ಎಲ್ಲ ವಯೋಮಾನದವರಲ್ಲೂ ಮೊಬೈಲ್ ಬಳಕೆ ಹೆಚ್ಚಾಗಲು ಕಾರಣ ಕರೊನಾ ಲಾಕ್ಡೌನ್. ಮೊದಲು ದೊಡ್ಡವರ ಬಳಿ ಮಾತ್ರ ಇದ್ದ ಜಂಗಮವಾಣಿಗಳು, ಕರೊನಾ ಸಮಯದಲ್ಲಿ ಆನ್ಲೈನ್ ಕ್ಲಾಸ್ಗಳ ಅಬ್ಬರದಿಂದಾಗಿ ಮನೆ ಮಕ್ಕಳ ಕೈಸೇರಿವೆ. ಈಗ ಕರೊನಾ ಇಲ್ಲದಿದ್ದರೂ, ಲಾಕ್ಡೌನ್ ಆಗದಿದ್ದರೂ ಈ ಮೊಬೈಲ್ ಗೀಳು ಮಾತ್ರ ಮುಂದುವರಿದಿದೆ. ಈ ಗೀಳಿನ ಜೆನ್ಜೀ ಮಕ್ಕಳಿಗೆ ಮಗ್ಗಿ ಪುಸ್ತಕದ ಮಹತ್ವ ಸಾರುವ ಪ್ರಯತ್ನ ನಿರ್ದೇಶಕ ಹರಿವರಾಸನಂ ಅವರದು. ಹಾಗಂತ ಇದು ಮಕ್ಕಳ ಚಿತ್ರವಲ್ಲ. ಜನ ತಮ್ಮ ಜೀವನದಲ್ಲಿ ಯಾವುದನ್ನು ಕಳೆಯಬೇಕು, ಏನನ್ನು ಕೂಡಬೇಕು, ಯಾವುದನ್ನು ಭಾಗಿಸಬೇಕು ಹಾಗೂ ಏನನ್ನು ಗುಣಿಸಬೇಕು ಎಂಬುದರ ಕುರಿತು ಅರಿವು ಮೂಡಿಸುವ ಪ್ರಯತ್ನವಿದು. ಕರೊನಾ ಸಮಯದಲ್ಲಿ ಬಡ ಕುಟುಂಬದ ಕಥೆಯ ಜತೆಗೆ ಶಿಕ್ಷಣ ವ್ಯವಸ್ಥೆಯ ಅವ್ಯವಸ್ಥೆಗಳು, ರಾಜಕಾರಣ, ಸೆಂಟಿಮೆಂಟ್, ಗೆಳೆತನದ ಜತೆಗೆ ಕೆಲ ಟ್ವಿಸ್ಟ್ಗಳು ಚಿತ್ರದಲ್ಲಿದ್ದು, ಕುತೂಹಲ ಮೂಡಿಸುತ್ತವೆ. ರನ್ವಿ, ರಕ್ಷಾ ಗೌಡ, ಮೇಶ್ರೀ, ರಂಜನ್, ಕೃಷ್ಣ ಮಹೇಶ್, ವರ್ಧನ್ ಸೇರಿ ಎಲ್ಲ ಕಲಾವಿದರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಿನಿಮಾ ಒಮ್ಮೆ ನೋಡಲಡ್ಡಿಯಿಲ್ಲ.