ಅಬ್ಬಬ್ಬಾ! ಎನಿಸುವಂತಿದೆ "ಕೊರಗಜ್ಜ" ಚಿತ್ರದಲ್ಲಿ ಸುಧೀರ್ ಅತ್ತಾವರ್ ಮೂಡಿಸಿರುವ ಗುಳಿಗ ಆರ್ಭಟದ ಗೀತಾ ನೃತ್ಯ

ಕೊರಗಜ್ಜ ಸಿನಿಮಾ
ಕೊರಗಜ್ಜ ಸಿನಿಮಾ
Published on

| ಡಾ.ಪಾರ್ವತಿ ಜಿ.ಐತಾಳ್

ಮಂಗಳೂರು: ತುಳುನಾಡಿನ ಜನರ ಆರಾಧ್ಯ ದೈವ ಕೊರಗಜ್ಜನ ಕುರಿತಾದ ಬಹುನಿರೀಕ್ಷಿತ ಚಿತ್ರವಾಗಿರುವ 'ಕೊರಗಜ್ಜ' ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗಿದೆ. ಸುಧೀರ್ ಅತ್ತಾವರ್ ಚಿತ್ರಕಥೆ ಬರೆದು, ನಿರ್ದೇಶಿಸಿರುವ, ತ್ರಿವಿಕ್ರಮ್​ ಸಾಪಲ್ಯ ನಿರ್ಮಾಣದ ಮತ್ತು ವಿದ್ಯಾಧರ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿರುವ ಬರೋಬ್ಬರಿ ಆರು ಭಾಷೆಗಳಲ್ಲಿ ರಿಲೀಸ್​ ಆಗಲು ಎದುರುನೋಡುತ್ತಿದೆ.
ಪ್ಯಾನ್​ ಇಂಡಿಯಾ ಚಿತ್ರವಾಗಿ ದೇಶಾದ್ಯಂತ ಬಿಡುಗಡೆಯಾಗಲಿರುವ ಚಿತ್ರದ ರ್ಯಾಪ್ ಶೈಲಿಯ ಮೊದಲ ಹಾಡು 'ಗುಳಿಗಾ...ಗುಳಿಗಾ..' ಇತ್ತೀಚೆಗಷ್ಟೇ ಬಿಡುಗಡೆಯಾಯಿತು. ಸ್ಟ್ರೀಮ್​ ಆದ ನಾಲ್ಕೈದು ದಿನದಲ್ಲೇ ಲಕ್ಷಾಂತರ ಸಿನಿಪ್ರಿಯರ ಮೆಚ್ಚುಗೆ ಈ ಹಾಡು ಪಾತ್ರವಾಯಿತು. ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿರ್ದೇಶಕ ಗೋಪಿ ಸುಂದರ್ ರಾಗ ಸಂಯೋಜನೆ ಮಾಡಿದ್ದು, ಜಾವೆದ್ ಆಲಿ ಮತ್ತು ಸುಧೀರ್ ಅತ್ತಾವರ್ ಜತೆ ಧ್ವನಿ ಸೇರಿಸಿದ್ದಾರೆ. ಈ ಹಾಡು ಒಂದು ಹೊಸ ರೀತಿಯ ಶಬ್ದಾಲಾಪನೆಯ ಮತ್ತು ಯಾವುದೇ ಶೈಲಿಗೊಳಪಡಿಸಲು ಸಾಧ್ಯವಾಗದ ರಾಗ-ತಾಳಗಳ ಝೇಂಕಾರವನ್ನೇ ಸೃಷ್ಟಿಸಿದೆ.
