‘ಕೊರಗಜ್ಜ’ ರೀಲ್ಸ್ ಸ್ಪರ್ಧೆ : ಚಿತ್ರದ ಹಾಡು ಬಳಸಿ ರೀಲ್ಸ್ ಮಾಡಿ, ಆಕರ್ಷಕ ಬಹುಮಾನ ಗೆಲ್ಲಿ!

ಕೊರಗಜ್ಜ ಚಿತ್ರತಂಡ
ಕೊರಗಜ್ಜ ಚಿತ್ರತಂಡ
Published on

ಪ್ರಮುಖ ಮುಖ್ಯಾಂಶಗಳು

  • ಕೊರಗಜ್ಜ ಚಿತ್ರದ ಆರು ಹಾಡುಗಳು ಜೀ ಮ್ಯೂಸಿಕ್ ನಲ್ಲಿ ರಿಲೀಸ್
  • ಹಾಡುಗಳು ಹೆಚ್ಚು ತಲುಪಿಸುವ ನಿಟ್ಟಿನಲ್ಲಿ ಚಿತ್ರತಂಡದಿಂದ ರೀಲ್ಸ್ ಸ್ಪರ್ಧೆ ಆಯೋಜನೆ
  • ಹಾಡುಗಳಿಗೆ ರೀಲ್ಸ್ ಬಹುಮೌಲ್ಯದ ಬಹುಮಾನ ಗೆಲ್ಲುವ ಅವಕಾಶ ನೀಡಿದ ಚಿತ್ರತಂಡ
ಬೆಂಗಳೂರು : ತ್ರಿವಿಕ್ರಮ್ ಸಪಲ್ಯ ನಿರ್ಮಾಣದ ಹಾಗೂ ಸುಧೀರ್ ಅತ್ತಾವರ ನಿರ್ದೇಶನದ ‘ಕೊರಗಜ್ಜ’ ಚಿತ್ರವು ವಿಭಿನ್ನ ಪ್ರಚಾರದ ಮೂಲಕ ಸದ್ದು ಮಾಡುತ್ತಿದೆ. ಈಗಾಗಲೇ ‘3ಡಿ’ ಪೋಸ್ಟರ್ ಹಾಗೂ ‘ಗುಳಿಗ ಗುಳಿಗ ಸಾಂಗ್’ ಮೂಲಕ ಹೆಚ್ಚು ಪ್ರಚಾರ ಗಳಿಸಿರುವ ಚಿತ್ರತಂಡ ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗುತ್ತಿದೆ. ಹೊಸ ವರ್ಷದ ನಿಮಿತ್ತ ‘ಕೊರಗಜ್ಜ’ ಚಿತ್ರದ ‘ಗಾಳಿ ಗಂಧ’ ಸೇರಿ ಆರು ಹಾಡುಗಳು ಜೀ ಮ್ಯೂಸಿಕ್‌ನಲ್ಲಿ ರಿಲೀಸ್ ಆಗಿವೆ. ಈ ಹಾಡುಗಳು ಹೆಚ್ಚಿನ ಪ್ರೇಕ್ಷಕರಿಗೆ ತಲುಪಿಸುವ ನಿಟ್ಟಿನಲ್ಲಿ ಹಾಗೂ ಸಿನಿಮಾ ಪ್ರಚಾರಕ್ಕಾಗಿ ಚಿತ್ರತಂಡ ರೀಲ್ಸ್ ಸ್ಪರ್ಧೆ ಆಯೋಜಿಸಿದೆ. ‘ಕೊರಗಜ್ಜ’ ಹಾಡುಗಳನ್ನು ಬಳಸಿಕೊಂಡು ವಿಭಿನ್ನವಾಗಿ ರೀಲ್ಸ್ ಮಾಡಿದವರಿಗೆ ಚಿತ್ರತಂಡ ಬಹುಮೊತ್ತದ ಬಹುಮಾನ ನೀಡಲಿದೆ. ಈ ಬಗ್ಗೆ ಸುಧೀರ್ ಅತ್ತಾವರ, ‘‘ಕೊರಗಜ್ಜ’ ಚಿತ್ರದ ಏಳು ಹಾಡುಗಳು ಜೀ ಮ್ಯೂಸಿಕ್‌ನಲ್ಲಿ ರಿಲೀಸ್ ಆಗಿವೆ. ಹಾಡುಗಳ ಸಾಹಿತ್ಯ ಹಾಗೂ ಸಂಗೀತ ಹೆಚ್ಚು ಜನರಿಗೆ ತಲುಪಬೇಕು ಎಂಬ ಉದ್ದೇಶದಿಂದ ರೀಲ್ಸ್ ಸ್ಪರ್ಧೆ ಆಯೋಜಿಸಿದ್ದೇವೆ. ಚಿತ್ರದ ಹಾಡುಗಳನ್ನು ಬಳಸಿಕೊಂಡು ಸೃಜನಶೀಲ, ವಿಭಿನ್ನವಾಗಿ ರೀಲ್ಸ್ ಮಾಡಿದವರಿಗೆ ಬಹುಮೊತ್ತದ ಬಹುಮಾನ ನೀಡಲಿದ್ದೇವೆ. ರೀಲ್ಸ್ ಚಿತ್ರದ ಹಾಡಿಗೆ ಜೀವ ತುಂಬುವಂತಿದ್ದು, ಹೆಚ್ಚು ವೀಕ್ಷಣೆ, ಲೈಕ್ ಪಡೆದಿರಬೇಕು. ರಾಜ್ಯದ 31 ಜಿಲ್ಲೆಗಳಿಂದ ಪ್ರತ್ಯೇಕವಾಗಿ ವಿಜೇತರನ್ನು ಆಯ್ಕೆ ಮಾಡಲಿದ್ದೇವೆ. ಈ ಸ್ಪರ್ಧೆಯು ಸಿನಿಮಾ ರಿಲೀಸ್ ಆದ ವಾರದವರೆಗೆ ನಡೆಯಲಿದ್ದು, ಪ್ರತಿ ವಾರವೂ ವಿಜೇತರ ಆಯ್ಕೆ ನಡೆಯಲಿದೆ. ಬಹುಮೌಲ್ಯದ ವಿವಿಧ ರೂಪದ ಬಹುಮಾನಗಳನ್ನು ವಿಜೇತರು ತಮ್ಮದಾಗಿಸಿಕೊಳ್ಳಬಹುದಾಗಿದೆ. ಅಂತಿಮವಾಗಿ ಅತ್ಯುತ್ತಮವಾಗಿ ರೀಲ್ಸ್ ಮಾಡಿದ ಮೂವರಿಗೆ ವಿದೇಶ ಟ್ರಿಪ್‌ಗೆ ಕಳುಹಿಸಿಕೊಡಲಾಗುವುದು. ವಿದ್ಯಾರ್ಥಿಗಳು, ದಂಪತಿ, ಹಿರಿಯರು ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ರೀಲ್ಸ್ ಮಾಡಿದವರು ‘ಕೊರಗಜ್ಜ’ ಚಿತ್ರತಂಡವನ್ನು ಟ್ಯಾಗ್ ಮಾಡಬೇಕಿದ್ದು, ಇದಕ್ಕಾಗಿ ಮೂವರು ಹಿರಿಯ ಕಲಾವಿದರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು. ಸದ್ಯ ರಿಲೀಸ್‌ಗೆ ಸಿದ್ಧವಾಗಿರುವ ‘ಕೊರಗಜ್ಜ’ ಚಿತ್ರದಲ್ಲಿ ಕಬೀರ್ ಬೇಡಿ, ಸಂದೀಪ್ ಸೋಪರ್ಕರ್, ಗಣೇಶ್ ಆಚಾರ್ಯ, ನಟಿಯರಾದ ಶ್ರುತಿ, ಭವ್ಯಾ ಮುಖ್ಯಭೂಮಿಕೆಯಲ್ಲಿದ್ದಾರೆ. ಚಿತ್ರಕ್ಕೆ ಗೋಪಿ ಸುಂದರ್ ಸಂಗೀತವಿದೆ. ವಿದ್ಯಾಧರ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಆರು ಹಾಡು ರಿಲೀಸ್:

