ಬೆಂಗಳೂರು: ದುನಿಯಾ ವಿಜಯ್, ರಚಿತಾ ರಾಮ್ ಅಭಿನಯದ, ‘ಗುರು ಶಿಷ್ಯರು’ ಖ್ಯಾತಿಯ ಜಡೇಶ್ ಕೆ. ಹಂಪಿ ನಿರ್ದೇಶನದ ‘ಲ್ಯಾಂಡ್‌ಲಾರ್ಡ್’ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇದೇ 23ರಂದು ರಾಜ್ಯಾದ್ಯಂತ ಸಿನಿಮಾ ತೆರೆ ಕಾಣಲಿದೆ. ಈಗಾಗಲೇ ಟೀಸರ್, ಹಾಡಿನ ಮೂಲಕ ಸದ್ದು ಮಾಡಿರುವ ಚಿತ್ರತಂಡ, ಇದೀಗ ನಾಯಕ ವಿಜಯ್ ಹುಟ್ಟುಹಬ್ಬದ ಅಂಗವಾಗಿ ಟ್ರೇಲರ್ ರಿಲೀಸ್ ಮಾಡಿದೆ. ವಿಶೇಷ ಅಂದರೆ ವಿಜಯ್ ಅಭಿಮಾನಿಗಳೇ ‘ಲ್ಯಾಂಡ್‌ಲಾರ್ಡ್’ ಟ್ರೇಲರ್ ರಿಲೀಸ್ ಮಾಡಿದರು. ಎರಡೂವರೆ ನಿಮಿಷದ ಟ್ರೇಲರ್ ಮಾಸ್ ಆಗಿದ್ದು, ಆಳುವ ರೂಲರ್ ರಾಜ್ ಬಿ. ಶೆಟ್ಟಿ ಮತ್ತು ಅಳಿದು ಉಳಿದ ರಾಚಯ್ಯ ವಿಜಯ್ ನಡುವಿನ ಸಂಘರ್ಷದ ಸುತ್ತ ಸಾಗುತ್ತದೆ. ಸಾಹಸ ದೃಶ್ಯಗಳು ಗಮನ ಸೆಳೆಯುತ್ತವೆ. ದುನಿಯಾ ವಿಜಯ್, ರಚಿತಾ ರಾಮ್ ಜತೆ ರಾಜ್ ಬಿ. ಶೆಟ್ಟಿ, ರಾಕೇಶ್ ಅಡಿಗ, ರಿತನ್ಯಾ ವಿಜಯ್, ಶಿಶಿರ್ ಬೈಕಾಡಿ, ಭಾವನಾ ರಾವ್ ಸೇರಿ ದೊಡ್ಡ ಕಲಾಬಳಗವೇ ಚಿತ್ರದಲ್ಲಿದೆ. ಭಾವನಾ ರಾವ್, ‘ಮೊದಲ ದಿನದ ಶೂಟಿಂಗ್‌ನಲ್ಲಿಯೇ ಇದು ಒಳ್ಳೆಯ ಹಾಗೂ ದೊಡ್ಡಮಟ್ಟದ ಸಿನಿಮಾ ಆಗಲಿದ್ದು, ನಮ್ಮ ಮೂಲ ಸಂಸ್ಕೃತಿಯನ್ನು ಎತ್ತಿಹಿಡಿಯಲಿದೆ ಎಂದು ಗೊತ್ತಾಗಿತ್ತು. ಈ ಕಥೆಯಲ್ಲಿ ಸಂಸ್ಕೃತಿಯ ಬೇರುಗಳಿವೆ. ಇಲ್ಲಿ ನನ್ನದು ಪದ್ಮಾ ಎಂಬ ಪಾತ್ರ. ಸಿನಿಮಾ ರಿಲೀಸ್ ಆದ ಬಳಿಕ ಈ ಪಾತ್ರ ನೋಡಿ ಅನೇಕರು ಇಂತಹ ಪಾತ್ರ ಬರೆಯಲು ಮುಂದಾಗುತ್ತಾರೆ’ ಎಂದು ಖುಷಿ ಹಂಚಿಕೊಂಡರು.