ಈ ಹಾಡಿನ ಸಾಹಿತಿ ಸುಧೀರ್ ಅತ್ತಾವರ್ ಅವರ "ಬಕಾವಲಿಯ ಹೂ" ಗೆ (ಗುಲೇಬಕಾವಲಿ) ಸಾಹಿತ್ಯ. ಅಕಾಡಮಿ ಪ್ರಶಸ್ತಿಯ ಕಿರೀಟ ಬೇರೆ ಇದೆ. ಈ ಹಿಂದೆ ಅವರು ಬರೆದು ಅಪಾರ ಯಶಸ್ಸು ಪಡೆದಿದ್ದ "ಮರಳಿ ಮರೆಯಾಗಿ…..ತೆರಳಿ ತೆರೆಯಾಗಿ.. ಎಂಬ ಹಾಡಿನಲ್ಲಿ ಬಳಸಿದ್ದ ಪ್ರೀತಿಯ ಸೌಂದರ್ಯವನ್ನು ಸೂಚಿಸುವ ಆಹ್ಲಾದಕರ ಪದಸಂಪತ್ತು, ಪ್ರಾಸಬದ್ಧತೆಯ ಕಣಜದಂತಿದ್ದ ನವಿರಾದ ಪ್ರೇಮ ಕಾವ್ಯದ ಗೀತೆಗೆ ವಿರುದ್ಧವಾಗಿ, ಭೋರ್ಗರೆಯುವ ಸಾಗರದಲೆಯಂತೆ ಆರ್ಭಟಿಸುವ ಗುಳಿಗ ನರ್ತನದ ಅಬ್ಬರದ ರಣಭಯಂಕರ ದ್ರಶ್ಯ-ಕಾವ್ಯಕಟ್ಟಿ ಕೊಡುವ ಹಾಡು ಇದಾಗಿದೆ.
ಹಾಲಿವುಡ್-ಬಾಲಿವುಡ್ ಕೊರಿಯೋಗ್ರಾಫರ್ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಬಾಲ್ ರೂಮ್ ಡಾನ್ಸರ್ ಸಂದೀಪ್ ಸೋಪರ್ಕರ್ ಅರಬ್ಬಿಸಮುದ್ರದ ರುದ್ರ ರಮಣೀಯ ಬಂಡೆಗಳ ಮೇಲೆ ಸಾಗರದಲೆಗಳ ಹಿನ್ನೆಲೆಯಲ್ಲಿ ಕೊರಿಯೋಗ್ರಾಫಿ ಮಾಡಿ, ಸ್ವತಃ ನರ್ತಿಸಿರುವ ಈ ಅಮೋಘ ನೃತ್ಯ ವೈಭವ ನೋಡುಗರ ಕಣ್ಮನ ತಣಿಸುತ್ತದೆ. 'ರಣರಾತ್ರಿ ರುಬು ರುಬು ರುದ್ರಪಾದೆ ಭೋರ್ಗರೆತ..ರೋಧಾಂತಕೆ ರಾಚಿದಾಗ-ರಣಿತದ ರಿಂಗಣ....' ಇತ್ಯಾದಿ ಪ್ರಾಸಬದ್ಧವಾದ ಪದಗಳ ಬಳಕೆಯು ಸೃಷ್ಟಿಸುವ "ಸೌಂಡ್ ಎಫೆಕ್ಟ್" ಸಂದರ್ಭೋಚಿತ ವಾತಾವರಣವನ್ನು ಸೃಷ್ಟಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ.
ಅತಿ ವಿರಳ ಅನ್ನಬಹುದಾದ ಈ ಒನೊಮಟೋಫಿಯ ಅಥವಾ ಪ್ರಾಸಾಲಂಕಾರವು ಹಾಡನ್ನು ಅಬ್ಬರವಾಗಿಸಿ, ಅವಿಸ್ಮರಣೀಯವಾಗಿಸಿದೆ. ಇಷ್ಟಕ್ಕೂ ಈ ಗುಳಿಗಾ...ಗುಳಿಗಾ...ಹಾಡಿನ ವಸ್ತು-ವಿಷಯವಾದರೂ ಏನು? ಮೊದಲ ಸಾಲುಗಳಲ್ಲಿ ಕೀರ್ತಿದಾಹಿ ಉದ್ಯಾವರದ ಅರಸನು ಕುತ್ತಾರಿನ ಸಾರ್ಲಪಟ್ಟದ ಮೇಲೆ ಆಕ್ರಮಣ ನಡೆಸಿ‌, ಆ ಪ್ರಾಂತ್ಯದ ಪುಟ್ಟ ರಾಣಿ ಪಂಜಂದಾಯಿಯನ್ನು ಸೋಲಿಸಿ ಅವಳ ರಾಜ್ಯವನ್ನು ವಶಪಡಿಸಿಕೊಳ್ಳುತ್ತಾನೆ. ನೆಲೆಯನ್ನು ಕಳೆದುಕೊಂಡ ಪಂಜಂದಾಯಿ ಕಣ್ಣೀರಿನಲ್ಲಿ ಕೈತೊಳೆಯುವಂತಾಗುತ್ತದೆ.
