ಕೊರಗಜ್ಜ ವಿಭಿನ್ನ ಹಾದಿ: ಹಾಡು ರಿಲೀಸ್​ಗೂ ಮುನ್ನ ಸಾಹಿತ್ಯ ಬಿಡುಗಡೆ ಮಾಡಿದ ಚಿತ್ರತಂಡ! Koragajja

ಕೊರಗಜ್ಜ ಸಿನಿಮಾ ( Koragajja )
ಕೊರಗಜ್ಜ ಸಿನಿಮಾ ( Koragajja )
Published on

ಪ್ರಮುಖ ಮುಖ್ಯಾಂಶಗಳು

  • ಚಿತ್ರತಂಡಗಳು ರಿಲೀಸ್​ಗೂ ಮುನ್ನ ಹಾಡು, ಪೋಸ್ಟರ್ ಅಥವಾ ಪ್ರೋಮೊ ಬಿಡುಗಡೆ ಮಾಡುವುದು ವಾಡಿಕೆ
  • ಸುಧೀರ್ ಅತ್ತಾವರ ನಿರ್ದೇಶನದ ‘ಕೊರಗಜ್ಜ’ ಚಿತ್ರವು ವಿಭಿನ್ನ ಹಾದಿ ತುಳಿದಿದೆ
  • ಕೊರಗಜ್ಜ ಚಿತ್ರದ ಎರಡನೇ ಹಾಡಿನ ಸಾಹಿತ್ಯವನ್ನು ಮೊದಲು ರಿಲೀಸ್ ಮಾಡಿದೆ
ಬೆಂಗಳೂರು: ಸಾಮಾನ್ಯವಾಗಿ ಚಿತ್ರತಂಡಗಳು ಹಾಡು ರಿಲೀಸ್​ಗೂ ಮುನ್ನ ಪೋಸ್ಟರ್ ಅಥವಾ ಪ್ರೋಮೊ ಬಿಡುಗಡೆ ಮಾಡುವುದು ವಾಡಿಕೆ. ಆದರೆ, ಸುಧೀರ್ ಅತ್ತಾವರ ನಿರ್ದೇಶನದ ‘ಕೊರಗಜ್ಜ’ ( Koragajja ) ಚಿತ್ರವು ವಿಭಿನ್ನ ಹಾದಿ ತುಳಿದಿದೆ.
ಪ್ರೇಕ್ಷಕರಿಗೆ ಹಾಡಿನ ಸಾಹಿತ್ಯ ಮೊದಲು ಗೊತ್ತಾಗಬೇಕು ಅಂತ ಚಿತ್ರದ ಎರಡನೇ ಹಾಡಿನ ಸಾಹಿತ್ಯವನ್ನು ಮೊದಲು ರಿಲೀಸ್ ಮಾಡಿದೆ. ‘ಗಾಳಿ ಗಂಧ... ತೀಡಿ ತಂದಾ... ಶಬ್ದವಿರದ ಮಾತು...!’ ಎಂದು ಸಾಗುವ ಹಾಡಿಗೆ ಖುದ್ದು ನಿರ್ದೇಶಕ ಸುಧೀರ್ ಸಾಹಿತ್ಯ ರಚಿಸಿದ್ದು, ಗೋಪಿ ಸುಂದರ್ ಸಂಗೀತ ಸಂಯೋಜಿಸಿದ್ದಾರೆ.
ಸುಂದರ ಸಾಹಿತ್ಯ, ಸುಮಧುರ ಸಂಗೀತಕ್ಕೆ ಬಾಲಿವುಡ್​ನ ಖ್ಯಾತ ಗಾಯಕರಾದ ಶ್ರೇಯಾ ಘೋಷಾಲ್ ಮತ್ತು ಅರ್ಮನ್​ ಮಲಿಕ್ ಧ್ವನಿಯಾಗಿದ್ದಾರೆ. ಶೀಘ್ರದಲ್ಲೇ ಈ ಹಾಡು ರಿಲೀಸ್ ಆಗಲಿದೆ. ಆರು ಭಾಷೆಗಳಲ್ಲಿ ಮೂಡಿಬರುತ್ತಿರುವ ‘ಕೊರಗಜ್ಜ’ ಸದ್ಯ ರಿಲೀಸ್ ಸಿದ್ಧವಾಗಿದೆ.
3ಡಿ ಪೋಸ್ಟರ್, ‘ಗುಳಿಗಾ ಗುಳಿಗಾ’ ಹಾಡಿನ ಮೂಲಕ ಈಗಾಗಲೇ ಸಿನಿಮಾ ಸದ್ದು ಮಾಡಿದೆ. ಚಿತ್ರದಲ್ಲಿ ಬಾಲಿವುಡ್ ನಟರಾದ ಕಬೀರ್ ಬೇಡಿ, ಸಂದೀಪ್ ಸೋಪರ್ಕರ್, ಗಣೇಶ್ ಆಚಾರ್ಯ, ನಟಿಯರಾದ ಶ್ರುತಿ, ಭವ್ಯಾ ಕಲಾ ಬಳಗದಲ್ಲಿದ್ದಾರೆ. ತ್ರಿವಿಕ್ರಮ್ ಸಿನಿಮಾಸ್ ಹಾಗೂ ಸಕ್ಸಸ್ ಫಿಲಂಸ್ ಬ್ಯಾನರಡಿಯಲ್ಲಿ ತ್ರಿವಿಕ್ರಮ್ ಸಪಲ್ಯ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಚಿತ್ರದ ಹಾಡಿನ ಸಾಹಿತ್ಯ

