ಬೆಂಗಳೂರು : ಕರ್ನಾಟಕ ರತ್ನ, ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿನಯಿಸಿದ್ದ ‘ಕೋಟಿಗೊಬ್ಬ’ 2001ರಲ್ಲಿ ರಿಲೀಸ್ ಆಗಿ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ರಾಜ್ಯಾದ್ಯಂತ 200ಕ್ಕೂ ಅಧಿಕ ದಿನಗಳ ಕಾಲ ಭರ್ಜರಿ ಪ್ರದರ್ಶನ ಕಂಡಿದ್ದ ಈ ಚಿತ್ರಕ್ಕೆ ಹೆಚ್ಚು ಜನ ಮೆಚ್ಚುಗೆ ವ್ಯಕ್ತವಾಗಿತ್ತು. ನಾಗಣ್ಣ ನಿರ್ದೇಶನದ ಚಿತ್ರದಲ್ಲಿ ಡಾ.ವಿಷ್ಣುವರ್ಧನ್‌ಗೆ ಪ್ರಿಯಾಂಕಾ ಉಪೇಂದ್ರ ಜೋಡಿಯಾಗಿದ್ದರು. ದೇವರಾಜ್, ಅಭಿಜಿತ್, ಅಶಿಷ್ ವಿದ್ಯಾರ್ಥಿ, ರಮೇಶ್ ಭಟ್ ಸೇರಿ ಹಲವರು ಅಭಿನಯಿಸಿದ್ದರು. ಇದೀಗ ‘ಕೋಟಿಗೊಬ್ಬ’ ಸಿನಿಮಾ ತೆರೆಕಂಡು 25 ವರ್ಷಗಳು ಸಂದಿವೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರತಂಡವು ಬೆಳ್ಳಿ ಹಬ್ಬದ ಸಂಭ್ರಮ ಆಯೋಜಿಸಿತ್ತು. ಉಪೇಂದ್ರ, ‘ವಿಷ್ಣು ಸರ್ ಮಾತನಾಡಿಸಲೆಂದೇ ಅವರ ಮನೆಗೆ ಹೋಗುತ್ತಿದ್ದೆ. ಅಧ್ಯಾತ್ಮ, ದೇವರ ಬಗ್ಗೆ ಅವರು ತುಂಬಾ ಹೊತ್ತು ಮಾತನಾಡುತ್ತಿದ್ದರು. ಅಂಥ ಮಹಾನ್ ವ್ಯಕ್ತಿಯ ಮಾತು ಕೇಳುವುದೇ ಪುಣ್ಯ. ಅವರಿಂದ ನಾನು ಸ್ಪೂರ್ತಿ ಪಡೆಯುತ್ತಿದ್ದೆ. ನಿಮ್ಮ ಸಿನಿಮಾಗಳು ಬೇರೆಯದೇ ಪ್ರೇಕ್ಷಕರನ್ನು ಹುಟ್ಟು ಹಾಕುತ್ತಿವೆ ಎಂದು ನನ್ನ ಸಿನಿಮಾಗಳ ಬಗ್ಗೆ ವಿಷ್ಣು ಸರ್ ಮೆಚ್ಚಿಕೊಂಡಿದ್ದರು’ ಎಂದರು. ಪ್ರಿಯಾಂಕಾ ಉಪೇಂದ್ರ, ‘ಈ ಚಿತ್ರದ ಮೂಲಕ ಹೃದಯವಂತ ವ್ಯಕ್ತಿಯ ಜತೆ ನಟಿಸುವ ಅವಕಾಶ ಸಿಕ್ಕಿದ್ದು, ನನ್ನ ಬದುಕಿನ ಪುಣ್ಯ’ ಎಂದರು. ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ, ನಿರ್ದೇಶಕ ನಾಗಣ್ಣ, ನಿರ್ಮಾಪಕ ಸೂರಪ್ಪ ಬಾಬು, ಹಿರಿಯ ನಟ ದೇವರಾಜ್, ನಟಿ ಪ್ರಿಯಾಂಕಾ ಉಪೇಂದ್ರ, ಗುರುದತ್, ಸಾಹಿತಿ ಕೆ.ಕಲ್ಯಾಣ್ ಇದ್ದರು.