ಹಾಡಿನ ಸಾಲಿನಲ್ಲಿಯೂ ಕೂಡಾ...."ನೆಲೆಕಾಣದ ಪಂಜಂದಾಯೀ.... ಕಣ್ಣೀರಲಿ ಕೈ ತೊಳೆದಿಲ್ಲೀ.... ಕನೀರ ಕಟ್ಟೆಯ ಬಳಿಯಲಿ ಗಾಯದ ಹುಲಿಯಂತಾಗಿ...." ಎನ್ನುವ ಸಾಲುಗಳಲ್ಲಿ ರಾಣಿಯ ಅಸಹಾಯಕತೆಯನ್ನು ಹ್ರದಯಂಗಮವಾಗಿ ಪೋಣಿಸಲಾಗಿದೆ. "ಕನೀರಕಟ್ಟೆ" ಎನ್ನುವುದು ಮಂಗಳೂರಿನ ಹೊರವಲಯದಲ್ಲಿ ನಮ್ಮ ಮಾನ್ಯ ಸ್ಪೀಕರ್ ಖಾದರ್ ರವರ ಮನೆಯ ಬಳಿ ಈಗಲೂ ಇರುವ ಪ್ರದೇಶ. ಇದು ಸಾಹಿತ್ಯವನ್ನು ಬರೆದಿರುವ ನಿರ್ದೇಶಕರು ಸಾಕಷ್ಟು ರಿಸರ್ಚ್ ಮಾಡಿದ್ದಾರೆ ಎನ್ನುವುದಕ್ಕೆ ಒಂದು ಸಾಕ್ಷಿ.
ಈ ಹಾಡು ಬಿಡುಗಡೆಯಾದದ್ದಿನಿಂದ ಕರಾವಳಿಯಲ್ಲಂತೂ ಪರವಿರೋಧದ ಚರ್ಚೆ ಜೋರಾಗಿದೆ. ವಾಸ್ತವದಲ್ಲಿ ಪುರಾಣಗಳಲ್ಲಿ ಬರುವ ಗುಳಿಗ, ವರಹಾ( ಪಂಜುರ್ಲಿ), ಚಾಮುಂಡಿ ಮೊದಲಾದ ಶಕ್ತಿಗಳನ್ನು ಕರಾವಳಿ ಭಾಗದಲ್ಲಿ ನಲಿಕೆ ಜನಾಂಗದವರು ನರ್ತನ ಸೇವೆಯ ಮೂಲಕ ತಮ್ಮ ಕುಲಕಸುಬನ್ನು ಜಾರಿಗೊಳಿಸಿ, ಜನರಲ್ಲಿ ಶ್ರದ್ದೆ-ಭಕ್ತಿ-ನಂಬಿಕೆಯನ್ನು ಪಸರಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಸುಮಾರು ಶೇ.90ರಷ್ಟು ದೈವ ನರ್ತನ ಮಾಡುವವರು ಅನಕ್ಷರಸ್ಥರೂ, ಅವಿದ್ಯಾವಂತರೂ ಆಗಿರುತ್ತಾರೆ. ಅವರಿಗೆ ದೈವದ ಹಿನ್ನೆಲೆಯ ಕುರಿತಾಗಲೀ ಮಹಿಮೆಯ ಕುರಿತಾಗಲೀ ಏನೂ ತಿಳಿದಿರುವುದಿಲ್ಲ. ಬಾಯಿಮಾತಿನಿಂದ ಬಂದ ಪಾಡ್ದನಗಳೇ ಅವರ ನರ್ತನ ಸೇವೆಗೆ ಜೀವಾಳ. ಪಾಡ್ದನದ ಹುಟ್ಟು, ಇತಿಹಾಸ ಅವರಿಗೆ ಅನಗತ್ಯ. ಏಕೆಂದರೆ ಮುಖ್ಯತಃ ಭೂತ ಕಟ್ಟುವ ನಲಿಕೆ ಜನಾಂಗದವರಿಗೆ ಈ ಆಚರಣೆ ಹೊಟ್ಟಪಾಡು. ಮೈಮೇಲೆ ದೈವ ಬಂದಾಗ, ನರ್ತಿಸಿ, ಆರ್ಭಟಿಸಿ, ಅಲ್ಲಿನ ಮಣ್ಣಿನ‌ಕಳೆಯಿಂದ ಅವರು 'ನುಡಿ'ಕೊಡುತ್ತಾರಷ್ಟೆ. ದೈವದ ಕುರಿತು ಚಿತ್ರ ನಿರ್ಮಿಸುವಾಗ ಇಷ್ಟೇ ಗೊತ್ತಿದ್ದರೆ ಸಾಕಾಗುವುದಿಲ್ಲ.
