'ಸರ್ಸೆ ಸರ್ಸೆ' ಹಾಡಿನ ವಿರುದ್ಧ ಸಿಡಿದೆದ್ದ ಮಹಿಳೆಯರು! ಸೆನ್ಸಾರ್‌ ಮಂಡಳಿ, ಮಹಿಳಾ ಆಯೋಗಕ್ಕೆ ದೂರು ದಾಖಲು

ಕೆಡಿ ಚಿತ್ರದ 'ಸರ್ಸೆ ಸರ್ಸೆ' ಹಾಡು
ಕೆಡಿ ಚಿತ್ರದ 'ಸರ್ಸೆ ಸರ್ಸೆ' ಹಾಡು
Published on

ಪ್ರಮುಖ ಮುಖ್ಯಾಂಶಗಳು

  • ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಚಿತ್ರ 'ಕೆಡಿ: ದಿ ಡೆವಿಲ್​'
  • ನೆಟ್ಟಿಗರ ವ್ಯಾಪಕ ಆಕ್ರೋಶ ಬೆನ್ನಲ್ಲೇ ಸಾಂಗ್​ ಡಿಲೀಟ್​
  • ಹಾಡಿನಲ್ಲಿ ಕೆಟ್ಟ ಅರ್ಥ, ಅಶ್ಲೀಲತೆ ತುಂಬಿದೆ ಎಂಬ ಆರೋಪಗಳು
  • ಮಹಿಳಾ ಸಂಘಟನೆಗಳಿಂದ ರಾಜ್ಯ ಆಯೋಗಗಳಿಗೆ ದೂರು ದಾಖಲು
ಬೆಂಗಳೂರು: ಧ್ರುವ ಸರ್ಜಾ ಅಭಿನಯದ ಹಾಗೂ ಪ್ರೇಮ್​ ನಿರ್ದೇಶನದ ಬಹುನಿರೀಕ್ಷಿತ ಕನ್ನಡದ ಪ್ಯಾನ್ ಇಂಡಿಯಾ 'ಕೆಡಿ: ದಿ ಡೆವಿಲ್' ಚಿತ್ರತಂಡ ಇದೀಗ ದೊಡ್ಡ ಸಂಕಷ್ಟದಲ್ಲಿ ಸಿಲುಕಿದೆ. ಇತ್ತೀಚೆಗಷ್ಟೇ, ರಿಲೀಸ್ ಆದ ವಿಶೇಷ ಹಾಡೊಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಛೀಮಾರಿ ಹಾಗೂ ವಿವಾದಕ್ಕೆ ಗುರಿಯಾಗಿದೆ. ಕೆಟ್ಟ ಅರ್ಥವನ್ನು ನೀಡುತ್ತಿರುವ ಈ ಹಾಡು, ತೀರ ಅಸಭ್ಯವಾಗಿದೆ ಎಂಬ ನೆಟ್ಟಿಗರ ಖಂಡನೆ ಬೆನ್ನಲ್ಲೇ ಇದೀಗ ಚಿತ್ರಕ್ಕೆ ಕಾನೂನು ಸಂಕಷ್ಟ ಹಾಗೂ ಮಹಿಳಾ ಸಂಘಟನೆಗಳಿಂದ ದೂರು ದಾಖಲಾಗಿವೆ.
ಬಾಲಿವುಡ್​ನ ಹಾಟ್​ ಬೆಡಗಿ ನೋರಾ ಫತೇಹಿ ಅವರು ಮಸ್ತ್​ ಹೆಜ್ಜೆ ಹಾಕಿರುವ 'ಸರ್ಸೆ ಸರ್ಸೆ...' ಹಾಡು ಬಿಡುಗಡೆಗೊಂಡ ಕೆಲವೇ ಕೆಲವು ನಿಮಿಷಗಳಲ್ಲಿ ಭಾರೀ ವಿವಾದಕ್ಕೆ ಸಿಲುಕಿದೆ. ನೋರಾ ಮತ್ತು ಹಿರಿಯ ನಟ ಸಂಜಯ್ ದತ್​ ಭರ್ಜರಿ ಸ್ಟೆಪ್​ ಹಾಕಿರುವ ಈ ಸಾಂಗ್​ನ ದೃಶ್ಯಗಳ ವಿಚಾರದಲ್ಲಿ ಯಾವುದೇ ತಕರಾರು ಕೇಳಿಬರದಿದ್ದರೂ, ಹಾಡಿನ ಸಾಹಿತ್ಯದಲ್ಲಿ ಬಳಸಲಾದ ಪದಗಳು ಕೆಟ್ಟ ಅರ್ಥಗಳನ್ನು ನೀಡಿವೆ. ಇದು ಕೇಳುಗರಿಗೆ ತೀರ ಮುಜುಗರ ಉಂಟುಮಾಡಿದೆ ಎಂಬ ಸಾಲು ಸಾಲು ಆರೋಪಗಳು ವ್ಯಕ್ತವಾದ ಹಿನ್ನೆಲೆ ಹಿಂದಿ ವರ್ಶನ್​ ಹಾಡಿಗೆ ಬ್ರೇಕ್​ ಹಾಕಲಾಗಿದೆ.
ಪ್ರಸ್ತುತ, ಯೂಟ್ಯೂಬ್​ನಿಂದ ಹಿಂದಿ ಹಾಡನ್ನು ಡಿಲೀಟ್​ ಮಾಡಲಾಗಿದ್ದು, ಕನ್ನಡ ಹಾಡನ್ನು ಕೂಡ ತೆಗೆದುಹಾಕಬೇಕು ಎಂಬ ಕೂಗಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಈ ವಿವಾದಕ್ಕೆ ಸಂಬಂಧಿಸಿದಂತೆ ಸೂಚನೆ ನೀಡಿದ್ದೇ ತಡ ಚಿತ್ರದ ನಿರ್ಮಾಪಕರು ಯೂಟ್ಯೂಬ್ ಮತ್ತು ಇತರ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ಹಿಂದಿ ಹಾಡನ್ನು ಅಧಿಕೃತವಾಗಿ ತೆಗೆದುಹಾಕಿದ್ದಾರೆ. ಈ ಮಧ್ಯೆ, ಕನ್ನಡ ವರ್ಶನ್​ ಇನ್ನೂ ಡಿಲೀಟ್​ ಆಗದೆ ಇರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ.
