Wild Tiger Safari - ಈಗಾಗಲೇ ಎ. ಹರ್ಷ, ನಂದ ಕಿಶೋರ್, ಪವನ್ ಒಡೆಯರ್ ಸೇರಿ ಕೆಲ ನಿರ್ದೇಶಕರು ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. "ಭಜರಂಗಿ ಭಾಯಿಜಾನ್' ಮೂಲಕ ರಾಕ್ಲೈನ್ ವೆಂಕಟೇಶ್ ಬಾಲಿವುಡ್ ಚಿತ್ರದ ನಿರ್ಮಾಣದಲ್ಲೂ ಕೈಜೋಡಿಸಿದ್ದಾರೆ. ಅದರ ಬೆನ್ನಲ್ಲೇ ಇದೀಗ ಕೆಲ ಕನ್ನಡಿಗರು ತಮ್ಮದೇ ತಂಡ ಕಟ್ಟಿಕೊಂಡು ಬಾಲಿವುಡ್ ಸಾರಿ ಹೊರಟಿದ್ದಾರೆ. ಹೌದು, "ಕೆಜಿಎಫ್' ಸಂಭಾಷಣೆಕಾರ, "ದಿಲ್ಮಾರ್'ಗೆ ಆ್ಯಕ್ಷನ್-ಕಟ್ ಹೇಳಿದ್ದ ಚಂದ್ರಮೌಳಿ "ವೈಲ್ಡ್ ಟೈಗರ್ ಸಫಾರಿ' ಮೂಲಕ ಬಾಲಿವುಡ್ ಸಾರಿಗೆ ಹೊರಟಿದ್ದಾರೆ. ಅವರಿಗೆ "ಕರಾವಳಿ' ನಿರ್ಮಾಪಕ ವಿನೋದ್ ಕುಮಾರ್, ಪ್ರಸನ್ನ ಕುಮಾರ್ ಮತ್ತು ಗುರುದತ್ ಗಾಣಿಗ ಜತೆಯಾಗಿದ್ದು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ಮೂಡಿಬರಲಿದೆ. ಶಿಥಿಲ್ ಪೂಜಾರಿ, ಡಾನ್ಸರ್, ನಟ ಧಮೇರ್ಶ್ ಮಾಸ್ಟರ್, ಸುಶಾಂತ್ ಪೂಜಾರಿ, ಕನ್ನಡದ "ಶೇಕ್ ಇಟ್ ಪುಷ್ಪವತಿ' ಖ್ಯಾತಿಯ ನಿಮಿಕಾ ರತ್ನಾಕರ್, ಅವಿನಾಶ್, ಅಚ್ಯುತ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೆ ದುಬೈನ ಪ್ರತಿಷ್ಠಿತ ಗ್ಲೋಬಲ್ ವಿಲೇಜ್ನಲ್ಲಿ ಹೆಸರಾಂತ ನೃತ್ಯನಿರ್ದೇಶಕ ರೆಮೋ ಡಿಸೋಜಾ ಟೀಸರ್ ಚಿತ್ರದ ಬಿಡುಗಡೆ ಮಾಡಿದ್ದಾರೆ. ನಿರ್ದೇಶಕ ಚಂದ್ರಮೌಳಿ, "ಗ್ಲೋಬಲ್ ವಿಲೇಜ್ಗೆ ವಿವಿಧ ದೇಶಗಳ ಸಾವಿರಾರು ಜನ ಬರುತ್ತಾರೆ. ಶಾರುಖ್ ಖಾನ್ ಅವರಂತಹ ಸ್ಟಾರ್ಗಳು ಪಾರ್ಮ್ರ್ ಮಾಡಿರುವ ವೇದಿಕೆ ಅದು. ಅಲ್ಲಿ ಟೀಸರ್ ರಿಲೀಸ್ ಆದ ಕನ್ನಡದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆ "ವೈಲ್ಡ್ ಟೈಗರ್ ಸಫಾರಿ'ಗೆ ದೊರೆಯುತ್ತದೆ. ಟೀಸರ್ಗೆ ಕನ್ನಡ, ಹಿಂದಿ ಎರಡೂ ಭಾಷೆಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಇನ್ನೊಂದು ಹಾಡು ಸೇರಿ ಒಟ್ಟು ಆರು ದಿನಗಳ ಚಿತ್ರೀಕರಣ ಬಾಕಿ ಇದ್ದು, ಇದೇ ಏಪ್ರಿಲ್ ಒಳಗೆ ಬಿಡುಗಡೆ ಮಾಡುವ ಪ್ಲ್ಯಾನ್ ಇದೆ' ಎಂದು ಮಾಹಿತಿ ನೀಡುತ್ತಾರೆ.