ಅವುಗಳ ಹಿನ್ನೆಲೆ, ಇತಿಹಾಸ, ಪವಾಡ, ಮಹಿಮೆ ಎಲ್ಲದರ ಕುರಿತೂ ನಿರ್ದೇಶಕರು ತಿಳಿಯಬೇಕಾಗುತ್ತದೆ. ಹುಟ್ಟುವಾಗ ಮನುಷ್ಯನಾಗಿ ಹುಟ್ಟಿ ತನ್ನ ಸದ್ಗುಣ-ಸತ್ಕಾರ್ಯಗಳಿಂದ ದೈವತ್ವಕ್ಕೇರಿದ ನಂತರ ಅವನು ದೈವವಾಗಿ ಪೂಜಿಸಲ್ಪಡುತ್ತಾನೆ. ದೈವತ್ವಕ್ಕೇರಿದವನಿಗೆ ಅಣಿಮ, ಗರಿಮ, ಲಗಿಮ ಮಹಿಮ, ಪ್ರಕಾಮ್ಯ, ಇಶಿತ್ವ,‌ ವಶಿತ್ವ‌, ಪ್ರಾಪ್ತಿ ಇಂತಹ ಅಷ್ಟ ಸಿದ್ದಿಗಳು ಒಲಿದಿರಬೇಕು. ಕೊರಗಜ್ಜನಿಗೆ ಈ ಸಿದ್ದಿಗಳು ಒಲಿದಿದೆ ಎನ್ನುವ ಅಂಶ ಕೂಡಾ ಈ ಹಾಡಿನಲ್ಲಿ ಬರುತ್ತದೆ.
ಚಿತ್ರದಲ್ಲಿ ಗುಳಿಗ ಪಂಜುರ್ಲಿ ಅಥವ ಮಲರಾಯ ದೈವದ ಜೊತೆ ಇರುವ ಉಗ್ರ ಗುಳಿಗ. ಈ ದೈವದ್ವಯರು ಸೋಮೇಶ್ವರದ ಸಾಗರ ತೀರದಲ್ಲಿ ಸಂಚರಿಸುತ್ತಾ ಮಂಜೇಶ್ವರದ ಕಡೆಗೆ ಪಯಣಿಸಿರುತ್ತಾರೆ. ಹಾಡಿನಲ್ಲಿನ ಸಾಲಿನಂತೆ..."ಸೋಮೇಶ್ವರ ಸಾಗರತೀರದಿ ಸಂಚರಿಸುತ್ತಾ ದೈವಧ್ವಯರು...ಮಂಜೇಶ್ವರ ಸಾಗುತ ದಾರಿ ಸಂಭ್ರಮಿಸುತ್ತಿದ್ದರೂ..." ಇಲ್ಲಿ ಗಮನಿಸಬೇಕಾಗಿರುವುದು ಪ್ರಾಸಬದ್ಧವಾಗಿರುವ ಎರಡು ಅಕ್ಕಪಕ್ಕದ ಸೋಮೇಶ್ವರ ಮತ್ತು ಮಂಜೇಶ್ವರ ಗ್ರಾಮಗಳ‌ ವೈಶಿಷ್ಟ್ಯ. ಎರಡೂ ಕೂಡ ಸಮುದ್ರ ಕಿನಾರೆಯಲ್ಲಿರುವ ಪ್ರದೇಶಗಳು!