‘ಕೊರಗಜ್ಜ’ ಚಿತ್ರದ ‘ಗಾಳಿ ಗಂಧ’ ಸೇರಿ ಆರು ಹಾಡುಗಳು ಆರು ಭಾಷೆಯಲ್ಲಿ ರಿಲೀಸ್ ಮಾಡಲಾಯಿತು. ಬಿಗ್‌ಎ್ಎಂ 92.7 ಸೇರಿ 300ಕ್ಕೂ ಅಧಿಕ ಆಡಿಯೋ ಪ್ಲಾಟ್ ಫಾರಂಗಳಲ್ಲಿ ಹಾಡುಗಳು ಲಭ್ಯಇವೆ. ಬಾಲಿವುಡ್ ನಟಿ, ಗಾಯಕಿ ಶೆರೋನ್ ಪ್ರಭಾಕರ್, ನಾಗತಿಹಳ್ಳಿ ಚಂದ್ರಶೇಖರ್ ಚಿತ್ರದ ಹಾಡುಗಳಿಗೆ ಮೆಚ್ಚಿ, ತಂಡಕ್ಕೆ ಶುಭ ಕೋರಿದರು. ಶೆರೋನ್ ಪ್ರಭಾಕರ್, ‘ಚಿತ್ರದ ಹಾಡುಗಳು ಸೆಲೆಬ್ರೇಟ್ ಮಾಡುವ ರೀತಿಯಲ್ಲಿ ಚೆನ್ನಾಗಿ ಮೂಡಿಬಂದಿವೆ. ಸುಧೀರ್ ಅತ್ತಾವರ ತಂಡ ಹಲವು ಸವಾಲುಗಳನ್ನು ಎದುರಿಸಿ, ಈ ಸಿನಿಮಾ ಮಾಡಿದ್ದು, ಯಶಸ್ಸು ಸಿಗಲಿ’ ಎಂದು ಹಾರೈಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net