‘ಜಗನ್ನಾಥ ದಾಸರು’ ಚರಿತ್ರೆಗೆ ಮೆಚ್ಚುಗೆ : ಎರಡನೇ ವಾರ ಪ್ರದರ್ಶನ ಮುಂದುವರಿಸಿದ ಭಕ್ತಿಪ್ರಧಾನ ಸಿನಿಮಾ

ಜಗನ್ನಾಥ ದಾಸರು ಚಿತ್ರದ ಪೋಸ್ಟರ್​
ಜಗನ್ನಾಥ ದಾಸರು ಚಿತ್ರದ ಪೋಸ್ಟರ್​
Published on

ಪ್ರಮುಖ ಮುಖ್ಯಾಂಶಗಳು

  • ಜಗನ್ನಾಥ ದಾಸರು ಭಾಗ 2ಗೆ ಉತ್ತಮ ರೆಸ್ಪಾನ್ಸ್
  • ಎರಡನೇ ವಾರಕ್ಕೆ ಕಾಲಿಟ್ಟ ಭಕ್ತಿ ಪ್ರಧಾನ ಸಿನಿಮಾ,
  • ವಿದೇಶದಲ್ಲೂ ರಿಲೀಸ್ ಗೆ ಸಿದ್ಧತೆ ನಡೆಸಿದ ಚಿತ್ರತಂಡ
ಬೆಂಗಳೂರು: ಕನ್ನಡದಲ್ಲಿ ದಾಸಶ್ರೇಷ್ಠರ ಚರಿತ್ರೆಯನ್ನು ತೆರೆ ಮೇಲೆ ತಂದ ಖ್ಯಾತಿ ನಿರ್ದೇಶಕ ಮಧುಸೂದನ್ ಹವಾಲ್ದಾರ್‌ಗೆ ಸಲ್ಲುತ್ತದೆ. ಈಗಾಗಲೇ ಅವರು ‘ಶ್ರೀ ವಿಜಯದಾಸರು’, ‘ಶ್ರೀಮಹಿಪತಿ ದಾಸರು’, ‘ಶ್ರೀಪ್ರಸನ್ನ ವೆಂಕಟದಾಸರು’ ಚರಿತ್ರೆಗಳಿಗೆ ಸಿನಿಮಾ ರೂಪ ನೀಡಿದ್ದಾರೆ. ಇನ್ನು 2021ರಲ್ಲಿ ನಿರ್ದೇಶಿಸಿದ್ದ ‘ಶ್ರೀ ಜಗನ್ನಾಥದಾಸರು’ ಕುರಿತ ಬಯೋಪಿಕ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ‘ಜಗನ್ನಾಥ ದಾಸರು ಭಾಗ 2’ ನಿರ್ದೇಶಿಸಿದ್ದು, ಕಳೆದ ಜ. 30ರಂದು ಸಿನಿಮಾ ರಿಲೀಸ್ ಆಗಿತ್ತು. ಪ್ರೇಕ್ಷಕರಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ನಿರ್ದೇಶಕ ಬಗ್ಗೆ ಮಧಸೂದನ್, ‘ಸಂಸ್ಕೃತಿ ಪಸರಿಸುವ ಹಾಗೂ ಪುಣ್ಯಪುರುಷರ ಜೀವನವನ್ನು ತೆರೆ ಮೇಲೆ ತೋರಿಸುವ ಮಹತ್ವಾಕಾಂಕ್ಷೆಯಿಂದಾಗಿ ದಾಸರ ಕುರಿತು ಸಿನಿಮಾಗಳನ್ನು ಮಾಡಿದೆ. ಈ ಹಿಂದೆ ಪುರಂದರದಾಸರು ಹಾಗೂ ಕನಕದಾಸರ ಕುರಿತ ಸಿನಿಮಾಗಳು ಬಂದಿದ್ದವು. ಆದರೆ ಇನ್ನುಳಿದ ದಾಸವರೇಣ್ಯರ ಚರಿತ್ರೆ ಬಹುತೇಕರಿಗೆ ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರಯೋಗಾರ್ಥವಾಗಿ ‘ಜಗನ್ನಾಥದಾಸರು’ ಚಿತ್ರವನ್ನು ಮೊದಲು