶಪಾಂಡೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದರೆ, ಕೃಷ್ಣ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರು. ಈ ವಿವಾದ ತಾರಕ್ಕಕ್ಕೇರುವ ಮುನ್ನವೇ ವಾಣಿಜ್ಯ ಮಂಡಳಿ ಮಧ್ಯಪ್ರವೇಶಿಸಿದ್ದು, ಉಭಯ ಬಣಗಳ ನಡುವೆ ಸಂಧಾನ ಮಾಡಿಸಿದೆ. ಆ ಮೂಲಕ ಕೃಷ್ಣ ಮತ್ತು ಗುರು ದೇಶಪಾಂಡೆ, ರಾಘವೇಂದ್ರ ನಾಯಕ್ ನಡುವಿನ ವಿರಸ ಸುಖಾಂತ್ಯ ಕಂಡಿದ್ದು, ವಿವಾದಕ್ಕೆ ತೆರೆ ಬಿದ್ದಿದೆ. ಫಿಲಂ ಚೇಂಬರ್ ಅಧ್ಯಕ್ಷೆ ಡಾ. ಜಯಮಾಲಾ, ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್‌ಕೆ. ವಿಶ್ವನಾಥ್, ಕೆ.ವಿ. ಚಂದ್ರಶೇಖರ್, ಎ. ಗಣೇಶ್, ರಮೇಶ್ ಯಾದವ್ ಮತ್ತು ಹಿರಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಎರಡು ಬಣದವರು ವಿರಸ ಬಿಟ್ಟು ಸಂಧಾನಕ್ಕೆ ಒಪ್ಪಿಕೊಂಡಿದ್ದಾರೆ. ಹಿರಿಯರ ಮಾರ್ಗದರ್ಶನಕ್ಕೆ ಮನ್ನಣೆ ನೀಡುವ ನಿಟ್ಟಿನಲ್ಲಿ ಭಿನ್ನಾಭಿಪ್ರಾಯ ಮರೆತು, ಸೌಹಾರ್ದದಿಂದ ಇರುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಫಿಲಂ ಚೇಂಬರ್‌ನಲ್ಲಿ ಗುರು ದೇಶಪಾಂಡೆ ನೀಡಿದ್ದ ದೂರು ವಾಪಸ್ಸು ಪಡೆದಿದ್ದು, ಹಾಗೆಯೇ ಡಾರ್ಲಿಂಗ್ ಕೃಷ್ಣ ಕೂಡ ಗುರು ದೇಶಪಾಂಡೆ ಬಗ್ಗೆ ವೈಯಕ್ತಿಕವಾಗಿ ಮಾತನಾಡಿದ್ದಕ್ಕೆ ಕ್ಷಮೆ ಯಾಚಿಸಿ, ಪ್ರಕರಣವನ್ನು ಕಾನೂನು ಮಟ್ಟಕ್ಕೆ ಕೊಂಡೊಯ್ಯುದಿರಲು ನಿರ್ಧರಿಸಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net