Ritvik Mathad Interview - ಗಿಣಿರಾಮನ ಕರಾವಳಿ ಕಹಾನಿ

ರಿತ್ವಿಕ್ ಮಠದ್​
ರಿತ್ವಿಕ್ ಮಠದ್​
Published on
Ritvik Mathad Inetrview - "ಗಿಣಿರಾಮ' ಧಾರಾವಾಹಿ ಖ್ಯಾತಿಯ ನಟ ರಿತ್ವಿಕ್​ ಮಠದ್​ "ಮಾರ್ನಮಿ' ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಫ್ಯಾಮಿಲಿ ಥ್ರಿಲ್ಲರ್​, ಡ್ರಾಮಾ ಚಿತ್ರಕ್ಕೆ ರಿಶಿತ್​ ಶೆಟ್ಟಿ ಚೊಚ್ಚಲ ಬಾರಿಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಇದೊಂದು ಕರಾವಳಿಯ ಕಥೆಯಾಗಿದ್ದು ರಿತ್ವಿಕ್​ಗೆ ಚೈತ್ರಾ ಜೆ. ಆಚಾರ್​ ಜೋಡಿಯಾಗಿದ್ದಾರೆ. ಶುಕ್ರವಾರ (ಫೆ.20) ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದ್ದು, ಇದೇ ಖುಷಿಯಲ್ಲಿ ರಿತ್ವಿಕ್​, "ರಿಶಿತ್​ "ಗಿಣಿರಾಮ' ಧಾರಾವಾಹಿಗೆ ಸಹಾಯಕ ನಿರ್ದೇಶಕರಾಗಿದ್ದರು. ಅವರಿಗೂ ಸಿನಿಮಾ ಆಸಕ್ತಿ ಇತ್ತು. ಅವರ ಫ್ರೆಂಡ್​​ ಒಬ್ಬರು ಹೇಳಿದ ಕಥೆಯಿದು. ಡೆವೆಲಪ್​ ಮಾಡಿ ನಿಶಾಂತ್​ ಅವರಿಗೆ ಹೇಳಿದಾಗ ಅವರು ನಿರ್ಮಿಸಲು ಮುಂದಾದರು. ಟೀಸರ್​, ಟ್ರೇಲರ್​ ನೈಜತೆಗೆ ಹತ್ತಿರವಾಗಿವೆ ಎಂದು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಡೀ ಸಿನಿಮಾ ತುಂಬ ರಿಯಲಿಸ್ಟಿಕ್​ ಆಗಿದೆ. ಪ್ರತಿ ಪಾತ್ರವೂ ಸಹಜವಾಗಿ ಮೂಡಿಬಂದಿದೆ. ಕಥೆಯೇ ಹೀರೋ, ನಾನಲ್ಲ. 157 ನಿಮಿಷಗಳ ಚಿತ್ರವಿಡೀ ಮನರಂಜನೆ ಇದೆ. ಕರಾವಳಿ ಕಥೆಯಾದ ಕಾರಣ ಸಂಭಾಷಣೆ ಅದೇ ನೇಟಿವಿಟಿಯಲ್ಲಿದೆ. ಕೆಲ ತಿಂಗಳ ಕಾಲ ಮಂಗಳೂರಿನಲ್ಲಿದ್ದು, ಅಲ್ಲಿನ ಸ್ಲ್ಯಾಂಗ್​ ಮತ್ತು ಹುಲಿಕುಣಿತ ಕಲಿತು ನಟಿಸಿದ್ದೇನೆ. ಪ್ರೇಕ್ಷಕರಿಗೆ ನಾನು ಮಂಗಳೂರಿನವನಲ್ಲ ಅಂತ ಎಲ್ಲೂ ಅನ್ನಿಸಬಾರದು. ಮಾಸ್​ ಪಾತ್ರಗಳು ಜನರಿಗೆ ಬೇಗ ಕನೆಕ್ಟ್​ ಆಗುತ್ತವೆ. ಕಮರ್ಷಿಯಲ್​ ಶೈಲಿಯಲ್ಲಿ ಮೂಡಿಬರುವ ನೆಲಮೂಲದ ಕಥೆಗಳು ಜನರಿಗೆ ಇಷ್ಟವಾಗುತ್ತವೆ. ಅದೇ ಸಾಲಿಗೆ ಸೇರುವ ಸಿನಿಮಾ "ಮಾರ್ನಮಿ' ಎಂದು ಮಾಹಿತಿ ನೀಡುತ್ತಾರೆ.