ಮಾಡಿದೆವು. ಅದಕ್ಕೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಯಿತು. ಇದೀಗ ಸೀಕ್ವೆಲ್ ತೆರೆ ಮೇಲೆ ತಂದಿದ್ದೇವೆ. ಮೊದಲ ಭಾಗದಲ್ಲಿ ಜಗನ್ನಾಥದಾಸರಿಗೆ ‘ಜಗನ್ನಾಥ ವಿಠ್ಠಲ’ ಅಂಕಿತನಾಮ ಪಡೆಯುವವರೆಗೆ ತೋರಿಸಿದ್ದೆವು. ಎರಡನೇ ಭಾಗದಲ್ಲಿ ಅಂಕಿತನಾಮ ಬಂದ ಬಳಿಕ ಪಂಡರಾಪುರ ಮತ್ತು ಮಂತ್ರಾಲಯದಲ್ಲಿ ನಡೆಯುವ ಘಟನೆಗಳು ಹಾಗೂ ಕೊನೆಗೆ ತವರೂರು ಬ್ಯಾಗವಾಟ್‌ಗೆ ಬರುವ ಸನ್ನಿವೇಶಗಳನ್ನು ತೋರಿಸಿದ್ದೇವೆ. ಇನ್ನು ಮೂರನೇ ಭಾಗದಲ್ಲಿ ಜಗನ್ನಾಥದಾಸರು ಮಹಾಕಾವ್ಯ‘ಹರಿಕಥಾಮೃತಸಾರ’ ರಚಿಸುವ ಬಗ್ಗೆ ಸೇರಿ ಒಟ್ಟು ಈ ಚಿತ್ರವನ್ನು ಐದು ಭಾಗದಲ್ಲಿ ತರಲಿದ್ದೇವೆ’ ಎಂದು ಮಾಹಿತಿ ನೀಡಿದರು. ಇದೇ 21ಕ್ಕೆ ಸಿನಿಮಾ ವಿದೇಶದಲ್ಲಿ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಜೆ.ಎಂ.ಪ್ರಹ್ಲಾದ್ ಚಿತ್ರಕಥೆ, ಸಂಭಾಷಣೆ ಬರೆದಿದ್ದು, ವಿಷ್ಣುತೀರ್ಥ ಜೋಶಿ, ನಿಶ್ಚಿತಾ ಶೆಟ್ಟಿ, ಪುಷ್ಕರ್ ದೇಶಪಾಂಡೆ, ಸಚಿನ್ ಪುರೋಹಿತ್, ವಸಂತ್, ಗುರುರಾಜ್, ನಾರಾಯಣ್ ಕುಲಕರ್ಣಿ, ವಿಜಯ್ ಭಾಸ್ಕರ್, ಶ್ರೀಲತಾ ನಟಿಸಿದ್ದಾರೆ.
ಮುಂದಿನ ಯೋಜನೆಗಳು
ಈಗಾಗಲೇ ಹಲವು ದಾಸರಚರಿತ್ರೆಯನ್ನು ತೆರೆ ಮೇಲೆ ತಂದಿರುವ ಮಧುಸೂದನ್ ಮತ್ತಷ್ಟು ದಾಸರ ಜೀವನ ಕುರಿತ ಸಿನಿಮಾ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ವ್ಯಾಸರು- ಪುರಂದರ-ಕನಕದಾಸರು, ಗೋಪಾಲದಾಸರು, ರಘುತ್ತೋಮ ತೀರ್ಥರು, ವಾಧೀಂದ್ರ ತೀರ್ಥರು, ರಾಯರ ಪಟ್ಟಾಭಿಷೇಕ ಮತ್ತು ಜಗನ್ನಾಥ ದಾಸರ ಉಳಿದ ಮೂರು ಭಾಗಗಳು ಸೇರಿ ನಾಲ್ಕೈದು ವರ್ಷಗಳಲ್ಲಿ ಇನ್ನಷ್ಟು ಚಿತ್ರಗಳನ್ನು ತೆರೆ ಮೇಲೆ ತರಲು ಮಧುಸೂದನ್ ಸಿದ್ಧತೆ ನಡೆಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net