ಬೇರೆ ಚಿತ್ರರಂಗಗಳಿಗೆ ಹೋಲಿಸಿದರೆ, ಕನ್ನಡ ಚಿತ್ರರಂಗದಲ್ಲಿ ಸ್ಟಾರ್ಗಳ ಸಂಖ್ಯೆ ತೀರಾ ಕಡಿಮೆ. ಇರುವುದೇ ಮೂರು ಮತ್ತೊಬ್ಬ ಸ್ಟಾರ್. ಅವರ ನಡುವೆ ವೈಮನಸ್ಸಿರಲಿ, ಇಲ್ಲದಿರಲಿ.. ಆದರೆ, ಅವರ ಫ್ಯಾನ್ಗಳ ನಡುವೆ ಯಾವಾಗಲೂ ಹಗ್ಗಜಗ್ಗಾಟ ಇದ್ದಿದ್ದೇ. ಈ ಫ್ಯಾನ್ವಾರ್ಗಳಿಂದಾಗಿ ಆ ನಟರ ಚಿತ್ರಗಳಿಗೆ ಭಾರೀ ಹೊಡೆತ ಬೀಳುತ್ತಿದೆ. ಬುಕ್ಮೈಶೋ, ಐಎಂಡಿಬಿಗಳಲ್ಲಿ ನೆಗೆಟಿವ್ ರೇಟಿಂಗ್ ಹಾಗೂ ಫೇಸ್ಬುಕ್, ಇನ್ಸ್ಟಾ, ಯೂಟ್ಯೂಬ್ಗಳಲ್ಲಿ ನೆಗೆಟಿವ್ ರಿವ್ಯೂಗಳ ಮೂಲಕ ಮತ್ತೊಬ್ಬ ಸ್ಟಾರ್ ಚಿತ್ರವನ್ನು ಸೋಲಿಸುವ ಹುನ್ನಾರಗಳೂ ನಡೆಯುತ್ತಿರುತ್ತವೆ. ಇದು ಸಾಮಾನ್ಯ ಪ್ರೇಕ್ಷಕರ ಮೇಲೆ ಪರಿಣಾಮ ಬೀರುವ ಜತೆಗೆ ಚಿತ್ರತಂಡ, ಅದರಲ್ಲೂ ನಿರ್ಮಾಪಕರ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತಿತ್ತು. ಹಾಗಂತ ಈ ನೆಗೆಟಿವ್ ಬೆಳವಣಿಗೆ ಕನ್ನಡ ಚಿತ್ರರಂಗಕ್ಕಷ್ಟೇ ಸೀಮಿತ ಅಂತಲ್ಲ. ಬದಲಾಗಿ, ಎಲ್ಲ ಚಿತ್ರರಂಗಗಳಲ್ಲೂ ಸಾಮಾನ್ಯವಾಗಿದೆ. ಕೆಲ ತಿಂಗಳ ಹಿಂದೆ ಮಲಯಾಳಂ ಚಿತ್ರರಂಗ ಸಿನಿಮಾ ರಿಲೀಸ್ ಆದ ಮೊದಲ ಮೂರು ದಿನಗಳ ಕಾಲ ಆನ್ಲೈನ್ನಲ್ಲಿ ವಿಮರ್ಶೆ ಹಂಚಿಕೊಳ್ಳಬಾರದೆಂದು ತಡೆಯಾಜ್ಞೆ ತರಲು ಪ್ರಯತ್ನಿಸಿದ್ದರು. ಅದರಲ್ಲಿ ಯಶಸ್ಸು ಗಳಿಸಲಿಲ್ಲ. ಆದರೆ, ಈ ಸೋಷಿಯಲ್ ಮೀಡಿಯಾ ಫ್ಯಾನ್ವಾರ್ ಸಮಸ್ಯೆಗೆ ಕನ್ನಡ ಚಿತ್ರರಂಗ ಒಂದೊಳ್ಳೆ ಪರಿಹಾರ ಹುಡುಕಿಕೊಂಡಿದೆ. ಹೌದು, ಜಾಲತಾಣಗಳಲ್ಲಿ ರೇಟಿಂಗ್ ಮತ್ತು ರಿವ್ಯೂಗಳನ್ನು ರ್ನಿಬಂಧಿಸುವ ಮೂಲಕ ಅಭಿಮಾನಿಗಳ ಆನ್ಲೈನ್ ರಗಳೆಗೆ ಬ್ರೇಕ್ ಹಾಕುವ ಯತ್ನ ಸದ್ದಿಲ್ಲದೇ ಸಾಗಿದೆ.