Alpha Review - ಡ್ರಗ್ಸ್​, ಸುಪಾರಿ ಕಿಲ್ಲರ್​ಗಳ ಅಡ್ಡಾದಲ್ಲಿ ಆಲ್ಫಾ ಆರ್ಭಟ

ಆಲ್ಫಾ
ಆಲ್ಫಾ
Published on
Alpha Review -
ಚಿತ್ರ: ಆಲ್ಫಾ
ನಿರ್ದೇಶನ: ವಿಜಯ್​
ತಾರಾಗಣ: ಹೇಮಂತ್​, ಗೋಪಿಕಾ, ಅಯಾನಾ, ಅಚ್ಯುತ್​ ಕುಮಾರ್​, ಬಾಲು ನಾಗೇಂದ್ರ, ರಮೇಶ್​ ಇಂದಿರಾ, ಕಾರ್ತಿಕ್​ ಮಹೇಶ್​, ರಾಘು ಶಿವಮೊಗ್ಗ ಶಿವಮೊಗ್ಗ ಮತ್ತಿತರರು
ಆತ ಅರ್ಜುನ್​ (ಹೇಮಂತ್​). ತಂದೆ ಇನ್​ಸ್ಪೆಕ್ಟರ್​ ಶಕ್ತಿಪ್ರಸಾದ್​ಗೆ (ಅಚ್ಯುತ್​) ಮಗ ಐಪಿಎಸ್​ ಅಧಿಕಾರಿ ಆಗಬೇಕು ಅಂತ ಕನಸು. ಹೊರಗೆ ಹುಡುಗಿ ಜತೆ ಕಂಡ ಮಗನಿಗೆ "ಹುಡುಗಿ ಜತೆ ಓಡಾಡುತ್ತಿದ್ದೀಯಾ, ಖರ್ಚಿಗೆ ಕಾಸು ಬೇಕಾಗುತ್ತೆ. ತಗೋ' ಅಂತ ಜೇಬಲ್ಲಿ ಹಣವಿಡುವಷ್ಟು ನಂಬಿಕೆ. ಮತ್ತೊಂದೆಡೆ ಅಂತಾರಾಷ್ಟ್ರೀಯ ಡ್ರಗ್ಸ್​ ಕಿಂಗ್​ಪಿನ್​ ಬಾಬಿ ಬರೋಬ್ಬರಿ $500 ಕೋಟಿ ಮೌಲ್ಯದ ಡ್ರಗ್ಸ್​ ಸರಬರಾಜು ಮಾಡಲು ವಿದೇಶದಿಂದ ಮಂಗಳೂರು ಬಂದರಿಗೆ ತರಿಸಿರುತ್ತಾನೆ. ಇನ್ನೊಂದೆಡೆ ಮಂಗಲ್​ (ರಮೇಶ್​) ಪುತ್ರರಾದ ಕಾಳಿ (ಬಾಲು) ಮತ್ತು ವಾಜಿ ಜತೆ ಸುಪಾರಿ ಕಿಲ್ಲಿಂಗ್​ನೇ ವೃತ್ತಿ ಮಾಡಿಕೊಂಡಿರುತ್ತಾನೆ. ಐಪಿಎಸ್​ ಅಧಿಕಾರಿಯಾಗಲು ಹೊರಟ ಅರ್ಜುನ್​, ಡ್ರಗ್ಸ್​ ಸಾಮ್ರಾಜ್ಯ ವಿಸ್ತರಿಸಲು ಪಣತೊಟ್ಟ ಬಾಬಿ ಮತ್ತು ಸುಪಾರಿ ಕಿಲ್ಲರ್​ಗಳು ಮುಖಾಮುಖಿಯಾಗುತ್ತಾರೆ. ಅಲ್ಲಿಂದ ಈ ಮೂರು ಗುಂಪಿನ "ಆಲ್ಫಾ'ಗಳ ನಡುವೆ ಇಲಿ- ಬೆಕ್ಕಿನಾಟ ಶುರುವಾಗುತ್ತದೆ. ಕಥೆ ಸಾಗಿದಂತೆ ಹಲವು ಹೊಸ ವಿಷಯಗಳು ತೆರೆದುಕೊಳ್ಳುತ್ತವೆ. ಒಳ್ಳೆಯವರು ಯಾರು? ಕೆಟ್ಟವರು ಯಾರು? ನಮ್ಮವರು ಯಾರು? ವೈರಿಗಳು ಯಾರು? ಅರ್ಜುನ್​ ಡ್ರಗ್ಸ್​ ಮತ್ತು ಸುಪಾರಿ ಕಿಲ್ಲರ್​ಗಳ ಚಕ್ರವ್ಯೂಹ ಭೇಧಿಸುತ್ತಾನಾ? "ಆಲ್ಫಾ' ನೋಡಿ.
