98th Oscars - ಕಾಂತಾರ ಮಹಾವತಾರ; ಆಸ್ಕರ್ ಅಂಗಳದಲ್ಲಿ ಕನ್ನಡದ ಚಿತ್ರಗಳು

ಕಾಂತಾರ ಮಹಾವತಾರ
ಕಾಂತಾರ ಮಹಾವತಾರ
Published on
98th Oscars - ಭಾರತದಿಂದ 98ನೇ ಆಸ್ಕರ್​ ಪ್ರಶಸ್ತಿಗೆ "ಹೋಮ್​ಬೌಂಡ್​' ಚಿತ್ರವನ್ನು ಅಧಿಕೃತವಾಗಿ ಆಯ್ಕೆ ಮಾಡಿ ಕಳುಹಿಸಿರುವುದು ಗೊತ್ತಿದೆ. ಅದರ ಬೆನ್ನಲ್ಲೇ ಮರಾಠಿ ಸಿನಿಮಾ "ದಶಾವತಾರ್​' ತಂಡ ಕೂಡ ಕಂಟೆನ್ಷನ್​ ಲಿಸ್ಟ್​ ಮೂಲಕ ಆಸ್ಕರ್​ ಅಂಗಳಕ್ಕೆ ಜಿಗಿದಿದೆ. ಆ ಮೂಲಕ ಆಸ್ಕರ್​ ಹೊಸ್ತಿಲಲ್ಲಿ ನಿಂತಿರುವ ಮೊದಲ ಮರಾಠಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಕನ್ನಡದ ಎರಡು ಚಿತ್ರಗಳು ಸಹ ಆಸ್ಕರ್​ ಕದ ತಟ್ಟುತ್ತಿದ್ದು, ಹೊಸ ದಾಖಲೆ ಬರೆದಿವೆ. ಹೊಂಬಾಳೆ ಫಿಲಂಸ್​ ಬ್ಯಾನರ್​ನಲ್ಲಿ ವಿಜಯ್​ ಕಿರಗಂದೂರ್​ ನಿರ್ಮಾಣದ ರಿಷಬ್​ ಶೆಟ್ಟಿ ನಟಿಸಿ, ನಿರ್ದೇಶಿಸಿರುವ "ಕಾಂತಾರ ಅಧ್ಯಾಯ 1' ಮತ್ತು ಅಶ್ವಿನ್​ ಕುಮಾರ್​ ನಿರ್ದೇಶನದ ಆ್ಯನಿಮೇಟೆಡ್​ ಸಿನಿಮಾ "ಮಹಾವತಾರ್​ ನರಸಿಂಹ' ಪ್ರಮುಖ ವಿಭಾಗಗಳ ಸಾಮಾನ್ಯ ಪ್ರವೇಶ ಪಟ್ಟಿಯಲ್ಲಿ ಅಧಿಕೃತವಾಗಿ ಸ್ಥಾನ ಪಡೆದಿವೆ.
1800ರಿಂದ 2000 ಚಿತ್ರಗಳು ಆಸ್ಕರ್​ಗೆ ಸಲ್ಲಿಸಲಾಗಿತ್ತು. ಅವುಗಳಲ್ಲಿ 317 ಚಿತ್ರಗಳು ಪ್ರಶಸ್ತಿಯಲ್ಲಿ ಸ್ಪರ್ಧಿಸಲು ಅರ್ಹ ಎಂದು ಆಯ್ಕೆ ಮಾಡಿಕೊಳ್ಳಲಾಗಿದ್ದು, ಅದರಲ್ಲಿ 201 ಚಿತ್ರಗಳು "ಅತ್ಯುತ್ತಮ ಸಿನಿಮಾ' ವಿಭಾಗದಲ್ಲಿ ಸ್ಪರ್ಧಿಸಲು ಹೆಚ್ಚುವರಿ ಅರ್ಹತಾ ಅವಶ್ಯಕತೆಗಳನ್ನು ಪೂರೈಸಿವೆ ಎನ್ನಲಾಗಿದೆ. ಅದರಲ್ಲಿ ಒಟ್ಟು ಐದು ಭಾರತೀಯ ಸಿನಿಮಾಗಳಿದ್ದು, "ಕಾಂತಾರ ಅಧ್ಯಾಯ 1', "ಮಹಾವತಾರ್​ ನರಸಿಂಹ' ಜತೆಗೆ ಅನುಪಮ್​ ಖೇರ್​ ನಟಿಸಿ, ನಿರ್ದೇಶಿಸಿರುವ ಬಾಲಿವುಡ್​ ಸಿನಿಮಾ "ತಾನ್ವಿ ದ ಗ್ರೇಟ್​', ರಾಧಿಕಾ ಆಪ್ಟೆ ನಟನೆಯ "ಮಿಡ್​ನೈಟ್​ ಸಿಸ್ಟರ್​', ತಮಿಳು ಸಿನಿಮಾ "ದ ಟೂರಿಸ್ಟ್​ ಫ್ಯಾಮಿಲಿ' ಕೂಡ ಸೇರಿವೆ. ಅವುಗಳಲ್ಲಿ "ಕಾಂತಾರ' ಅತ್ಯುತ್ತಮ ಸಿನಿಮಾ, ನಟ, ನಟಿ, ನಿರ್ಮಾಣ, ನಿರ್ದೇಶನ, ಕಥೆ, ನಿರ್ಮಾಣ ವಿನ್ಯಾಸ ಸೇರಿ ಹಲವು ವಿಭಾಗಗಳಲ್ಲಿ ಸ್ಪರ್ಧಿಸಲಿದ್ದು, "ಮಹಾವತಾರ್​ ನರಸಿಂಹ' ಅತ್ಯುತ್ತಮ ಸಿನಿಮಾ, ಅತ್ಯುತ್ತಮ ಆ್ಯನಿಮೇಟೆಡ್​ ಸಿನಿಮಾ ವಿಭಾಗಗಳಲ್ಲಿ ಸ್ಪರ್ಧಿಸಲಿದೆ. ಆ ಮೂಲಕ ಆ್ಯನಿಮೇಟೆಡ್​ ಸಿನಿಮಾ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಮೊದಲ ಭಾರತೀಯ ಚಿತ್ರ ಎಂಬ ದಾಖಲೆ ಬರೆದಿದೆ. ಕಳೆದ ವರ್ಷ "ಕಾಂತಾರ 1' ಮತ್ತು "ಮಹಾವತಾರ್​ ನರಸಿಂಹ' ಎರಡೂ ಚಿತ್ರಗಳಿಂದ ಹೊಂಬಾಳೆ ಬರೋಬ್ಬರಿ 1200 ಕೋಟಿ ರೂ.ಗೂ ಹೆಚ್ಚು ಹಣ ಕಲೆಕ್ಷನ್​ ಮಾಡಿಕೊಂಡಿತ್ತು. ಇದೀಗ ಆಸ್ಕರ್​ ಮೂಲಕ ಮತ್ತೊಂದು ದಾಖಲೆ ಬರೆಯಲು ಸಿದ್ಧತೆ ನಡೆಸಿದೆ.
ಕೋಟ್​:
"ಕಾಂತಾರ'ದಂತಹ ನಮ್ಮ ನಾಡಿನ ನಂಬಿಕೆ, ಪರಂಪರೆ ಮತ್ತು ಮಣ್ಣಿನ ಕಥೆ ಜಾಗತಿಕ ವೇದಿಕೆಯಲ್ಲಿ ತನ್ನ ಧ್ವನಿ ಕಂಡುಕೊಳ್ಳುತ್ತಿರುವುದು ಅತ್ಯಂತ ಹೆಮ್ಮೆಯ ಕ್ಷಣ. ನೆಲಮೂಲದ ಕಥೆಗಳು ಗಡಿಗಳನ್ನು ಮಿರಿ ಜಗತ್ತಿನ ಮನಸ್ಸು ತಲುಪುತ್ತವೆ ಎಂಬ ನಂಬಿಕೆ ಈಗ ಮತ್ತಷ್ಟು ಬಲವಾಗಿದೆ. ಹಾಗೇ "ಮಹಾವತಾರ್​ ನರಸಿಂಹ'ದಂತೆ ಭಾರತೀಯ ಪೌರಾಣಿಕ ಕಥೆಗಳಿಗೆ ವಿಶ್ವವ್ಯಾಪಿ ಜನರನ್ನು ಸೆಳೆಯುವ ಶಕ್ತಿಯಿದೆ. ಈ ಗೌರವ ನಮ್ಮನ್ನು ಇನ್ನೂ ದೊಡ್ಡ ಕನಸುಗಳನ್ನು ಕಾಣಲು, ಭಾರತದ ಸಾಂಸತಿಕ ವೈಭವವನ್ನು ಜಾಗತಿಕ ವೇದಿಕೆಗೆ ತರುವಂತೆ ಪ್ರೇರೇಪಿಸುತ್ತದೆ.
- ವಿಜಯ್​ ಕಿರಗಂದೂರ್​, ನಿರ್ಮಾಪಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net