ಯಾರು ಆ ಮಾಯಾವಿ?: ಕುತೂಹಲ ಹೆಚ್ಚಿಸಿದ ‘ಕೊರಗಜ್ಜ’ ಚಿತ್ರದ ಟ್ರೇಲರ್ KORAGAJJA

ತ್ರಿವಿಕ್ರಮ್ ಸಪಲ್ಯ ನಿರ್ಮಾಣದ, ಸುಧೀರ್ ಅತ್ತಾವರ ನಿರ್ದೇಶನದ ‘ಕೊರಗಜ್ಜ’ ಚಿತ್ರತಂಡವು ಮೈಸೂರು ದಸರಾ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಮೈಲಿಗಲ್ಲು ಸಾಧಿಸಿತ್ತು. ಈಗಾಗಲೇ ಆಡಿಯೋ ರೈಟ್ಸ್, ವಿದೇಶಿ ಒಡಂಬಡಿಕೆ ಸೇರಿ ಹಲವು ವಿಚಾರಗಳಿಂದ ಸುದ್ದಿಯಲ್ಲಿರುವ ‘ಕೊರಗಜ್ಜ’ ತೆರೆಗೆ ಬರಲು ಸಿದ್ಧವಾಗಿದೆ.
koragajja poster
ಕೊರಗಜ್ಜ ಚಿತ್ರದ ಪೋಸ್ಟರ್
Published on: 

ಬೆಂಗಳೂರು: ತ್ರಿವಿಕ್ರಮ್ ಸಪಲ್ಯ ನಿರ್ಮಾಣದ, ಸುಧೀರ್ ಅತ್ತಾವರ ನಿರ್ದೇಶನದ ‘ಕೊರಗಜ್ಜ’ ಚಿತ್ರತಂಡವು ಮೈಸೂರು ದಸರಾ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಮೈಲಿಗಲ್ಲು ಸಾಧಿಸಿತ್ತು. ಈಗಾಗಲೇ ಆಡಿಯೋ ರೈಟ್ಸ್, ವಿದೇಶಿ ಒಡಂಬಡಿಕೆ ಸೇರಿ ಹಲವು ವಿಚಾರಗಳಿಂದ ಸುದ್ದಿಯಲ್ಲಿರುವ ‘ಕೊರಗಜ್ಜ’ ತೆರೆಗೆ ಬರಲು ಸಿದ್ಧವಾಗಿದೆ. ಇದೀಗ ಚಿತ್ರತಂಡ ಮತ್ತೊಂದು ಹಂತದ ಪ್ರಚಾರಕ್ಕೆ ಮುಂದಾಗಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ. ಇಡೀ ಟ್ರೇಲರ್ ಸಸ್ಪೆನ್ಸ್ ಕಂಟೆಂಟ್ ಜತೆಗೆ ದೃಶ್ಯವೈಭವದೊಂದಿಗೆ ಮೂಡಿಬಂದಿದೆ. ಟ್ರೇಲರ್ 2.34 ನಿಮಿಷವಿದ್ದು, ಉದ್ಯಾವರ ಅರಸರ ಯುದ್ಧದೊಂದಿಗೆ ಆರಂಭವಾಗಿದೆ. ಬಳಿಕ ಅಗೋಚರ ಶಬ್ದದಿಂದಾಗಿ ಕಲಾವಿದರಾದ ಕಬೀರ್ ಬೇಡಿ, ಭವ್ಯಾ ಹಾಗೂ ಶ್ರುತಿ ಮೂವರಿಂದಲೂ ‘ಯಾರು ಆ ಮಾಯಾವಿ’ ಎಂಬ ಪ್ರಶ್ನೆ ಕೇಳಿಬರುತ್ತದೆ. ಪುರಾತನ ನಂಬಿಕೆ, ಸಂಪ್ರದಾಯಗಳು, ಸಾಮಾಜಿಕ ಸಂಘರ್ಷ ಮತ್ತು ಬುಡಕಟ್ಟು ಯುವಕನ ಅಸಾಧಾರಣ ಪಯಣವನ್ನು ಟ್ರೇಲರ್ ಪರಿಚಯಿಸಿದೆ. ಟ್ರೇಲರ್‌ನಲ್ಲಿ ‘ಕೊರಗಜ್ಜ’ಯಾರೆಂಬುದನ್ನು ಗುಟ್ಟು ಬಿಟ್ಟುಕೊಟ್ಟಿಲ್ಲ. ಗೋಪಿ ಸುಂದರ್ ಹಿನ್ನೆಲೆ ಸಂಗೀತ ರೋಮಾಂಚನ ಮೂಡಿಸುತ್ತದೆ. ಕಬೀರ್ ಬೇಡಿ, ಭವ್ಯಾ, ಶ್ರುತಿ, ಸಂದೀಪ್ ಸೋಪಾರ್ಕರ್, ಗಣೇಶ್ ಅಚಾರ್ಯ ಕಲಾಬಳಗದಲ್ಲಿದ್ದಾರೆ.

‘ಕೊರಗಜ್ಜ’ ಚಿತ್ರದ 3ಡಿ ಕೆಲಸಗಳು ಪೂರ್ಣಗೊಂಡಿವೆ. ಈಗಾಗಲೇ ಚಿತ್ರದ ಸ್ಟ್ ಕಾಪಿ ಸಿದ್ಧವಾಗಿದ್ದು, ವಿತರಕರಿಗೆ ತೋರಿಸುತ್ತಿದ್ದೇವೆ. ಇನ್ನು ಟ್ರೇಲರ್‌ಗೆ ಹಿಂದಿ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಬೈ, ಬೆಂಗಳೂರಿನಲ್ಲಿ ಪ್ರೀಮಿಯರ್ ನಡೆಸಲಿದ್ದು, ಆ ಬಳಿಕ ರಾಜ್ಯಾದ್ಯಂತ ಬಿಡುಗಡೆ ಮಾಡಲಿದ್ದೇವೆ. ಯಾವುದೇ ಧಾರ್ಮಿಕ ನಂಬಿಕೆ, ಭಕ್ತಿಗೆ ಘಾಸಿಯಾಗದಂತೆ ಎಚ್ಚರಿಕೆ ವಹಿಸಿ, ಸಿನಿಮಾವನ್ನು ತೆರೆ ಮೇಲೆ ತರುತ್ತಿದ್ದೇವೆ.
ಸುಧೀರ್ ಅತ್ತಾವರ, ನಿರ್ದೇಶಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net