"ಗೀತಾ' ಚಿತ್ರದಲ್ಲಿ 1980ರ ದಶಕದ ಕಥೆ, "ಹೊಯ್ಸಳ'ದಲ್ಲಿ ಉತ್ತರ ಕರ್ನಾಟಕದ ಸ್ಟೋರಿ ಹೇಳಿದ್ದ ನಿರ್ದೇಶಕ ವಿಜಯ್​ ನಾಗೇಂದ್ರ ಇದೀಗ "ಆಲ್ಫಾ'ದಲ್ಲಿ ಡ್ರಗ್ಸ್​ ಜಾಲ ಭೇಧಿಸಿದ್ದಾರೆ. ಜತೆಗೆ ಪ್ರೀತಿ, ಗೆಳೆತನ, ಅಪ್ಪ-ಮಗನ ಬಾಂಧವ್ಯ, ಭರ್ಜರಿ ಆ್ಯಕ್ಷನ್​, ಹಾಡು ಕುಣಿತ, ಥ್ರಿಲ್ಲಿಂಗ್​ ಟ್ವಿಸ್ಟ್​ಗಳು... ಹೀಗೆ ಒಂದು ಕಮರ್ಷಿಯಲ್​ ಚಿತ್ರಕ್ಕೆ ಬೇಕಾದ ಎಲ್ಲ ವಿಷಯಗಳೂ ಚಿತ್ರದಲ್ಲಿವೆ. ಅನೂಪ್​ ಸೀಳಿನ್​ ಸಂಗೀತ, ಕಾರ್ತಿಕ್​ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿವೆ. ಮಾಸ್​ ಡೈಲಾಗ್​ಗಳಿಗೆ ಹೆಸರುವಾಸಿಯಾದ ಮಾಸ್ತಿ ಉಪ್ಪಾರಹಳ್ಳಿ ಸಂಭಾಷಣೆ ಚಿತ್ರದ ಹೈಲೈಟ್​ಗಳಲ್ಲೊಂದು. ನಾಯಕ ಹೇಮಂತ್​ ಕುಮಾರ್​ಗೆ ಇದು ಮೊದಲ ಚಿತ್ರ ಅಂತನ್ನಿಸುವುದಿಲ್ಲ. ಅಷ್ಟು ತಯಾರಿಯೊಂದಿಗೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಆ್ಯಕ್ಷನ್​ಗಳಲ್ಲಿ ಅಬ್ಬರಿಸಿರುವ ಅವರು ಸಿಕ್ಸ್​ ಪ್ಯಾಕ್​ನಲ್ಲೂ ಮಿಂಚಿದ್ದಾರೆ. ಗೋಪಿಕಾ ಸುರೇಶ್​ ತಮ್ಮಷ್ಟೇ, ಅಯಾನಾ ಅವರಷ್ಟೇ ಅಂದವಾಗಿ ನಟಿಸಿದ್ದಾರೆ. ಕಾರ್ತಿಕ್​ ಮಹೇಶ್​ ಮತ್ತು ಅಚ್ಯುತ್​ ಪಾತ್ರಗಳು ಪ್ರಮುಖ ಟ್ವಿಸ್ಟ್​ ನೀಡುತ್ತವೆ. ರಮೇಶ್​ ಇಂದಿರ, ಬಾಲು ನಾಗೇಂದ್ರ ಜುಗಲ್​ಬಂದಿ ತೆರೆಯ ಮೇಲೆ ನೋಡುವುದೇ ಚಂದ. ಮೊದಲರ್ಧ ವೇಗವಾಗಿ ಕಥೆ ಹೇಳಿರುವ ನಿರ್ದೇಶಕ ವಿಜಯ್​, ದ್ವೀತಿಯಾರ್ಧದಲ್ಲಿ ನಿಧಾನವೇ ಪ್ರಧಾನ ಎಂದಿರುವಂತಿದೆ. ಆದರೂ, "ಆಲ್ಫಾ' ಒಂದೊಳ್ಳೆ ಆ್ಯಕ್ಷನ್​ ಸಸ್ಪೆನ್ಸ್​ ಥ್ರಿಲ್ಲರ್​ ನೋಡಿದ ಅನುಭವವಂತೂ ನೀಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net