ಈ ಪತ್ರ ಹಲವು ನಿರ್ಮಾಪಕರ ಅಸಮಾಧಾನಕ್ಕೆ ಕಾರಣವಾಗಿದೆ. ಹಿರಿಯ ನಿರ್ಮಾಪಕ "ಚಿಂಗಾರಿ' ಮಹದೇವ್, ನಾಗೇಶ್ ಕುಮಾರ್ ಯುಎಸ್, ಜೆಜೆ ಶ್ರೀನಿವಾಸ್, ಸಿದ್ದೇಗೌಡ ಸೇರಿ ಹಲವರು ಈ ಕುರಿತು ಮಂಡಳಿಯ ಗಮನ ಸೆಳೆಯಲು ಯತ್ನಿಸಿದ್ದಾರೆ. ಈ ಬಗ್ಗೆ ಮಹದೇವ್, "ಕನ್ನಡ ನಿರ್ಮಾಪಕರು ಇನ್ನೂ ಆ ದುಸ್ಥಿತಿಗೆ ಇಳಿದಿಲ್ಲ. ಬಡತನ ರೇಖೆಗಿಂತ ಕೆಳಗಿರುವವರು ಸಿನಿಮಾ ನಿರ್ಮಿಸಲು ಸಾಧ್ಯವೇ? ಇದುವರೆಗೂ ಯಾವ ನಿರ್ಮಾಪಕನೂ ಅರ್ಜಿ ಹಾಕಿಲ್ಲ. ಈ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದು, ಹೀಗೆ ಮಾಡಬಾರದಿತ್ತು ಎಂದಿದ್ದೇವೆ. ಸಿನಿಮಾ ಮಾಡಲು ಬಂದು ಶೇಕಡ 90ರಷ್ಟು ಜನ ದುಡ್ಡು, ಆಸ್ತಿ ಕಳೆದುಕೊಂಡಿರಬಹುದು. ಆದಾಯ ತೆರಿಗೆ, ಸೇವಾ ತೆರಿಗೆ ಎಲ್ಲವನ್ನೂ ಕಟ್ಟುತ್ತಿರುವವರು ಸರ್ಕಾರ ಬಡವರಿಗಾಗಿ ಮಾಡಿರುವ ಯೋಜನೆಯಲ್ಲಿ ನಿವೇಶನ ಕೇಳುವಷ್ಟು ದುಸ್ಥಿತಿಗೆ ಬಂದಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗೇ, "ಹಲವು ವರ್ಷಗಳ ಹಿಂದೆಯೇ ಹೈದರಾಬಾದ್ನ ಬಂಜಾರಾ ಹಿಲ್ಸ್ನಲ್ಲಿ ತೆಲುಗು ನಿರ್ಮಾಪಕರು ಸರ್ಕಾರದಿಂದ ಜಾಗ ಪಡೆದು ಲೇಔಟ್ ಮಾಡಿದ್ದಾರೆ. ನಮ್ಮಲ್ಲೂ ಹಾಗೆ ಮಾಡಬಹುದಿತ್ತು, ಕೆಲವರ ಸ್ವಹಿತಾಸಕ್ತಿಯಿಂದ ಆ ಕೆಲಸ ಆಗುತ್ತಿಲ್ಲ. ಸಿನಿಮಾರಂಗದಲ್ಲಿ ಒಡಕಿರುವ ಕಾರಣ ಸರ್ಕಾರವೂ ಗಮನ ಹರಿಸುತ್ತಿಲ್ಲ. ಇದೀಗ ಈ ಪತ್ರದಿಂದ ಜನ ಚಿತ್ರರಂಗವನ್ನು, ನಿರ್ಮಾಪಕರನ್ನು ನೋಡುವ ದೃಷ್ಟಿಕೋನ ಬದಲಾಗುತ್ತಿದೆ' ಎನ್ನುತ್ತಾರೆ.