

ಬೆಂಗಳೂರು:
ನಿರ್ದೇಶಕ ಸಿಂಪಲ್ ಸುನಿ, ಹೆಸರಿನಲ್ಲಿ "ಸಿಂಪಲ್' ಅಂತಿದ್ದರೂ ಅವರು ನಿರ್ದೇಶಿಸುವ ಸಿನಿಮಾಗಳಲ್ಲಿನ ವಿಷಯ ಕಾಂಪ್ಲಿಕೇಟೆಡ್ ಆಗಿರುತ್ತವೆ. ಅದಕ್ಕೆ "ಸಿಂಪಲ್ಲಾಗ್ ಒಂದ್ ಲವ್ಸ್ಟೋರಿ'ಯಿಂದ ಹಿಡಿದು "ಬಹುಪರಾಕ್', "ಚಮಕ್', "ಅವತಾರ ಪುರುಷ', "ಗತವೈಭವ'ದಂತಹ ಚಿತ್ರಗಳೇ ಉತ್ತಮ ಉದಾಹರಣೆ. ಇಂತಹ ಸುನಿ "ಲಂಬೋದರ 2.0' ಮೂಲಕ ಮತ್ತೊಂದು ಸವಾಲಿನ ಕಥೆಯೊಂದಿಗೆ ವಾಪಸ್ಸಾಗಿದ್ದಾರೆ. ಇದೊಂದು ಹೈ ಕಾನ್ಸೆಪ್ಟ್ ಸೋಷಿಯಲ್ ಸೈಂಟಿಫಿಕ್ ಥ್ರಿಲ್ಲರ್ ಜಾನರ್ ಚಿತ್ರವಾಗಿದ್ದು ಉದ್ಯಮಿ ಅನಿಲ್ ಶೆಟ್ಟಿ ನಾಯಕನಾಗಿ, ಬಾಲಿವುಡ್ನ ಸಾಚಿ ಬಿಂದ್ರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಾಗೂ ಕುಣಾಲ್ ಕಪೂರ್, ಮೇನಾ ಗಾಂವ್ಕರ್ ಜತೆಗೆ ಹ್ಯೂಮನಾಯ್ಡ್ ರೋಬಾಟ್ ಜಿಯಾ ಮತ್ತು ಎಐನಿಂದ (ಕೃತಕ ಬುದ್ಧಿಮತ್ತೆ) ಸೃಷ್ಟಿಯಾದ ಶ್ರೀಕೃಷ್ಣನೂ ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಅದ್ಧೂರಿಯಾಗಿ ಸಿನಿಮಾ ಮೂಡಿಬರುತ್ತಿದೆ. ಬೆಂಗಳೂರಿನ ಹಿನ್ನೆಲೆಯಲ್ಲಿ ಸಾಗುವ "ಲಂಬೋದರ 2.0' ಕಥೆ ಇಂದಿನ ಆನ್ಲೈನ್ ಬದುಕಿನ ಸಂಕೀರ್ಣ ಮುಖಗಳನ್ನು ಅನಾವರಣಗೊಳಿಸುವ ಕಥಾಹಂದರ ಹೊಂದಿದೆ. ಸದಾ ಸ್ಕ್ರೀನ್ನಲ್ಲಿ ಮುಳುಗಿರುವ, ಎಲ್ಲರೊಂದಿಗೆ ಸಂಪರ್ಕದಲ್ಲಿದ್ದರೂ ಒಂಟಿತನ ಅನುಭವಿಸುವ ಹಾಗೂ ಡಿಜಿಟಲ್ ಕಣ್ಗಾವಲಿನಲ್ಲಿ ಸಿಲುಕಿರುವ ಇವತ್ತಿನ ಡಿಜಿಟಲ್ ಜಗತ್ತು ಹಾಗೂ ಜೀವನದಲ್ಲಿನ ಸಂತೋಷ ಎಷ್ಟು ಮುಖ್ಯ ಎಂಬುದರ ಸುತ್ತ ಕಥೆ ಸಾಗುತ್ತದೆ.
ಸಾಮಾನ್ಯ ಸಿಜಿ ಗ್ರಾಫಿಕ್ಸ್ ತಂತ್ರಜ್ಞಾನವನ್ನು ಬದಿಗೊತ್ತಿ, ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ನೈಜ ಭೌತಿಕ ಹ್ಯೂಮನಾಯ್ಡ್ ರೋಬಾಟ್ ನಟಿಸಿರುವುದು ಈ ಸಿನಿಮಾದ ಹೆಗ್ಗಳಿಕೆ. ಇದೇ 13ರಂದು ಚಿತ್ರ ರಿಲೀಸ್ ಆಗಲಿದ್ದು, ಪ್ರಚಾರದ ಅಂಗವಾಗಿ ಇತ್ತೀಚೆಗಷ್ಟೆ ಚಿತ್ರತಂಡ ಜಿಯಾ ರೋಬಾಟ್ಅನ್ನೂ ಸುದ್ದಿಗೋಷ್ಠಿಗೆ ಕರೆತಂದಿತ್ತು. ವಿಶೇಷ ಅಂದರೆ ಪತ್ರಕರ್ತರು ಕೇಳಿದ ಹಲವು ಪ್ರಶ್ನೆಗಳಿಗೆ ಜಿಯಾ ಉತ್ತರ ನೀಡಿದಳು. ಬೆಂಗಳೂರಿನ ತಂತ್ರಜ್ಞಾನ ಸಂಸ್ಥೆಯಾದ ಮಚಾನಿ ರೋಬಾಟಿಕ್ಸ್ ಈ ಹ್ಯೂಮನಾಯ್ಡ್ ರೋಬಾಟನ್ನು ಅಭಿವೃದ್ಧಿಪಡಿಸಿದ್ದು, ಕೋಪ, ನಗು, ಆಶ್ಚರ್ಯ, ಬೇಸರ ಸೇರಿ ಬರೋಬ್ಬರಿ 100ಕ್ಕೂ ಹೆಚ್ಚು ಬಗೆಯ ಮುಖಭಾವಗಳನ್ನು ಮಾಡುವ ಸಾಮರ್ಥ್ಯ ಇದಕ್ಕಿದೆ. "ಯಾವುದೇ ಡಿಜಿಟಲ್ ಅಥವಾ ಪ್ರಾಸ್ಥೆಟಿಕ್ಸ್ ಮೇಕಪ್ನ ಹಂಗಿಲ್ಲದೇ ಜಿಯಾ ನೇರವಾಗಿ ಚಿತ್ರೀಕರಣದ ಸೆಟ್ನಲ್ಲಿ, ರಿಯಲ್ ಟೈಮ್ನಲ್ಲೇ ಪಾತ್ರ ನಿರ್ವಹಿಸಿರುವುದು ಕೂಡ ಭಾರತೀಯ ಚಿತ್ರರಂಗದ ಮಟ್ಟಿಗೆ ಒಂದು ಮೈಲಿಗಲ್ಲಾಗಿದೆ. ಕೃತಕ ಬುದ್ಧಿಮತ್ತೆ ಮತ್ತು ರೋಬಾಟಿಕ್ಸ್ ತಂತ್ರಜ್ಞಾನವು ನಟನಾ ಕ್ಷೇತ್ರವನ್ನು ಹೇಗೆ ಬದಲಿಸಬಲ್ಲದು ಎಂಬುದಕ್ಕೆ ಈ ಪ್ರಯೋಗ ಸಾಯಾಗಿದೆ' ಎನ್ನುತ್ತಾರೆ ನಿರ್ದೇಶಕ ಸುನಿ.