ಕಾಳೇಗೌಡ (ಬಲರಾಜವಾಡಿ) ಮತ್ತವನ ಮಗ ರುದ್ರ (ಅರುಣ್) ಅಟ್ಟಹಾಸದಿಂದ ನಲುಗುವ ಹಳ್ಳಿಗರನ್ನು, ಈ ದುಷ್ಟರ ಕಪಿಮುಷ್ಠಿಯಿಂದ ದೇವ (ಜೈರಾಜ್) ಹೇಗೆ ರಸುತ್ತಾನೆ ಎಂಬುದೇ "ದೈವ' ಒನ್ಲೈನ್. ಅದರಲ್ಲಿ ಆ್ಯಕ್ಷನ್, ಗ್ರಾಮೀಣ ಸೊಗಡು, ಮರ್ಡರ್ ಮಿಸ್ಟರಿ, ಸಸ್ಪೆನ್ಸ್ ಥ್ರಿಲ್ಲರ್, ರೊಮ್ಯಾನ್ಸ್... ಹೀಗೆ ಹಲವು ವಿಷಯಗಳ ಜತೆ ದೈವಿಕ ಅಂಶಗಳನ್ನು ಸೇರಿಸಿ, ಕಮರ್ಷಿಯಲ್ ಸಿನಿಮಾ ಆಗಿ ನಿರೂಪಿಸಿದ್ದಾರೆ ಜೈರಾಜ್. ರಿಷಬ್ ಶೆಟ್ಟಿ "ಕಾಂತಾರ' ಸರಣಿಯಲ್ಲಿ ಕರಾವಳಿ ದೈವಗಳ ಕುರಿತ ಕಥೆ ಹೇಳಿದ್ದರು. "ದೈವ'ದಲ್ಲಿ ಯುವ ನಿರ್ದೇಶಕ ಜೈರಾಜ್ ಮಂಡ್ಯ ಭಾಗದ ಜೋಗಿ ಪರಂಪರೆ ಕುರಿತ ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿಯೇ ಈ ಚಿತ್ರದಲ್ಲಿ ಗ್ರಾಮೀಣ ಆಚರಣೆಗಳು, ನಂಬಿಕೆಗಳ ಕುರಿತ ಹಲವು ಅಂಶಗಳಿವೆ. ಅದ್ಭುತ ಅನ್ನಿಸದಿದ್ದರೂ ಜೈರಾಜ್ ಚೊಚ್ಚಲ ಬಾರಿಗೆ ಒಂದೊಳ್ಳೆ ಪ್ರಯತ್ನ ಮಾಡಿದ್ದಾರೆ. ನಿರ್ದೇಶಕನ ಜವಾಬ್ದಾರಿ ನಿಭಾಯಿಸುವುದರ ಜತೆಗೆ ಜೈರಾಜ್ ಎರಡು ಲುಕ್ಗಳಲ್ಲಿ ಮಿಂಚಿದ್ದಾರೆ. ನೀತು ರಾಯ್, ಸುರಭಿ, ಬಲರಾಜವಾಡಿ, ನಿಶ್ಚಿತಾ, ಮಂಜುರಾಜ್ ಸೂರ್ಯ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.