ಗಾಳಿ ಗಂಧ.....ತೀಡಿ ತಂದಾ.....
ಶಬ್ದವಿರದ ಮಾತೂ.... ! ಕೇಳಿದಂತಾ....
ಜೋಡಿಯಿಂದಾ..... ಮುಗ್ಧ ವಿರಹ ಹಾಡೂ....!!
ಗಾಳಿ ಗಂಧ.....ತೀಡಿ ತಂದಾ..... ಶಬ್ದವಿರದ ಮಾತೂ.... !
ಮೂಗುದಾಣ ಹಾಕಲೇನು ಪ್ರೀತಿ..... ಸಾಕು ಗಿಣಿಯೇ..?
ಮೂರು ದಾರ ಕಟ್ಟಿ ನಾನು ಬಂಧಿ.... ಸಾಕು ಪ್ರಿಯನೇ.....!
ಕಾಡಿಬಂದ ನಿನ್ನ ನೆನಪು... ಕಾಡಿನಲ್ಲೆ ಸೆಳೆಯಿತೂ.....|
ಹೇಳದಂತ ನನ್ನ ಮಾತು.... ಮಾಧುರ್ಯ ತುಂಬಿದಿಂಚರಾ.....!!
ದಾಟಿ ಬಂದ ಮೌನ ಕಲಹ.... ಧಾಟಿ ಯಾಯ್ತು ಕಾವ್ಯಕೇ.....!
ತಾಳದಂತ ನನ್ನ ಪುಳಕ.... ಮಾರ್ಧನಿಸಿ ನಿಶಾಚರಾ....!!
|| ಮೂಗು ದಾಣ||
ಮೌನ ಬೇಲಿ ಹಾರಿಬಂದಾ ಮೋಹದಲ್ಲಿ ಸದ್ದೇ...!?
ಮೌನ ಬೇಲಿ ಹಾರಿಬಂದಾ ಮೋಹದಲ್ಲಿ ಸದ್ದೇ...!?
ತಾರೆ ತಂತೀಗ ತಂತೀ... ತಾಳ ಮೇಳಾ...ತಂಪೂ ನಾದಾ...
ಬಾರೆ ಬಂತೀಗ ಬಂತೀ... ಢಾಳ ಡೋಲೀ...
ಡೌಲು ಡೋಲೂ....ಸೇರೆ ಸೇವಂತಿ ಸೋನೇ...ಮಳೆಯಲ್ಲೀ...
|| ಮೂಗು ದಾಣ||
ಲಜ್ಜೆ ಸದ್ದು ಕಾನನಕ್ಕೂ....ಮತ್ತು ತಂತು ತುಸುನಕ್ಕೂ......!
ಕತ್ತಲನ್ನು ಹೊದ್ದು ಮಲಗಿ....ಕಾಡು ಕೂಡ ಕನಲಿತೂ.....!!
ಹೆಜ್ಜೆ ಕದ್ದ ಕಾಜಣವೂ... ಗೆಜ್ಜೆ ಕಟ್ಟಿತು ಹಾಡುತಾ...!
ಮುಗ್ಧ ಪ್ರೀತಿ ಕಂಡು ಹೇಳಿತು.. ಕೆಂಪಾಗದಿರು ಕಾದಂಬಿನಿಯೇ....!!
|| ಮೂಗು ದಾಣ||
ಜೌಗು ಮನದ ಜಾರೋ ಕನಸು....
ಮೈಯ ಬಿಸಿಗೆ.....ಒದ್ದೇ.....!
ಜೌಗು ಮನದ ಜಾರೋ ಕನಸು....
ಮೈಯ ಬಿಸಿಗೆ.....ಒದ್ದೇ.....!
|| ತಾರೆ ತಂತೀಗ ತಂತೀ...||
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net