ಹೀಗೆ ಸಂಚರಿಸುತ್ತಿರುವಾಗ, ಅವರ ದಾರಿಗಡ್ಡವಾಗಿ ಸೋಮೇಶ್ವರ ರುದ್ರಪಾದೆಯ ಮೇಲೆ "ಕೊರಗಜ್ಜ" ಕುಳಿತಿರುತ್ತಾನೆ.ಅವನು ಯಾಕೆ ಕುಳಿತಿರುತ್ತಾನೆ ಮತ್ತು ಈ ದೈವದ್ವಯರೊಂದಿಗೆ ಕೊರಗಜ್ಜನ ಮುಖಾಮುಖಿಯ ಕಾರಣ ಸಿನಿಮ ನೋಡಿದ ಮೇಲೆಯೇ ತಿಳಿಯಬೇಕಾಗಿದೆ. ಆದರೆ, ಈಗಲೂ ಸೋಮೇಶ್ವರ ಸಾಗರ ತೀರದಲ್ಲಿ ಮಲರಾಯನ ಸಂಚಾರವಿದೆ ಎಂದು ಜನ ನಂಬುತ್ತಾರೆ ಮತ್ತು ವರ್ಷಂಪ್ರತಿ ಮಲರಾಯನ ಕೋಲಸೇವೆ ಸಮಯದಲ್ಲಿ‌ ಸೋಮೇಶ್ವರ ಕಡಲನಕಿನಾರೆಗೆ ಮಲರಾಯ ದೈವ ಮತ್ತು ಪಾತ್ರಿಯ ಆಗಮನ, ಸಂಚಾರದ ಸಂಭ್ರಮ ನಡೆಯುತ್ತಿದೆ.
ಪಾಶ್ಚಾತ್ಯ ದೇಶಗಳಲ್ಲಿ ದೈವಿಕತೆ ಮತ್ತು ಅತೀತ ಶಕ್ತಿಗಳ ಬಗ್ಗೆ ನಿರ್ಮಿಸಿದ ಚಿತ್ರಗಳು 20ನೇ ಶತಮಾನದ ಆರಂಭದಿಂದ ಹಿಡಿದು ಇತ್ತೀಚಿಗಿನವರೆಗೆ ಬಹಳಷ್ಟು ಬಂದಿವೆ. The TenCommandments, Ben-Hur, The Passion for Christ, The Prince of Eygipt, God's not Dead ಮೊದಲಾದ ಸಿನಿಮಾಗಳು ಪ್ರಾಚೀನ ಕಾಲದ ಪೌರಾಣಿಕ ಕಥೆಗಳಿಗೆ ಮರುಜೀವ ನೀಡಿ ಸಾಂಸ್ಕೃತಿಕ-ನೈತಿಕ ಮೌಲ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದಲೂ ಮನುಷ್ಯನ ಪರಿಸ್ಥಿತಿಯ ಒಳನೋಟದ ಅವಲೋಕನಕ್ಕಾಗಿಯೂ ಪಾಶ್ಚಾತ್ಯರು ನಿರ್ಮಿಸಿದ್ದಾರೆ.
ನಮ್ಮ ದೇಶದಲ್ಲೂ ಅತೀತ ಶಕ್ತಿಯ ಇರುವಿಕೆಯನ್ನು ಪುಷ್ಟೀಕರಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ನಮ್ಮ ಚೋಮನದುಡಿ' ಚಿತ್ರ, ಮಲಯಾಳಂನ ಕುಟ್ಟಿಚಾತನ್, ಮಣಿಚಿತ್ರತಾಳಂಗಳ್ (ಇದರ ಕನ್ನಡ ರಿಮೇಕ್, ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ಆಪ್ತಮಿತ್ರ), ಮಮ್ಮುಟ್ಟಿ ಅಭಿನಯದ ಇತ್ತೀಚಿನ ಚಿತ್ರ "ಭ್ರಮಾಯುಗಮ್", ಹಿಂದಿ ಚಿತ್ರ "ಸ್ತ್ರೀ".. ಇತ್ಯಾದಿ ಸಿನಿಮಾಗಳು ಕಾಲಕಾಲಕ್ಕೆ ಜನರ ಬಳಿ ಹೊಸತನದೊಂದಿಗೆ ಪ್ರಕ್ಯಕ್ಷವಾಗುತ್ತಿದೆ. ಗುಳಿಗಾ...ಗುಳಿಗಾ...ಹಾಡಿನ ಮೂಲಕ ಈ ಮಟ್ಟದ ಕ್ರೇಜ್ ಹುಟ್ಟುಹಾಕುತ್ತಿರವ "ಕೊರಗಜ್ಜ" ಚಿತ್ರ ಅಂತಹ ಮಾದರಿಯ ಸಿನಿಮಾವೇ? ಕಾದುನೋಡಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net