‘ಕರಿಕಾಡ’ದಲ್ಲಿ ಆ್ಯಕ್ಷನ್ ಅಬ್ಬರವಿದೆ, ಆದರೆ ಬರವಣಿಗೆ ಇನ್ನಷ್ಟು ಗಟ್ಟಿಯಾಗಿರಬೇಕಿತ್ತು. ರೆಟ್ರೋ ಕಥೆಯಾದರೂ, ಕೇವಲ ಶಿಕಾರಿ, ಹೊಡೆದಾಟ, ಗೆಳೆಯರ ನಡುವಿನ ಹರಟೆಗೆ ಸೀಮಿತವಾಗಿದೆ. ದ್ವಿತೀಯಾರ್ಧಕ್ಕೆ ಬಂದಾಗ ಕಾಡ-ಕನಕ ಪ್ರೇಮಪ್ರಸಂಗ ತೆರೆದುಕೊಂಡು, ನಂತರ ಗಂಭೀರ ಹಾದಿಗೆ ಸಾಗುತ್ತದೆ. ನಿರ್ದೇಶಕ ವಿನಾಯಕ್ ಚಿತ್ರಕಥೆಯತ್ತ ಇನ್ನಷ್ಟು ಗಮನಹರಿಸಬೇಕಿತ್ತು ಅನಿಸುತ್ತದೆ. ಆ್ಯಕ್ಷನ್‌ನಲ್ಲೂ ಗುಂಡಿನ ಸದ್ದು ಹೆಚ್ಚಿದೆ. ಅದರ ಬದಲು ಎರಡು ಬಣಗಳ ನಡುವಿನ ಮುಷ್ಠಿಯುದ್ಧಕ್ಕೆ ಒತ್ತು ನೀಡಿದ್ದರೆ ಇನ್ನು ಹೆಚ್ಚು ರೋಚಕ ಅನಿಸುತ್ತಿತ್ತು. ಹಳೆಯ ಕಾಲದ ಕಥೆಗೆ ಪೂರಕವಾಗಿ ಸೆಟ್ ಹಾಗೂ ಹಳ್ಳಿ ವಾತಾವರಣ ಗಮನ ಸೆಳೆಯುತ್ತದೆ. ಕಾಡ ನಟರಾಜ್ ಆ್ಯಕ್ಷನ್ ಅಬ್ಬರದಲ್ಲಿ ಮಿಂಚುತ್ತಾರೆ. ನಿರೀಕ್ಷಾ ಶೆಟ್ಟಿ ಪಾತ್ರ ಅಷ್ಟೇನೂ ನಿರೀಕ್ಷೆ ಹೆಚ್ಚಿಸಿಲ್ಲ. ಯಶ್, ಬಲ ರಾಜವಾಡಿ, ವಿಜಯ್ ಚೆಂಡೂರ್ ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕಾಡು, ಆ್ಯಕ್ಷನ್, ರಾತ್ರಿ ಶಿಕಾರಿ ದೃಶ್ಯಗಳನ್ನು ಛಾಯಾಗ್ರಾಹಕ ಜೀವನ್ ಗೌಡ ಕ್ಯಾಮರಾದಲ್ಲಿ ಮನೋಜ್ಞವಾಗಿ ಸೆರೆಹಿಡಿದಿದ್ದಾರೆ. ತಾಂತ್ರಿಕವಾಗಿ ಸಿನಿಮಾ ಚೆನ್ನಾಗಿ ಮೂಡಿಬಂದಿದೆ.