ಕಾಳಿದಾಸನ ಜತೆ ಕಾಲಭೈರವ: ‘ಕೆಡಿ - ದ ಡೆವಿಲ್’ ಬೆಂಬಲಕ್ಕೆ ನಿಂತ ನಟ ಕಿಚ್ಚ ಸುದೀಪ್

ನಟ ಸುದೀಪ್ ಜತೆ ಕೆಡಿ ತಂಡ
ನಟ ಸುದೀಪ್ ಜತೆ ಕೆಡಿ ತಂಡ
Published on

ಪ್ರಮುಖ ಮುಖ್ಯಾಂಶಗಳು

  • ರೀಷ್ಮಾ ನಾಣಯ್ಯ ಹುಟ್ಟುಹಬ್ಬಕ್ಕೆ ಹಾಡಿನ ಉಡುಗೊರೆ
  • ಕಮ್ ಆನ್ ಕಾಳಿ ಕುಣಿದು ಕುಪ್ಪಳಿಸಿದ ರೀಷ್ಮಾ-ಧ್ರುವ ಸರ್ಜಾ
  • ಚಿತ್ರತಂಡಕ್ಕೆ ಸಾಥ್ ನೀಡಿದ ಕಿಚ್ಚ ಸುದೀಪ್
ಬೆಂಗಳೂರು: ರಿಲೀಸ್‌ಗೂ ಮುನ್ನವೇ ಅಡೆ-ತಡೆ, ವಿಘ್ನಗಳನ್ನು ಎದುರಿಸಿದ್ದ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ಅಭಿನಯದ ‘ಕೆಡಿ’ ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಚಿತ್ರಕ್ಕೆ ‘ಎ’ ಪ್ರಮಾಣ ಪತ್ರ ಸಿಕ್ಕಿದ್ದು, ನಾಳೆ (ಏ.30) ದೇಶಾದ್ಯಂತ ತೆರೆ ಕಾಣಲಿದೆ. ಈಗಾಗಲೇ ಸಾಂಗ್, ಟೀಸರ್, ಟ್ರೇಲರ್‌ಗಳ ಮೂಲಕ ಗಮನ ಸೆಳೆದಿರುವ ಚಿತ್ರತಂಡವು, ಇದೀಗ ನಾಯಕಿ ರೀಷ್ಮಾ ನಾಣಯ್ಯ ಹುಟ್ಟುಹಬ್ಬಕ್ಕೂ ಒಂದು ದಿನ ಮುನ್ನವೇ ಹಾಡಿನ ಉಡುಗೊರೆ ನೀಡಿದೆ. ಹೌದು, ಮಂಗಳವಾರ (ಏ.28) ರೀಷ್ಮಾ ಬರ್ತ್‌ಡೇ ಇದ್ದ ಕಾರಣ, ಸೋಮವಾರವೇ ಚಿತ್ರತಂಡ ‘ಕಮ್ ಆನ್ ಕಾಳಿ’ ಸಾಂಗ್ ಬಿಡುಗಡೆ ಮಾಡಿದೆ. ಈ ಹಾಡಿನಲ್ಲಿ ನಟ ಧ್ರುವ ಸರ್ಜಾ, ನಟಿ ರೀಷ್ಮಾ ನಾಣಯ್ಯ ಕುಣಿದು ಕುಪ್ಪಳಿಸಿದ್ದಾರೆ. ಇನ್ನು, ‘ಕೆಡಿ’ಯಲ್ಲಿ ಕಾಲ ಭೈರವನಾಗಿ ನಟ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಬಗ್ಗೆ ಸುದೀಪ್, ‘150 ದಿನಗಳ ಕಾಲ ನಡೆದ ‘ಕೆಡಿ’ ಚಿತ್ರದ ಶೂಟಿಂಗ್‌ನಲ್ಲಿ ನನ್ನದು ಕೇವಲ ಮೂರು ದಿನಗಳ ಕಾಲ ಕೆಲಸ ಮಾತ್ರ. ಧ್ರುವ ಸರ್ಜಾ ನನ್ನ ಸಹೋದರನಿದ್ದಂತೆ. ಆತ ಒಂದು ದೊಡ್ಡ ಸಿನಿಮಾ ಮಾಡಿದಾಗ, ಅದರ ಭಾಗವಾಗಿ ನಿಲ್ಲಬೇಕೆಂದು ನಾನು ಚಿತ್ರತಂಡ ಸೇರಿಕೊಂಡೆ. ಪ್ರೇಮ್ ಒಬ್ಬ ಪ್ಯಾಷನೇಟ್ ಫಿಲಂ ಮೇಕರ್. ಅವರು ತೆಗೆದಿರುವ ಪ್ರತಿ ದೃಶ್ಯವೂ ಇಷ್ಟವಾಗುತ್ತದೆ. ಈ ಹಿಂದೆ ಪ್ರೇಮ್ ಸಾಕಷ್ಟು ಸದಭಿರುಚಿಯ ಸಾಹಿತ್ಯ ಬರೆದು, ತಂದೆ, ತಾಯಿ, ಮಕ್ಕಳು ಒಂದಾಗುವಂತೆ ಮಾಡಿದ್ದುಂಟು. ಆದರೆ, ಒಂದು ತಪ್ಪು ನಡೆದಿದೆ. ಅದನ್ನು ಅವರು ಸರಿಪಡಿಸಿಕೊಂಡಿದ್ದಾರೆ. ನಮ್ಮವರನ್ನು ಕಡೆಗಣಿಸದೆ ಕೈಹಿಡಿಯಬೇಕು’ ಎಂದು ಪ್ರೇಮ್ ಬೆಂಬಲಕ್ಕೆ ನಿಂತರು. ‘ಕಮ್ ಆನ್ ಕಾಳಿ’ ಹಾಡು ಕನ್ನಡ ಸೇರಿ ತೆಲುಗು, ಹಿಂದಿ, ಮಲಯಾಳಂ, ತಮಿಳಿನಲ್ಲಿ ರಿಲೀಸ್ ಆಗಿದೆ.