ಸಿನಿಮಾದಲ್ಲಿ 'ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ' ಎಂದು ಆರಂಭವಾಗುವ ಹೀನ ಅಭಿರುಚಿಯ ಹಾಡು ಬಿಡುಗಡೆಯಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರ ಮೇಲೂ ಇದು ಕೆಟ್ಟ ಪರಿಣಾಮ ಬೀರಲಿದೆ. ಇದು ಒಳಗೊಂಡಿರುವ ಸಾಹಿತ್ಯವು ಅತ್ಯಂತ ಕೀಳು ಮಟ್ಟದಲ್ಲಿದೆ. ಶೃಂಗಾರಕ್ಕೂ ಅಶ್ಲೀಲಕ್ಕೂ ತುಂಬ ವ್ಯತ್ಯಾಸವಿದೆ. ಈ ಹಾಡು ಸಂಪೂರ್ಣ ಅಶ್ಲೀಲತೆಯಿಂದ ಕೂಡಿದೆ. ಈಗಾಗಲೇ ಹಲವು ರೀತಿಯಲ್ಲಿ ಹೆಣ್ಣುಮಕ್ಕಳ ಮೇಲೆ ಆಕ್ರಮಣ ಆಗುತ್ತಿದೆ. ಇಂತಹ ಹಾಡುಗಳು ಹೆಣ್ಣನ್ನು ಕಾಮದ ಗೊಂಬೆ ಎಂಬಂತೆ ಬಿಂಬಿಸಿ, ಹೆಂಗಸರನ್ನು ಆ ರೀತಿ ನೋಡಲು ಪ್ರಚೋದಿಸುತ್ತದೆ ಎಂಬ ಆರೋಪಗಳು ಮಹಿಳಾ ಸಂಘಟನೆಗಳು ನೀಡಿರುವ ದೂರಿನಲ್ಲಿ ಉಲ್ಲೇಖಗೊಂಡಿದೆ.
ಕರ್ನಾಟಕ ಸರಕಾರವು 16 ವರ್ಷದ ಒಳಗಿನ ಮಕ್ಕಳಿಗೆ ಮೊಬೈಲ್ ಅನ್ನು ನಿಷೇಧಿಸುವಲ್ಲಿ ತೋರಿದ ಕಾಳಜಿಯನ್ನು ಈಗಲೂ ತೋರಿಸಬೇಕಾಗಿದೆ. ಇಂತಹ ಹಾಡುಗಳು ನಮ್ಮ ಯುವಜನತೆಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಸೆನ್ಸಾರ್ ಮಂಡಳಿಯು ತೋರಿರುವ ನಿರ್ಲಕ್ಷ್ಯ, ಬೇಜವಾಬ್ದಾರಿಗಳಿಂದಾಗಿ ಇಂತಹ ಹಾಡುಗಳು ಎಗ್ಗಿಲ್ಲದೆ ಬಿಡುಗಡೆಯಾಗುತ್ತಿವೆ. ಸೆನ್ಸಾರ್‌ ಮಂಡಳಿ ಇಂಥಾ ಸಾಂಗ್​ನ್ನು ಹೇಗೆ ಒಪ್ಪಿತು ಎಂಬುದೇ ಆಶ್ಚರ್ಯವಾಗುತ್ತಿದೆ ಎಂದಿವೆ ಸಂಘಟನೆಗಳು.
ಮಹಿಳೆಯನ್ನು ಅವಮಾನಿಸುವ ಇಂಥ ಹಾಡುಗಳನ್ನು ಯಾವ ಕಾರಣಕ್ಕೂ ನಾವು ಒಪ್ಪುವುದಿಲ್ಲ. ಈ ಹಾಡನ್ನು ಸಂಪೂರ್ಣವಾಗಿ ಕೈಬಿಡಬೇಕು. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಾವು ಲೇಖಕಿಯರು, ಮಹಿಳಾ ಪರ ಮನಸ್ಸುಗಳಿರುವ ಎಲ್ಲರೂ ಆಗ್ರಹಿಸುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಕರ್ನಾಟಕ ಲೇಖಕಿಯರ ಸಂಘ, ಜನವಾದಿ ಮಹಿಳಾ ಸಂಘಟನೆಗಳು ಸೆನ್ಸಾರ್‌ ಮಂಡಳಿ, ನಿರ್ಮಾಪಕರ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net