ತಾತನವರು ಎಲ್ಲ ಪೀಳಿಗೆಗೂ ಸಲ್ಲುತ್ತಾರೆ. ಇಂದಿನ ಪೀಳಿಗೆಯೂ ಅವರ ಸಿನಿಮಾಗಳನ್ನು ಅಷ್ಟೇ ಇಷ್ಟಪಟ್ಟು ನೋಡುತ್ತಾರೆ. "ಬಂಗಾರದ ಮನುಷ್ಯ', "ಭಾಗ್ಯದ ಲಕ್ಷಿ$್ಮ ಬಾರಮ್ಮ' ಸೇರಿ ಹಲವು ಕಂಟೆಂಟ್ ಪ್ರಧಾನ, ಎಲ್ಲ ಕಾಲಕ್ಕೂ ಸಲ್ಲುವ, ಸಂದೇಶವಿರುವ ಸಿನಿಮಾಗಳ ಮೂಲಕ ಜನರಿಗೆ ಹತ್ತಿರವಾದವರು. ಅವರು ಒಂದೇ ಯುಗಕ್ಕೆ ಸೀಮಿತವಲ್ಲ. ಎಲ್ಲ ಯುಗಗಳಿಗೂ ಸಲ್ಲುವವರು. ಜಾಲತಾಣಗಳಲ್ಲಿ ಜೆನ್ಜಿ ಹುಡುಗರೇ ತಾತನ ಹಳೆಯ ಸಂದರ್ಶನ ಶೇರ್ ಮಾಡುತ್ತಿರುತ್ತಾರೆ. ನಾವು ಎಲ್ಲಿಂದ ಬಂದಿದ್ದೇವೆ? ನಾವು ಯಾರು? ನಮ್ಮ ಮೂಲವೇನು? ನಮ್ಮ ಗುರುತನ್ನು ಹೇಗೆ ಮುಂತೆಗೆದುಕೊಂಡು ಹೋಗಬೇಕು? ಎಂದರೆ ತಾತನವರ ಸಿನಿಮಾಗಳನ್ನು ನೋಡಬೇಕು. ನಮ್ಮ ಇತಿಹಾಸ, ಸಿನಿಮಾ ಇತಿಹಾಸ, ಡಾ. ರಾಜಕುಮಾರ್ ಅವರ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಸಂದೇಶವಿರುವ ಚಿತ್ರಗಳು, ಕಪ್ಪು ಬಿಳುಪು ಸಿನಿಮಾಗಳು, ಹೋರಾಟ, ಸಿನಿಮಾ ಕಾರ್ಯಕ್ರಮಗಳು, ಸಾಮಾಜಿಕ ಕೆಲಸಗಳು, ಮ್ಯೂಸಿಕಲ್ ನೈಟ್ಸ್, ಅವರು ಹೋದಲ್ಲಿ ಸೇರುತ್ತಿದ್ದ ಜನಸಾಗರ... ಎಲ್ಲವನ್ನೂ ಇಂದಿನ ಪೀಳಿಗೆ ನೋಡಿದರೆ, ಗೊತ್ತಾಗಿಬಿಡುತ್ತದೆ. ಇವತ್ತು ಅಭಿಮಾನಿಗಳು ಅಭಿಮಾನ ತೋರಿಸುವುದು ಸರಳ. ಆದರೆ, ಅವತ್ತು ಅಭಿಮಾನ ತೋರಿಸುವುದು ಕಷ್ಟವಾಗಿತ್ತು. ಅವರು ಇಂದಿಗೂ ಪ್ರಸ್ತುತ, ಎಂದಿಗೂ ಪ್ರಸ್ತುತ.