ಪವರ್‌´ಫುಲ್ ಪಾತ್ರದಲ್ಲಿ ಕಿಚ್ಚ

‘‘ಕೆಡಿ’ ಚಿತ್ರದಲ್ಲಿ ಒಂದು ಪವರ್‌ಫುಲ್ ಪಾತ್ರವಿದೆ’ ಎನ್ನುವ ನಿರ್ದೇಶಕ ಪ್ರೇಮ್, ‘ಸುದೀಪ್ ನನಗೆ ಅಣ್ಣನಿದ್ದಂತೆ. ಏನೇ ಕಷ್ಟ ಬಂದರೂ, ಬೆಂಬಲಕ್ಕೆ ನಿಲ್ಲುತ್ತಾರೆ. ಇಲ್ಲಿ ಅವರ ‘ಕಾಲ ಭೈರವ’ ಪಾತ್ರ ತುಂಬಾ ವೈಲೆಂಟ್ ಆಗಿದೆ. ಅವರ ಪಾತ್ರ ಎಷ್ಟು ಪವರ್‌ಫುಲ್​ ಆಗಿದೆ ಎಂಬುದನ್ನು ತೆರೆ ಮೇಲೆ ನೋಡಿದರೆ ಚಂದ’ ಎಂದು ಮಾಹಿತಿ ನೀಡಿದರು. ಧ್ರುವ, ರೀಷ್ಮಾ, ಸುದೀಪ್ ಜತೆ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಪ್ರಮುಖ ಪಾತ್ರದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ, ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ.

ಕ್ಷಮೆ ಕೋರಿದ ಸಂಜಯ್ ದತ್

‘ಸರ್ಸೆ.. ’ ಹಾಡಿನ ವಿವಾದದಿಂದಾಗಿ ನಟ ಸಂಜಯ್ ದತ್ ಮುಖಭಂಗ ಅನುಭವಿಸಿದ್ದರು. ಇದೀಗ ಈ ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ, ರಾಷ್ಟ್ರೀಯ ಮಹಿಳಾ ಆಯೋಗದ ಬಳಿ ಕ್ಷಮೆ ಕೋರಿದ್ದಾರೆ. ಹಾಗೆಯೇ, ಬುಡಕಟ್ಟು ಜನಾಂಗದ 50 ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ನೆರವು ನೀಡುವಂತೆ ಮಹಿಳಾ ಆಯೋಗ ಸೂಚಿಸಿದ್ದು, ಅದಕ್ಕೆ ಸಂಜಯ್ ದತ್ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net