ಸಂಖ್ಯೆಗಿಂತ, ಗುಣಮಟ್ಟ ಮುಖ್ಯ

ದಾವಣಗೆರೆ ಮೂಲದ ರಿತ್ವಿಕ್​, ಓದಿದ್ದು ಬೆಳಗಾವಿಯಲ್ಲಿ. "ಬಾಲ್ಯದಿಂದಲೂ ನಟನಾಗುವ ಕನಸಿತ್ತು. ಹೀಗಾಗಿಯೇ ಬಿಎಸ್​ಸಿ ಪದವಿ ಬಳಿಕ ಕೆಲಸಕ್ಕೆಂದು ಮನೆಯಲ್ಲಿ ಸುಳ್ಳು ಹೇಳಿ ಬೆಂಗಳೂರಿಗೆ ಬಂದೆ. ಕೆಲ ವರ್ಷ ಎಂಎನ್​ಸಿಯಲ್ಲಿ ಕೆಲಸ ಮಾಡಿ, ಸ್ವಲ್ಪ ಹಣ ಸೇರಿಸಿಕೊಂಡು, ಕೆಲಸ ಬಿಟ್ಟು ಸಿನಿಮಾ ಅವಕಾಶಕ್ಕಾಗಿ ಓಡಾಡತೊಡಗಿದೆ. ಬೆಂಗಳೂರು ಮತ್ತು ಚಿತ್ರರಂಗ ಎರಡೂ ಹೊಸತು. ಯಾರೂ ಪರಿಚಯವಿರಲಿಲ್ಲ. ಹಾಗೂ ಹೀಗೂ ಜೂನಿಯರ್​ ಆರ್ಟಿಸ್ಟ್​ ಆಗಿ ಕೆಲಸ ಪ್ರಾರಂಭಿಸಿದೆ. ನಂತರ ನಾಯಕನ ಗೆಳೆಯನಾಗಿ ಕೆಲ ಸಿನಿಮಾಗಳಲ್ಲಿ ನಟಿಸಿದೆ. ಕ್ರಮೇಣ ಮತ್ತೆ ಕಲಿಯಬೇಕು ಅಂತನ್ನಿಸಿ ರಂಗಪಯಣ ಸೇರಿದೆ. ಕೆಲ ತಿಂಗಳಲ್ಲೇ "ಅನುರೂಪ' ಧಾರಾವಾಹಿಗೆ ಆಯ್ಕೆಯಾದೆ. ಬಳಿಕ ಎರಡು ಚಿತ್ರಗಳಲ್ಲಿ ನಟಿಸಿದೆ. ಅವು ಕೈಹಿಡಿಯಲಿಲ್ಲ. ನಂತರ "ಗಿಣಿರಾಮ'ದಲ್ಲಿ ಅವಕಾಶ ದೊರೆಯಿತು. ಆದರೆ, ಮನಸ್ಸಿನಲ್ಲಿ ಯಾವಾಗಲೂ ಸಿನಿಮಾ ಮಾಡಬೇಕು ಅಂತ ಅನ್ನಿಸುತ್ತಲೇ ಇತ್ತು. ಸೋಲಿನಿಂದ ಸಾಕಷ್ಟು ವಿಷಯಗಳನ್ನು ಕಲಿತು, ಮಾಡಿರುವ ಚಿತ್ರವಿದು' ಎಂದು ಗೆಲುವಿನ ಭರವಸೆಯಲ್ಲಿ ಹೇಳಿಕೊಳ್ಳುತ್ತಾರೆ ರಿತ್ವಿಕ್​. ಸದ್ಯ ಎರಡು ಕಥೆಗಳನ್ನು ಕೇಳಿರುವ ಅವರು, ಯಾವುದನ್ನೂ ಓಕೆ ಮಾಡಿಲ್ಲವಂತೆ. ಕಾರಣ, "ನನಗೆ ಸಿನಿಮಾಗಳ ಸಂಖ್ಯೆಗಿಂತ, ಕಂಟೆಂಟ್​ ಮತ್ತು ಗುಣಮಟ್ಟ ಮುಖ್ಯ' ಎನ್ನುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net