ಬೆಂಗಳೂರು: ನಟ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ‘ಗೋಲ್ಡನ್ ಮೂವೀಸ್’ ಮೂಲಕ ನಿರ್ಮಾಪಕರಾಗಿರುವ ವಿಚಾರ ಗೊತ್ತೇ ಇದೆ. ಅವರ ಬ್ಯಾನರಡಿಯಲ್ಲಿ ‘ಪಿಚ್ಚರ್’ ಎಂಬ ಸಿನಿಮಾ ನಿರ್ಮಿಸುತಿದ್ದು, ಇದು ಕನ್ನಡ ಮತ್ತು ತುಳು ಭಾಷೆಯಲ್ಲಿ ಏಕಕಾಲದಲ್ಲಿ ಮೂಡಿಬರುತ್ತಿರುವುದು ವಿಶೇಷ. ಸಂದೀಪ್ ಬೆದ್ರ ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ನಿತ್ಯ ಪ್ರಕಾಶ್ ಬಂಟ್ವಾಳ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಇದೀಗ ರಿಲೀಸ್‌ಗೆ ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಮೊದಲ ಹಾಡನ್ನು ಕನ್ನಡ ಮತ್ತು ತುಳು ಭಾಷೆಯಲ್ಲಿ ರಿಲೀಸ್ ಮಾಡಲಾಗಿದೆ. ಕನ್ನಡದಲ್ಲಿ ‘ತಕ ತಕ ಕುಣಿಸಕ’ ಎಂಬ ಟೈಟಲ್‌ನಲ್ಲಿ ಹಾಡು ಮೂಡಿಬಂದಿದ್ದು, ಚೇತನ್‌ಕುಮಾರ್ ರಚಿಸಿದ್ದಾರೆ. ಇನ್ನು ತುಳುವಿನಲ್ಲಿ ‘ತಕ ತಕ ನಲಿಪುಗ’ ಎಂದಿದ್ದು ಅನೂಪ್ ಭಂಡಾರಿ ರಚಿಸಿದ್ದಾರೆ. ಸ್ಯಾಮುಯೆಲ್ ಅಭಿ ಸಂಗೀತ ಸಂಯೋಜಿಸಿದ್ದು, ಅದ್ವಿಕ್, ಏಂಜೆಲ್ ಮೇರಿ ಜೋಸೆಫ್, ಶಮೀರ್ ಮುಡಿಪು ಧ್ವನಿಯಾಗಿದ್ದಾರೆ. ಮದುವೆ ಮನೆಯಲ್ಲಿ ಮೂಡಿಬರುವ ಈ ಹಾಡಿನಲ್ಲಿ ನಿತ್ಯ ಪ್ರಕಾಶ್ ಸೇರಿ ಹಲವು ಕಲಾವಿದರು ಕುಣಿದು ಕುಪ್ಪಳಿಸಿದ್ದಾರೆ. ಇದೊಂದು ಕೌಟುಂಬಿಕ, ಕಾಮಿಡಿ ಕಥಾ ಹೊಂದಿದ್ದು, ಮಂಗಳೂರು, ಬಂಟ್ವಾಳ, ಕಾಶ್ಮೀರ ಸೇರಿ ಹಲವು ಕಡೆ ಶೂಟಿಂಗ್ ನಡೆಸಲಾಗಿದೆ. ಸದ್ಯ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ. ಇಲ್ಲಿ ನಿತ್ಯಪ್ರಕಾಶ್‌ಗೆ ಅಮೃತಾ ಸುದು ಜೋಡಿಯಾಗಿದ್ದಾರೆ. ತುಳು ಕಲಾವಿದರಾದ ದೇವದಾಸ್ ಕಾಪಿಕಾಡ್, ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜು ವಾಮಂಜೂರು, ಸಾಯಿಕೃಷ್ಣ, ವಜ್ರಧೀರ್ ಜೈನ್, ಸದಾಶಿವ ಅಮೀನ್ ಕಲಾಬಳಗದಲ್ಲಿದ್ದಾರೆ.