ಬರಲಿದೆ ಇಮ್ಮಡಿ ಪುಲಕೇಶಿ ಚರಿತ್ರೆ : ಕೆ.ಎಂ.ಚೈತನ್ಯ ನಿರ್ದೇಶನದಲ್ಲಿ ಐತಿಹಾಸಿಕ ‘ಎರೆಯ’ ಚಿತ್ರ ಘೋಷಣೆ

ಇಮ್ಮಡಿ ಪುಲಕೇಶಿ
ಇಮ್ಮಡಿ ಪುಲಕೇಶಿ
Published on

ಪ್ರಮುಖ ಮುಖ್ಯಾಂಶಗಳು

  • ಇಮ್ಮಡಿ ಪುಲಕೇಶಿಯ ಸಾಹಸಗಾಥೆ ತೆರೆ ಮೇಲೆ
  • ಕನ್ನಡ ಸೇರಿ ವಿವಿಧ ಭಾಷೆಗಳಲ್ಲಿ ಮೂಡಿಬರಲಿರುವ ಚಿತ್ರ
  • ಇದೇ ವರ್ಷಾಂತ್ಯಕ್ಕೆ ಚಿತ್ರಕ್ಕೆ ಮುಹೂರ್ತ
ಬೆಂಗಳೂರು: ಡಾ. ರಾಜಕುಮಾರ್ ಅಭಿನಯಿಸಿದ್ದ ಚಾಲುಕ್ಯ ರಾಜವಂಶದ ದೊರೆ ಇಮ್ಮಡಿ ಪುಲಕೇಶಿ ಜೀವನಾಧಾರಿತ ಚಿತ್ರ 1967ರಲ್ಲಿ ತೆರೆಕಂಡಿತ್ತು. ಇದೀಗ ಕನ್ನಡದಲ್ಲಿ 59 ವರ್ಷಗಳ ನಂತರ ಮತ್ತೊಮ್ಮೆ ಇಮ್ಮಡಿ ಪುಲಕೇಶಿ ಕುರಿತ ಸಿನಿಮಾ ಬರಲು ಸಿದ್ಧವಾಗುತ್ತಿದೆ. ಅದಕ್ಕೆ ‘ಆ ದಿನಗಳು’ ಕೆ.ಎಂ.ಚೈತನ್ಯ ಆ್ಯಕ್ಷನ್-ಕಟ್ ಹೇಳುತ್ತಿದ್ದು, ‘ಎರೆಯ’ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ಪುಲಕೇಶಿಗೆ ಚಿಕ್ಕವನಿರುವಾಗ ‘ಎರೆಯ’ ಎಂದು ಕರೆಯಲಾಗುತ್ತಿತ್ತು. ಹಾಗಾಗಿ, ಚಿತ್ರತಂಡ ಅದೇ ಹೆಸರನ್ನು ಶೀರ್ಷಿಕೆಯನ್ನಾಗಿಸಿದೆ. ಪುಲಕೇಶಿಯ ಜೀವನ, ಸಾಹಸ, ಆಡಳಿತ ಚಾತುರ್ಯವನ್ನು ಇಲ್ಲಿ ಚಿತ್ರಿಸಲಾಗುತ್ತದೆ. ಹಿರಿಯ ಸಂಶೋಧಕ ಡಾ. ಭೂಷಣ್ ಶಾನುಭೋಗ್ ಪುಸ್ತಕವನ್ನು ಆಧರಿಸಿ ಚಿತ್ರಕಥೆ ಸಿದ್ಧಪಡಿಸಲಾಗಿದ್ದು, ಮುಂಬೈ ಮೂಲದ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಲಿದೆ. ಕನ್ನಡ, ಹಿಂದಿ ಸೇರಿ ವಿವಿಧ ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರಲಿದೆ. ಸದ್ಯ ಕಲಾವಿದರು, ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಈ ಚಿತ್ರದಲ್ಲಿ ದಕ್ಷಿಣ ಹಾಗೂ ಉತ್ತರ ಭಾರತದ ಕಲಾವಿದರ ಸಂಗಮವಾಗಲಿದೆ. ಶೀಘ್ರವೇ ತಾರಾಬಳಗ ಘೋಷಿಸಲು ತಂಡ ಯೋಜಿಸಿದೆ. ಇನ್ನು, ಕನ್ನಡದ ‘ಬಲರಾಮನ ದಿನಗಳು’ ಸಿನಿಮಾ ರಿಲೀಸ್‌ಗೆ ಸಿದ್ಧತೆ ನಡೆಸುತ್ತಿರುವಾಗಲೇ ನಿರ್ದೇಶಕ ಕೆ.ಎಂ.ಚೈತ್ಯನ್ಯ ಹೊಸ ಸಿನಿಮಾ ಘೋಷಿಸಿದ್ದಾರೆ.
"

ಇಡೀ ಭಾರತವನ್ನು ಆಳಿದ ದೊರೆಯ ಬಗ್ಗೆ ಸಿನಿಮಾ ಮಾಡಬೇಕು ಎಂಬುದು ನಿರ್ಮಾಣ ಸಂಸ್ಥೆಯ ನಿರ್ಧಾರವಾಗಿತ್ತು. ಕಳೆದ ಹತ್ತು ವರ್ಷಗಳಿಂದ ನಾನು ಆ ಸಂಸ್ಥೆಯ ಜತೆ ಒಡನಾಟದಲ್ಲಿದ್ದೆ. ನನ್ನ ನಿರ್ದೇಶನದ ಸಿನಿಮಾಗಳನ್ನು ಅವರು ನೋಡಿದ್ದು, ಜತೆಗೆ ಗಿರೀಶ್ ಕಾರ್ನಾಡ್ ಅವರಂತಹ ರಂಗಕರ್ಮಿಗಳ ಜತೆ ಕೆಲಸ ಮಾಡಿರುವ ಕಾರಣ ಈ ಚಿತ್ರದ ಜವಾಬ್ದಾರಿ ನನಗೆ ಕೊಟ್ಟರು. ಸದ್ಯ ಪ್ರಿ-ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿವೆ. ಈ ವರ್ಷದಂತ್ಯಕ್ಕೆ ಚಿತ್ರೀಕರಣ ಆರಂಭವಾಗಲಿದೆ. ಕನ್ನಡ ಸೇರಿ ಪರಭಾಷೆಯ ನಟರ ಜತೆ ಮಾತುಕತೆ ನಡೆಸಿದ್ದೇವೆ. ಕಲಾಬಳಗ ಆಯ್ಕೆ ಮಾಡಬೇಕಷ್ಟೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net